ಜ.17: ಸಾಂಸ್ಕೃತಿಕ ಪರ್ಯಾಯ, ಮಂಗಲ

ಉಡುಪಿ: ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ಪ್ರಥಮ ಪರ್ಯಾಯವು ಜ. 17ರಂದು ಸಮಾಪ್ತಿಯಾಗಲಿದ್ದು ಪರ್ಯಾಯ ಮಂಗಲೋತ್ಸವವನ್ನು ಬಹಳ ಅದ್ದೂರಿಯಿಂದ ಆಚರಿಸಲು ನಿಶ್ಚಯಿಸಲಾಗಿದೆ.

ಡಿ. 31ರಿಂದ ಜ. 8ರ ವರೆಗೆ ಎಂಟು ದಿನಗಳ ಮಹಾ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ದೇಶ ವಿದೇಶಗಳ ಹಲವಾರು ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ. ಪ್ರತಿ ದಿನ ರಾತ್ರಿ 8ರಿಂದ 10.30ರ ವರೆಗೆ ಕಾರ್ಯಕ್ರಮ ನಡೆಯಲಿದೆ.

ಡಿ. 31ರಂದು ಪ್ರಸಿದ್ಧ ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕೇರಳದ ಗೋಪಿನಾಥ್‌ ಮುತ್ತುಕಾಡ್‌ ಅವರಿಂದ ಹಾಸ್ಯಮಿಶ್ರಿತ ಸಂಗೀತಮಯ ಅಮೋಘ ಜಾದೂಪ್ರದರ್ಶನ ನಡೆಯಲಿದೆ. ಮೂಲತಃ ಕೇರಳದವರಾದ ಗೋಪಿನಾಥ್‌ ತಂಡದಲ್ಲಿ ಸುಮಾರು 25 ಕಲಾವಿದರಿದ್ದಾರೆ. ಒಂದು ಬಸ್‌, ಎರಡು ಲಾರಿಗಳಲ್ಲಿ ಇವರ ಸಾಮಗ್ರಿಗಳು ಬರುತ್ತವೆ. ದೇಶ-ವಿದೇಶಗಳಲ್ಲಿ ಇವರ ಜಾದೂ ಜನಪ್ರಿಯಗೊಂಡಿದೆ. ಇವರು ಹಿಂದೆ ಉಡುಪಿಯ ಜಾದೂಗಾರ ಪ್ರೊ| ಶಂಕರ್‌ ಅವರು ಉಡುಪಿಯಲ್ಲಿ 1997ರಲ್ಲಿ 'ಗಿಲಿಗಿಲಿ' ಅಂತಾರಾಷ್ಟ್ರೀಯ ಜಾದೂಗಾರರ ಸಮ್ಮೇಳನ ಮಾಡಿದಾಗ ಒಂದು ಕಾರ್ಯಕ್ರಮ ನೀಡಿದ್ದರು. ಇದೀಗ ಪೂರ್ಣಪ್ರಮಾಣದ ಕಾರ್ಯಕ್ರಮ ನೀಡಲಿದ್ದಾರೆ.

ಜ. 1-ಮೈಸೂರು ಮಂಜುನಾಥ್‌ ನೇತೃತ್ವದಲ್ಲಿ ಜರ್ಮನಿಯ ಮಾಥ್ಯೂಸ್‌ ಅವರ ಗಿಟಾರ್‌ ವಾದನ ಸಹಿತ ವಿಶೇಷವಾದ್ಯ ವೈಭವ, ಜ. 3 - ಮಲಯಾಳ ಸಿನೆಮಾರಂಗದ ಖ್ಯಾತ ಹಿನ್ನೆಲೆ ಗಾಯಕ ಶ್ರೀವತ್ಸಂ ಜೆ. ಮೆನೋನ್‌ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ, ಜ. 4 - ಸರೋದ್‌ ಮತ್ತು ಸಂತೂರು ಜುಗಲ್‌ ಬಂದಿ, ಜ. 5 - ಮೃತ್ತಿಕಾ ವೈಭವ ಇದರಲ್ಲಿ ಘಟಂ ವಿದ್ವಾನ್‌ ಸುರೇಶ್‌ ವೈದ್ಯನಾಥನ್‌ ಇವರ ನೇತೃತ್ವದಲ್ಲಿ ಇಸ್ರೇಲಿನ ಸುಪ್ರಸಿದ್ಧ ಫ್ರೆàಮ್‌ ಡ್ರಮ್‌ ವಾದಕ ಜೋಹಾರ್‌ ಫ್ರಾಸ್ಕೋ ಹಾಗೂ ಇನ್ನಿತರ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ. ಜ. 6- ಪ್ರಸಿದ್ಧ ಗಾಯಕ ಅನುಪ್‌ ಜಲೋಟಾ ಅವರ ಭಜನ ಸಂಧ್ಯಾ, ಜ. 7- ಬಹುಭಾಷಾ ನಟಿ ಶೋಭನಾ ಅವರ ಭರತನಾಟ್ಯ, ಜ. 8- ಚೆನ್ನೈಯ ವೀಣಾ ಮಾಂತ್ರಿಕ ರಾಜೇಶ ವೈದ್ಯರಿಂದ ವೀಣಾವಾದನ ಕಾರ್ಯಕ್ರಮ ಜರಗಲಿದೆ ಎಂದು ಶ್ರೀಮಠದ ಪ್ರಕಟನೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com