ವಿಶೇಷ: ಹಿಂದೂ ದೇವಾಲಯದಲ್ಲಿ ಬೈಬಲ್'ಗೆ ಪೂಜೆ

    ನಿಮಗೆ ಅಚ್ಚರಿ ತರುವ ಸುದ್ದಿಯೊಂದಿದೆ. ನವಲಗುಂದದ ಬಳಿ ಇರುವ ದೇವಸ್ಥಾನವೊಂದರಲ್ಲಿ ಕ್ರೈಸ್ತರ ಬೈಬಲ್ ಪುಸ್ತಕಕ್ಕೆ ದಿನನಿತ್ಯ ಪೂಜೆ ಮಾಡಲಾಗುತ್ತದೆ. ಅಜಾತ ನಾಗಲಿಂಗೇಶ್ವರಸ್ವಾಮಿ ಮಂದಿರದಲ್ಲಿ ತಲೆತಲಾಂತರಗಳಿಂದ ಈ ಬೈಬಲ್'ಗೆ ಎಣ್ಣೆ ದೀಪ, ಆರತಿ, ಹೂ ಅರ್ಚನೆಯ ಪೂಜೆ ಮಾಡಿಕೊಂಡು ಬರಲಾಗುತ್ತಿದೆ.

ದೇವಸ್ಥಾನದಲ್ಲಿರುವ ಬೈಬಲ್ ಪುಸ್ತಕ ಕನ್ನಡದಲ್ಲಿದೆ. ಕ್ರೈಸ್ತ ಮಿಷನರಿಗಳು 1865ರಲ್ಲಿ ಮಂಗಳೂರಿನಲ್ಲಿ ಈ ಪುಸ್ತಕವನ್ನ ಮುದ್ರಿಸಿದ್ದರು. ಹಾಗೆಯೇ, ಈ ದೇವಸ್ಥಾನದಲ್ಲಿರುವ ವಿಗ್ರಹವು 19ನೇ ಶತಮಾನದಲ್ಲಿ ಬದುಕಿದ್ದ ನಾಗಲಿಂಗಸ್ವಾಮಿ ಎಂಬ ಸಾಧುವಿನದ್ದಂತೆ. ಈ ದೇವಸ್ಥಾನಕ್ಕೂ ಈ ಬೈಬಲ್'ಗೂ ಏನು ಸಂಬಂಧ ಎಂಬ ಬಗ್ಗೆ ಒಂದು ದಂತಕಥೆಯೇ ಇದೆ...

ಏನಿದು ದಂತಕಥೆ?

ಮೊದಲೇ ಹೇಳಿದಂತೆ ಇದು 19ನೇ ಶತಮಾನದ ಕಥೆ. ಬಾಗಲಕೋಟೆಯ ಮುಷ್ಟಿಗೇರಿ ಎಂಬ ಪುಟ್ಟ ಗ್ರಾಮದ ಕಲ್ಲಪ್ಪ ಎಂಬುವವರು ದುರ್ಗಾದೇವಿಯ ಭಕ್ತರಾಗಿದ್ದರು. ಒಮ್ಮೆ ಕ್ರೈಸ್ತ ಮಿಷನರಿಗಳು ಇವರಿಗೆ ಬೈಬಲ್ ಪುಸ್ತಕವೊಂದನ್ನ ನೀಡುತ್ತಾರೆ.

ಒಂದು ದಿನ, ನಾಗಲಿಂಗಸ್ವಾಮಿಯವರು ಕಲ್ಲಪ್ಪನವರನ್ನ ನೋಡಲು ಮನೆಗೆ ಹೋಗುತ್ತಾರೆ. ಆಗ, ತಮ್ಮ ಬಳಿ ಇದ್ದ ಬೈಬಲ್ ಪುಸ್ತಕವನ್ನ ಕಲ್ಲಪ್ಪ ಬಚ್ಚಿಟ್ಟುಕೊಳ್ಳುತ್ತಾರೆ. ಆದರೆ, ಹಾಗೇ ಮಾತಿನ ಮಧ್ಯೆ ನಾಗಲಿಂಗಸ್ವಾಮಿ ತಮ್ಮ ಮರುಹುಟ್ಟಿನ ಬಗ್ಗೆ ಮಾಹಿತಿ ನೀಡಿ, ಬೈಬಲ್ ಪುಸ್ತಕವನ್ನ ನೀಡಲು ಕೋರುತ್ತಾರೆ. ತಾನು ಬಚ್ಚಿಟ್ಟಿದ್ದ ಬೈಬಲ್ ಬಗ್ಗೆ ಸ್ವಾಮೀಜಿಗೆ ಹೇಗೆ ತಿಳಿಯಿತೆಂದು ಕಲ್ಲಪ್ಪನಿಗೆ ಆಶ್ಚರ್ಯವಾಗುತ್ತದೆ.

ಬಳಿಕ ನಾಗಲಿಂಗಸ್ವಾಮಿ ಆ ಪುಸ್ತಕದಲ್ಲಿ ಒಂದು ರಂಧ್ರವನ್ನ ಕೊರೆಯುತ್ತಾರೆ. ವಿಕ್ಟೋರಿಯನ್ ಬೆಳ್ಳಿ ನಾಣ್ಯವೊಂದನ್ನ ಅವರು ಆ ರಂಧ್ರದೊಳಗೆ ಹಾಕಿದಾಗ ಮತ್ತೊಂದು ಬದಿಯಲ್ಲಿ ಆ ನಾಣ್ಯ ಹೊರಬರುತ್ತದೆ. ಆಗ, ನಾಗಲಿಂಗಸ್ವಾಮಿ ತಮ್ಮ ಮರುಹುಟ್ಟಿನ ಸುಳಿವನ್ನ ನೀಡುತ್ತಾರೆ. ಬೈಬಲ್ ಪುಸ್ತಕದಲ್ಲಿ ಮಾಡಲಾಗಿರುವ ರಂಧ್ರ ಕಾಲಾಂತರದಲ್ಲಿ ತನ್ನಷ್ಟಕ್ಕೇ ಭರ್ತಿಯಾದಾಗ ತನ್ನ ಪುನರ್ಜನ್ಮವಾಗುತ್ತದೆ ಎಂದು ಕಲ್ಲಪ್ಪನಿಗೆ ತಿಳಿಸುತ್ತಾರೆ...

ನಾಗಲಿಂಗಸ್ವಾಮಿ ನಿಧನದ ಬಳಿಕ ದೇವಸ್ಥಾನವೊಂದನ್ನ ಕಟ್ಟಿಸಿ ಈ ಬೈಬಲ್ ಪುಸ್ತಕವನ್ನಿಟ್ಟು ಪೂಜೆ ಮಾಡಿಕೊಂಡು ಬರಲಾಗುತ್ತಿದೆ...

ರಂಧ್ರವೂ ಭರ್ತಿಯಾಗುತ್ತಿದೆ; ಅಳಿಸಿದ್ದ ಅಕ್ಷರಗಳೂ ಕಾಣಿಸುತ್ತಿವೆ...!!
ನಾಗಲಿಂಗಸ್ವಾಮಿ ಹೇಳಿದಂತೆ ಈ ಬೈಬಲ್ ಪುಸ್ತಕದಲ್ಲಿ ಕೊರೆಯಲಾಗಿದ್ದ ರಂಧ್ರ ನಿಧಾನವಾಗಿ ಭರ್ತಿಯಾಗುತ್ತಿದೆ. ರಂಧ್ರದ ಅಂತರ ಕಡಿಮೆಯಾಗುತ್ತಲೇ ಇದೆ. ಅಚ್ಚರಿ ಎಂದರೆ, ರಂಧ್ರದೊಂದಿಗೆ ನಾಶವಾಗಿದ್ದ ಅಕ್ಷರಗಳೂ ಕಾಣಿಸಿಕೊಳ್ಳುತ್ತಿವೆಯಂತೆ.

ಇದು ನಿಜಕ್ಕೂ ಅಚ್ಚರಿಯೇ...

ಮಾಹಿತಿ ಕೃಪೆ: ದಿ ಹಿಂದೂ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com