ಡಾ. ಎಚ್. ಶಾಂತಾರಾಮ್ ಬಯಲು ರಂಗಮಂಟಪ ಉದ್ಘಾಟನೆ

ಕುಂದಾಪುರ: ಐವತ್ತು ವರ್ಷಗಳ ಹಿಂದೆ ಕಲಾವೆಭವ ನಾಟಕ ತಂಡ ಕಟ್ಟಿಕೊಂಡು ಕುಂದಾಪುರಕ್ಕೆ ಬಂದಿದ್ದೆ. ಅಂದು ಕುಂದಾಪುರದ ಜನ ನೀಡಿದ ಸಹಕಾರ ಮನಃಪಟಲದಲ್ಲಿ ಇಂದಿಗೂ ಹಸಿರಾಗಿಯೇ ಇದೆ. ಇಲ್ಲಿ ರಂಗ ಅಧ್ಯಯನ ಕೇಂದ್ರ ಸ್ಥಾಪಿಸಿದ ಡಾ.ಎಚ್.ಶಾಂತಾರಾಂಬಯಲು ರಂಗಮಂಟಪ ನೀಡುವ ಮೂಲಕ ಅದ್ಭುತ ಕೆಲಸ ಮಾಡಿದ್ದಾರೆ ಎಂದು ನಾಡೋಜ, ಹಿರಿಯ ರಂಗಕರ್ಮಿ ಡಾ.ಏಣಗಿ ಬಾಳಪ್ಪ ಪ್ರಶಂಸೆ ವ್ಯಕ್ತಪಡಿಸಿದರು. ಗುರುವಾರ ಸಂಜೆ ಇಲ್ಲಿನ ಭಂಡಾರ್‌ಕಾರ್ಸ್‌ ಕಾಲೇಜಿನ ಸುವರ್ಣ ಮಹೋತ್ಸವದ ಕೊಡುಗೆಯಾಗಿ ನಿರ್ಮಿಸಲಾದ ನೂತನ ಬಯಲು ರಂಗಮಂಟಪ ಉದ್ಘಾಟಿಸಿ ಅವರು ಮಾತನಾಡಿದರು. 

ಕುಂದಾಪುರ ಮೊದಲಿನಿಂದಲೂ ರಂಗಭೂಮಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಡಾ.ಶಿವರಾಮ ಕಾರಂತರ ಅಣ್ಣ ಕೆ.ಎಲ್.ಕಾರಂತರು ನನ್ನಿಂದ ಒಂದು ನಾಟಕ ಆಡಿಸುವ ಕನಸು ಹೊಂದಿದ್ದರು ಎಂದು ನೆನಪಿಸಿಕೊಂಡ ಬಾಳಪ್ಪ, ಕುಂದಾಪುರಕ್ಕೆ ಬಂದಾಗಲೆಲ್ಲಾ ಹಳೆಯ ನೆಪುಗಳು ತೆರೆದುಕೊಳ್ಳುತ್ತವೆ. ರಂಗಭೂಮಿ ಉಳಿಯಬೇಕು, ಉಳಿಸಬೇಕು ಮತ್ತು ಅದನ್ನು ಪ್ರತಿಯೊಬ್ಬರೂ ಬೆಳೆಸಬೇಕು ಎಂದು ಹೇಳಿದರು. 

ಕುಂದಾಪುರ ರಂಗ ಅಧ್ಯಯನ ಕೇಂದ್ರದ ಸಂಚಾಲಕ ಡಾ.ಎಚ್.ಶಾಂತಾರಾಂ ಅಧ್ಯಕ್ಷತೆ ವಹಿಸಿದ್ದರು. ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ವಸಂತ ಬನ್ನಾಡಿ ಮಾತನಾಡಿ, 1997ರಲ್ಲಿ ಸ್ಥಾಪನೆಯಾದ ರಂಗ ಅಧ್ಯಯನ ಕೇಂದ್ರ ದೇಶಕ್ಕೆ ಸಂದ ಕೊಡುಗೆ. ಕಾಲೇಜು ಆವರಣದಲ್ಲಿ ನಾಟಕ ಡಿಪ್ಲೊಮಾ ಕೋರ್ಸ್ ಹೊಂದಿರುವ ಕೇಂದ್ರವಿದು. ಡಾ.ಎಚ್.ಶಾಂತಾರಾಂ ವಿದ್ಯಾರ್ಥಿ ಜೀವನದಿಂದಲೂ ನಾಟಕದ ಅಭಿರುಚಿ ಹೊಂದಿದವರು. ಅವರು ಪ್ರಿನ್ಸಿಪಾಲರಾಗಿ ಭಂಡಾರ್‌ಕಾರ್ಸ್‌ಗೆ ಬಂದ ಬಳಿಕ ರಂಗಭೂಮಿ ಆಶಯಗಳು ಈಡೇರುತ್ತಾ ಬಂದವು. ಬಯಲು ರಂಗಮಂಟಪ ಅವರದ್ದೇ ಕೊಡುಗೆ. ರಂಗಮಂಟಪಕ್ಕೆ ಅವರ ಹೆಸರು ಇಟ್ಟಿರುವುದು ಅರ್ಥಪೂರ್ಣ ಎಂದು ಹೇಳಿದರು. 

ಕಾಲೇಜಿನ ಆಡಳಿತ ಮಂಡಳಿಯ ವಿಶ್ವಸ್ಥರಾದ ಬಿ.ಎಂ.ಸುಕುಮಾರ ಶೆಟ್ಟಿ, ದೇವದಾಸ್ ಕಾಮತ್, ಶಾಂತಾರಾಮ ಪ್ರಭು, ಸದಾನಂದ ಚಾತ್ರ, ರಾಜೇಂದ್ರ ತೋಳಾರ್, ರಂಗಕರ್ಮಿ ಗೋಪಾಲಕಷ್ಣ ನಾಯರಿ ಉಪಸ್ಥಿತರಿದ್ದರು. ಪ್ರಿನ್ಸಿಪಾಲ್ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಕೋಣಿ ಶಿವಾನಂದ ಕಾರಂತ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸಂಕ್ರಾಂತಿ ನಾಟಕ ಪ್ರದರ್ಶನಗೊಂಡಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com