ಜಾಗತೀಕರಣದಿಂದ ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆ: ಶಿವಶಂಕರಮೂರ್ತಿ

ಕುಂದಾಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಶಿಕ್ಷಣದಲ್ಲಿ ಗುಣಮಟ್ಟದ ಶಿಕ್ಷಣವನ್ನು  ವಿದ್ಯಾರ್ಥಿಗಳಿಗೆ ನೀಡುವಂತಹ ಅಗತ್ಯತೆ  ಇದೆ ಎಂದು ಮಂಗಳೂರು  ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ.ತಿ.ಸಿ ಶಿವಶಂಕರಮೂರ್ತಿ ಅವರು ಅಭಿಪ್ರಾಯಪಟ್ಟರು. 
     ಅವರು ಡಿಸೆಂಬರ್ 16ರಂದು ಇಲ್ಲಿನ ಸುವರ್ಣ ಸಂಭ್ರಮವನ್ನಾಚರಿಸಿಕೊಳ್ಳುತ್ತಿರುವ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಯುಜಿಸಿ ಪ್ರಾಯೋಜಿತ ಇಂಡಿಯನ್ ಇನಸ್ಟಿಟ್ಯೂಟ್ ಆಪ್ ಚಾರ್ಟರ್ಡ್ ಅಕೌಂಟಂಟ್ಸ್  ಆಫ್ ಇಂಡಿಯಾ- ಎಸ್.ಐ.ಆರ್.ಸಿ ಉಡುಪಿ ಶಾಖೆಯ ಸಹಯೋಗದಲ್ಲಿ ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ  ವಿಭಾಗವು ಆಯೋಜಿಸಿದ “ಬಂಡವಾಳ ಮಾರುಕಟ್ಟೆ -ಪ್ರಸಕ್ತ ವಿದ್ಯಾಮಾನಗಳು”  ಎಂಬ ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. 
    1990ರ ನಂತರದ ಜಾಗತೀಕರಣ ಮತ್ತು ಖಾಸಗೀಕರಣದ ನಂತರ ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಆರ್ಥಿಕ ಮತ್ತು ಸಾಮಾಜಿಕ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರ ರೀತಿಯ ಬದಲಾವಣೆಗಳಾಗಿವೆ. ಪೂರಕವಾಗಿ ಭಾರತದಲ್ಲಿ ಉನ್ನತ ಶಿಕ್ಷಣಕ್ಕಾಗಿ 11ನೇ ಮತ್ತು 12ನೇ ಯೋಜನೆಗಳಲ್ಲಿ ವಿವಿಧ ರೀತಿಯ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ ಕೇವಲ ಶೇಕಡಾ 30ರಷ್ಟು  ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ತನ್ಮಧ್ಯೆ  ಕ್ರೀಯಾಶೀಲ, ಸೃಜನಾತ್ಮಕ ಮತ್ತು ಉದ್ಯೋಗಾಧಾರಿತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕಾಗಿದೆ. ಅದಕ್ಕಾಗಿ ಗುಣಮಟ್ಟದ, ಸಂಶೋಧನಾತ್ಮಕ ಮತ್ತು ಜ್ಞಾನಾ ಆಧಾರಿತ ಶಿಕ್ಷಣದ ಅವಶ್ಯಕತೆ ಇದೆ. ಅದಕ್ಕಾಗಿ ಶಿಕ್ಷಕರು ತಮ್ಮ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಆಧುನಿಕವಾಗಿ ಸಿಗುವಂತಹ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಜ್ಞಾನವನ್ನು ಪಡೆಯಬೇಕು. ಹೆಚ್ಚೆಚ್ಚು ಸಂಶೋಧನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಜ್ಞಾನಾಧಾರಿತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒದಗಿಸಬೇಕು ಎಂದು ಕರೆ ನೀಡಿದರು. 
     ದಿಕ್ಸೂಚಿ ಭಾಷಣ ಮಾಡಿದ ಕೇರಳದ ಕೋಜಿಕ್ಕೋಡ್‍ನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನ ಪ್ರಾಧ್ಯಾಪಕರಾಗಿರುವ  ಡಾ.ಎಸ್.ಎಸ್.ಎಸ್.ಕುಮಾರ್ ಮಾತನಾಡಿ ರಾಷ್ಟ್ರೀಯ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಬಂಡವಾಳ ಮಾರುಕಟ್ಟೆಗಳು ಪ್ರಮುಖವಾದ ಪರಿಣಾಮ ಬೀರುತ್ತವೆ. ಬಂಡವಾಳ ಮಾರುಕಟ್ಟೆಯಲ್ಲಿನ ಹೊಸ ವಿದ್ಯಾಮಾನಗಳು ಭಾರತದಲ್ಲಿ ಮಾರುಕಟ್ಟೆಯ ಸಂದರ್ಭದಲ್ಲಿ ಮಾತ್ರ ಸೀಮಿತವಲ್ಲ. ವಿದೇಶಿ ಮಾರುಕಟ್ಟೆಗಳ ಜಾಯಮಾನದಲ್ಲೂ ಅದರ ಪ್ರಸ್ತುತತೆ ಇದೆ ಎಂದು ಅಭಿಪ್ರಾಯಪಟ್ಟರು. 
     ದೇಶದಲ್ಲಿ ಸದೃಢ ವಾಣಿಜ್ಯ ವ್ಯವಸ್ಥೆಗಾಗಿ ವ್ಯಾಪಾರದಲ್ಲಿ ತೊಡಗುವ ಪ್ರತಿಯೊಬ್ಬರು ಉತ್ತಮ ಆರ್ಥಿಕ ಜ್ಞಾನವನ್ನು ಹೊಂದಿರುವ ಅಗತ್ಯವಿದೆ ಎಂದು ಅವರು ಸ್ವದೇಶಿ ಹೂಡಿಕೆದಾರರಿಗೆ ಸಣ್ಣ ಮಟ್ಟದ ಕೂಡಿಕೆ ಮಾಡುವವರಿಗೆ ಅನುಕೂಲವಾದ ವಾತಾವರನವನ್ನು ನಿರ್ಮಿಸಿ ಬಂಡವಾಳ ಮಾರಿಕಟ್ಟೆಯಲ್ಲಿ ವಿದೇಶಿ ಹೂಡಿಕೆದಾರರ ಹಾವಳಿ ತಪ್ಪಿಸಬೇಕಾಗಿದೆ. ಬಾರತದಲ್ಲಿ ಜನರಿಗೆ ಹಣಕಾಸಿನ ವ್ಯವಹಾರ ಕುರಿತಂತೆ ಹೆಚ್ಚಿನ ಜ್ಞಾನವಿಲ್ಲ, ಜನರನ್ನು  ಸಾಕ್ಷರನ್ನಾಗಿಸುವ ಅಗತ್ಯತೆ ಬಹಳವಿದೆ. ಹಣಕಾಸು ವ್ಯವಹಾರ ಜ್ಞಾನವನ್ನು ಬೆಳೆಸುವುದಕ್ಕೆ ವಿಶೇಷ ಅವಕಾಸಗಳನ್ನು ಕಲ್ಪಿಸಿಕೊಡಬೇಕು. ಎಂದು ಹೇಳಿದರು.  
ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಆಡಳಿತಾಧಿಕಾರಿ ಡಾ. ಹೆಚ್. ಶಾಂತಾರಾಮ್  ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. 
  ಈ ಸಂದರ್ಭದಲ್ಲಿ ಇಂಡಿಯನ್ ಇನಸ್ಟಿಟ್ಯೂಟ್ ಆಪ್ ಚಾರ್ಟರ್ಡ್ ಅಕೌಂಟಂಟ್ಸ್  ಆಫ್ ಇಂಡಿಯಾ- ಎಸ್.ಐ.ಆರ್.ಸಿ ಉಡುಪಿ ಶಾಖೆಯ ಅಧ್ಯಕ್ಷರಾದ ಸಿ.ಎ. ಮುರಳಿಧರ ಕಿಣಿ ಮತ್ತು ಕಾರ್ಯದರ್ಶಿಗಳಾದ ಸಿ.ಎ ಪ್ರಶಾಂತ್ ಹೊಳ್ಳ  ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಕೆ.ಶಾಂತಾರಾಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಅವರು ಸ್ವಾಗತಿಸಿದರು. ವಿಚಾರಸಂಕಿರಣದ ಸಂಯೋಜಕರಾದ ಡಾ.ಎಮ್.ವಿ.ನಾರಾಯಣಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಸವಿತಾ ಶಾಸ್ತ್ರಿ ಕಾರ್ಯಕ್ರಮ ನಿರ್ವಹಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com