ಭಂಡಾರ್‌ಕಾರ್ಸ್‌ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ: ಮೇಜರ್‌ ಉಣ್ಣಿಕೃಷ್ಣನ್‌ ಪ್ರಶಸ್ತಿ ಪ್ರಧಾನ

ಕುಂದಾಪುರ: ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಬದುಕುತ್ತಿರುವ ಹಳೇ ವಿದ್ಯಾರ್ಥಿಗಳಿಗೆ ಅವರುಗಳು ಕಲಿತ ವಿದ್ಯಾಸಂಸ್ಥೆಯ ಮೇಲೆ ಅಭಿಮಾನ ಹೊಂದಿದ್ದರೆ ಅಂತಹ ಸಂಸ್ಥೆಗಳು ಮತ್ತಷ್ಟು ಬೆಳೆಯಲು ಸಾಧ್ಯ.  ಜಿಲ್ಲೆಗೆ ಶಿಕ್ಷಣದ ದಾಸೋಹ ಬಡಿಸಿದ ದಿ. ಟಿ.ಎಂ.ಎ ಪೈ ಅವರ ಸ್ಮರಣೆ ಸದಾ ಮಾಡಬೇಕಾಗುತ್ತದೆ ಇಂದು ಭಂಡಾರ್‌ಕಾರ್ಸ್‌ ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡಿದೆ. ಕಾಲೇಜಿನ ಹಳೆವಿದ್ಯಾರ್ಥಿಗಳು ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾದ ಅಗತ್ಯ ಇದೆ ಎಂದು ಉಡುಪಿ  ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್‌ ಸೊರಕೆ ಹೇಳಿದರು. 
     ಇಲ್ಲಿನ ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಘದ ಸುವರ್ಣ ಸಂಭ್ರಮಾಚರಣೆ, ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಪ್ರಶಸ್ತಿ ಪ್ರದಾನ ಹಾಗೂ ಹಳೆವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು. 
  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ|ಬೋರಲಿಂಗಯ್ಯ ಅವರು ಸಾಧಕ ಎನ್‌ಸಿಸಿ ಕೆಡೆಟ್‌ಗಳಾದ ಅರುಣ್‌ ಕುಮಾರ್‌ ಶೆಟ್ಟಿ, ಅಕ್ಷತಾ ಶೆಟ್ಟಿ , ವಿರೇಂದ್ರ ಮೊಗವೀರ, ಅಬ್ದುಲ್‌ ಫಯಾಜ್‌ ಅವರಿಗೆ ಮೇಜರ್‌ ಸಂದೀಪ್‌ ಉಣ್ಣಿಕೃಷ್ಣನ್‌ ಪ್ರಶಸ್ತಿ ಪ್ರದಾನ ಮಾಡಿದರು.
     ನಿಟ್ಟೆ ವಿಶ್ವವಿದ್ಯಾಲಯ ಕುಲಪತಿ ಡಾ. ಎಸ್. ರಮಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿ ಡಾ. ಎಚ್. ಶಾಂತಾರಾಮ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. 
    ನಿವೃತ್ತ ಪ್ರಿನ್ಸಿಪಾಲ್ ಪಿ. ನಾರಾಯಣ ಆಚಾರ್, ಎ.ಸಿ. ತುಂಗ, ನಾರಾಯಣ ರಾವ್ ಹಾಗೂ ಕಳೆದ 50 ವರ್ಷಗಳಿಂದ ಕಾಲೇಜಿನ ಆಡಳಿತ ಕಚೇರಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿರುವ ವಿಠಲ್, ಸಾಧಕ ಹಳೆ ವಿದ್ಯಾರ್ಥಿಗಳಾದ ಆನಗಳ್ಳಿ ಕರುಣಾಕರ ಹೆಗ್ಡೆ, ಚಿತ್ರನಟ ರಾಜ್ ಬಲ್ಲಾಳ್ ಹಾಗೂ ಡಾ. ಜಯಶ್ರೀ, ಲೆಫ್ಟಿನೆಂಟ್ ಪ್ರೊ. ಜಿ.ಎಸ್. ಹೆಗಡೆ, ಲೆಫ್ಟಿನೆಂಟ್ ಅಂಜನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. 
       ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಡಾಮಕ್ಕಿ ಶಶಿಧರ ಶೆಟ್ಟಿ, ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯ ಬಿ.ಎಂ. ಸುಕುಮಾರ ಶೆಟ್ಟಿ, ಚಿಕ್ಕಮಗಳೂರು ಉದ್ಯಮಿ ಟಿ.ಡಿ. ರಾಜೇಗೌಡ, ಪ್ರಿನ್ಸಿಪಾಲ್ ಡಾ. ಎನ್.ಪಿ. ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನವೀನ್‌ಕುಮಾರ ಶೆಟ್ಟಿ ಸ್ವಾಗತಿಸಿದರು. ರಾಮಕೃಷ್ಣ ಹೇರ್ಳೆ, ರಾಜೇಂದ್ರ, ಪ್ರೊ. ಅರುಣಾಚಲ ಮಯ್ಯ ಸನ್ಮಾನ ಪತ್ರ ವಾಚಿಸಿದರು. ಪತ್ರಕರ್ತ ಕೆ.ಸಿ. ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ತಿಕೇಯ ಮಧ್ಯಸ್ಥ ವಂದಿಸಿದರು. ಬಳಿಕ ಮಂಗಳೂರು ನೌಶಾದ್ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಿತು.ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com