ಬೈಂದೂರು ರೈಲ್ವೇ ನಿಲ್ದಾಣದಲ್ಲಿ ಪಿ.ಆರ್‌.ಎಸ್‌. ಸೌಲಭ್ಯ

ದೇಶದಲ್ಲೆ ಪ್ರಥಮ ಗ್ರಾಮೀಣ ಸೇವೆಯ ಕೊಡುಗೆ

ಬೈಂದೂರು: ಗ್ರಾಮೀಣ ಭಾಗವಾದ ಬೈಂದೂರು ಮುಕಾಂಬಿಕಾ ರೈಲ್ವೇ ನಿಲ್ದಾಣದಲ್ಲಿ ಡಿ. 27ರಂದು ಗಣಕೀಕೃತ ಪ್ರಯಾಣಿಕರ ರಿಸರ್ವೆಶನ್‌ ಸೌಲಭ್ಯ (ಪಿ.ಆರ್‌.ಎಸ್‌.) ಉದ್ಘಾಟನೆಗೊಳ್ಳಲಿದೆ ಎಂದು ರೈಲ್ವೇ ಯಾತ್ರಿ ಸಂಘದ ಅಧ್ಯಕ್ಷ ವೆಂಕಟೇಶ ಕಿಣಿ ತಿಳಿಸಿದ್ದಾರೆ. ಅವರು ಬೈಂದೂರು ರೈಲ್ವೇ ನಿಲ್ದಾಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ದೇಶದ ರೈಲ್ವೇ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಇ ಕೆಟಗರಿಯ ರೈಲ್ವೇ ನಿಲ್ದಾಣಕ್ಕೆ ನೀಡಿದ ಸೌಕರ್ಯ ಇದಾಗಿದೆ. ಈ ನೂತನ ಯೋಜನೆಗೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಮಾರ್ಚ್‌ ಅಂತ್ಯದಲ್ಲಿ ಉದ್ಘಾಟನೆ

ಈಗಾಗಲೇ 16 ಕೋ. ರೂ. ಅಂದಾಜು ವೆಚ್ಚದಲ್ಲಿ ಸುಸಜ್ಜಿತ ರೈಲ್ವೇ ನಿಲ್ದಾಣ ನಿರ್ಮಾಣ ಹಂತದಲ್ಲಿದೆ. ರಾಜ್ಯ ಸರಕಾರ 5 ಕೋ. ರೂ. ಅನುದಾನ ನೀಡಿದೆ. ರೈಲ್ವೇ ಹೊಟೇಲ್‌ ಮೊದಲ ಹಂತದ ಕೆಲಸ ಪ್ರಾರಂಭಗೊಂಡಿದೆ. ವಿಶ್ರಾಂತಿ ಕೋಣೆ, ಪಾದಚಾರಿ ಮೇಲ್ಸೆತುವೆ, ಲಗೇಜ್‌ ಕೋಣೆ, ಕೌಂಟರ್‌ ಮುಂತಾದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮಾರ್ಚ್‌ ಅಂತ್ಯದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಅವರು ಹೇಳಿದರು.

ಹೋರಾಟದಿಂದ ಸೌಲಭ್ಯ

ಬೈಂದೂರು ನಿಲ್ದಾಣ ಪ್ರಾರಂಭದಲ್ಲಿ ರೈಲ್ವೇ ಇಲಾಖೆಯಿಂದ ಅತ್ಯಂತ ನಿರ್ಲಕ್ಷಕ್ಕೊಳಗಾಗಿತ್ತು. ಯಾತ್ರಿ ಸಂಘದ ನಿರಂತರ ಹೋರಾಟದಿಂದ ಅನಂತರ ಅನೇಕ ಸೌಲಭ್ಯ ಪಡೆದಿದೆ. ಮಡಗಾಂವ್‌ ಹೊರತುಪಡಿಸಿದರೆ ಅತ್ಯಂತ ದೊಡ್ಡ ರೈಲ್ವೇ ನಿಲ್ದಾಣ ಬೈಂದೂರಿನಲ್ಲಿ ನಿರ್ಮಾಣವಾಗುತ್ತಿದೆ. ಪ್ರತಿದಿನ 13ಕ್ಕೂ ಅಧಿಕ ರೈಲು ನಿಲುಗಡೆಯಾಗುತ್ತಿದೆ. ಪ್ರತಿ ತಿಂಗಳಿಗೆ 25 ಲಕ್ಷ ರೂ. ಅಧಿಕ ಆದಾಯ ಗಳಿಸುತ್ತಿದೆ. ಆಸ್ಕರ್‌ ಫೆರ್ನಾಂಡಿಸ್‌ ಅನುದಾನದಲ್ಲಿ 10 ಲಕ್ಷ ರೂ. ಅನುದಾನದ ವಿಶ್ರಾಂತಿ ಗ್ರಹ ನಿರ್ಮಾಣಗೊಂಡಿದೆ. ಪ್ರತಿದಿನ ಎರಡರಿಂದ ಮೂರು ಸಾವಿರ ಪ್ರಯಾಣಿಕರು ಬೈಂದೂರು ಮುಕಾಂಬಿಕಾ ರೈಲ್ವೇ ನಿಲ್ದಾಣದ ಮೂಲಕ ಪ್ರಯಾಣಿಸುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಯಾತ್ರಿ ಸಂಘದ ಕಾರ್ಯದರ್ಶಿ ಜಗದೀಶ ಪಟವಾಲ್‌, ನವೀನ್‌ ಉಪ್ಪುಂದ ಮೊದಲಾದವರು ಹಾಜರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com