ರೈತ ಏಕಾಂಗಿಯಲ್ಲ: ಸಚಿವ ಸೊರಕೆ

ಕುಂದಾಪುರ: ರೈತ ಏಕಾಂಗಿಯಲ್ಲ, ಸರಕಾರದ ಸಹಕಾರ ವ್ಯವಸ್ಥೆ, ಆರ್ಥಿಕ ವ್ಯವಸ್ಥೆಗಳು ರೈತರ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯವನ್ನು ಮಾಡುವುದರೊಂದಿಗೆ ಅವರಲ್ಲಿ ಸಂಘಟನಾ ಶಕ್ತಿ ವೃದ್ಧಿಸುವ ಕಾರ್ಯವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸಹಕಾರ ಸಂಸ್ಥೆಗಳು ಹಾಗೂ ರೈತರ ನಡುವೆ ಸಮನ್ವಯ ಹಾಗೂ ಸಹಕಾರ ಹೆಚ್ಚಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್‌ ಸೊರಕೆ ಹೇಳಿದರು.

ಅವರು ಉಡುಪಿ ಜಿಲ್ಲಾ ರೈತ ಸಂಘ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಹಾಗೂ ಹುಯ್ನಾರು ಪಟೇಲ ಚಾರಿಟೆಬಲ್‌ ಟ್ರಸ್ಟ್‌ನ ಸಂಯುಕ್ತ ಆಶ್ರಯದಲ್ಲಿ ಕುಂದಾಪುರದ ವ್ಯಾಸರಾಜ ಕಲ್ಯಾಣ ಮಂಟಪದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರಿಗೆ ಹೆಚ್ಚಿನ ಮೂಲಸೌಕರ್ಯ ಒದಗಿಸುವ ಕುರಿತು ಸಹಕಾರಿಗಳ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿ ರೈತರ ಜೀವನಾಧಾರ. ಅದರೊಂದಿಗೆ ಸಹಕಾರಿ ವ್ಯವಸ್ಥೆಯೂ ಸಹ ರೈತನ ಉಸಿರಾಗಿದೆ. ಈ ನಿಟ್ಟಿನಲ್ಲಿ ಇವೆರಡೂ ಪರಸ್ಪರ ಕೈಜೋಡಿಸಿ ಸಹಕರಿಸಿದಲ್ಲಿ ರೈತ ಹಾಗೂ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದರು.

ಸಕ್ಕರೆ ಕಾರ್ಖಾನೆ ಭವಿಷ್ಯ ರೈತರ ಕೈಯಲ್ಲಿ

ರೈತರು ಸಂಘಟಿತರಾಗಬೇಕು. ಸಂಘಟನೆ ಮೂಲಕ ತಮ್ಮ ಧ್ವನಿಯನ್ನು ಎಲ್ಲಿ ಕೇಳಿಸಬೇಕೋ ಅಲ್ಲಿ ಕೇಳಬೇಕು. ಸರಕಾರ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ರೈತರಿಗೆ ಹಾಗೂ ಕಾರ್ಮಿಕರಿಗೆ ಬಾಕಿ ಇರುವ ಪಾವತಿಯನ್ನು ಮಾಡುವ ನಿಟ್ಟಿನಲ್ಲಿ 12 ಕೋ.ರೂ. ಬಿಡುಗಡೆ ಮಾಡುವ ಮೂಲಕ ಮಹತ್ತರ ಪ್ರಥಮ ಹೆಜ್ಜೆಯನ್ನಿಟ್ಟಿದೆ. ಸಕ್ಕರೆ ಕಾರ್ಖಾನೆಯನ್ನು ಮುಂದೆ ಉಳಿಸಿ ಬೆಳೆಸುವ ಬಗ್ಗೆ ರೈತರೇ ನಿರ್ಣಯ ತೆಗೆದುಕೊಳ್ಳಬೇಕು; ಇದಕ್ಕೆ ಸರಕಾರ ಬದ್ಧವಾಗಿದೆ ಎಂದು ಸೊರಕೆ ಹೇಳಿದರು.

ಪ್ರಗತಿ ಕಾಣದ ವಾರಾಹಿ ಯೋಜನೆ

ಪ್ರಕೃತಿ ವಿಕೋಪದಡಿಯಲ್ಲಿ ಅಡಿಕೆ ಬೆಳೆಯಲ್ಲಿ ನಷ್ಟ ಹೊಂದಿದ ರೈತರಿಗೆ ಕೇಂದ್ರ ಸರಕಾರದ ಜತೆಯಾಗಿ ಅಲ್ಪ ಪ್ರಮಾಣದಲ್ಲಿ ಸಹಾಯ ನೀಡುವ ಕಾರ್ಯ ನಡೆಸಿದೆ. ಹೀಗೆ ಒಂದೊಂದೇ ಹಂತದಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡಲಿದೆ. ರಾಜ್ಯಾದ್ಯಂತ ಕೃಷಿ ಚಟುವಟಿಕೆಗಳಿಗೆ ಪೂರಕವಾಗುವಂತೆ ನೀರಾವರಿ ವ್ಯವಸ್ಥೆ ಸರಕಾರದಿಂದ ಆಗಿದೆ. ಆದರೆ ಕೃಷಿ ವ್ಯವಸ್ಥೆಯ ದೃಷ್ಟಿ ಇರಿಸಿಕೊಂಡು ಆರಂಭವಾದ ವಾರಾಹಿ ನೀರಾವರಿ ಯೋಜನೆ ತನ್ನ ಯೋಜನಾ ವೆಚ್ಚವನ್ನು ಹೆಚ್ಚಿಸಿಕೊಂಡು ಹೋಗುತ್ತಾ ವಿನಹ ಪ್ರಗತಿ ಕಂಡಿಲ್ಲ. ಈ ಯೋಜನೆಯ ಪ್ರಗತಿಯ ಕೊರತೆ ಅದರ ದಿಕ್ಕನ್ನೇ ಬದಲಾಯಿಸಿದೆ ಎಂದರು.

ಜಿಲ್ಲಾ ರೈತಸಂಘದ ಅಧ್ಯಕ್ಷ ಕೆ. ಪ್ರತಾಪಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ರೈತ ಸಂಘದ ಸಹಕಾರಿ ವಿಭಾಗದ ಅಧ್ಯಕ್ಷ ರಾಜು ಪೂಜಾರಿ, ಕಿಸಾನ್‌ ಸಂಘದ ಅಧ್ಯಕ್ಷ ಬಿ.ವಿ. ಪೂಜಾರಿ, ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಎಚ್‌.ಜಯಶೀಲ ಶೆಟ್ಟಿ, ಉಪಾಧ್ಯಕ್ಷ ಸೇಷಗಿರಿ ಗೋಟ ಮೊದಲಾದವರು ಉಪಸ್ಥಿತರಿದ್ದರು.

28 ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ನಿರ್ದೇಶಕರು, ರೈತರು ಭಾಗವಹಿಸಿದ್ದರು.

ಗೋಷ್ಠಿಯಲ್ಲಿ ಕೃಷಿ ಯಂತ್ರೋಪಕರಣಗಳ ಸೌಲಭ್ಯವನ್ನು ಸಂಘಗಳಿಗೆ ನಷ್ಟವಾಗದಂತೆ ರೈತರಿಗೆ ಹೊರೆಯಾಗದ ರೀತಿಯಲ್ಲಿ ಒದಗಿಸುವುದು, ರಸಗೊಬ್ಬರ, ಬಿತ್ತನೆ ಬೀಜ, ಕ್ರೀಮಿನಾಶಕ, ಕೃಷಿ ಯಂತ್ರೋಪಕರಣ ಮಾರಾಟ ದುರಸ್ತಿ, ಇನ್ನಿತರ ಮೂಲಭೂತ ಸವಲತ್ತುಗಳನ್ನು ಸಂಘಗಳ ಅನುಷ್ಠಾನಗೊಳಿಸುವವರೇ ಇರುವ ಅವಕಾಶಗಳು, ಸರಕಾರದ ವಿವಿಧ ಯೋಜನೆಗಳ ಸಹಾಯಧನ ಹಾಗೂ ಸವಲತ್ತು ಮತ್ತು ಮಾಹಿತಿ ಶಿಬಿರಗಳನ್ನು ಸಂಘಗಳ ಮೂಲಕ ಅನುಷ್ಠಾನಗೊಳಿಸಲು ಇರುವ ಅವಕಾಶಗಳ ಕುರಿತು ವಿಚಾರ ಮಂಡನೆ ನಡೆಯಿತು.

ಜಿಲ್ಲಾ ರೈತ ಸಂಘದ ಸಹಕಾರಿ ವಿಭಾಗದ ಅಧ್ಯಕ್ಷ ರಾಜು ಪೂಜಾರಿ ಸ್ವಾಗತಿಸಿದರು. ರೈತ ಸಂಘ ಖಂಬದಕೋಣೆ ವಲಯದ ಅಧ್ಯಕ್ಷ, ಕೆಆರ್‌ಎಸ್‌ಎಸ್‌ ಸಂಘ ಉಪ್ಪು³ಂದ ಇದರ ಅಧ್ಯಕ್ಷ ಎಸ್‌. ಪ್ರಕಾಶ್ಚಂದ್ರ ಶೆಟ್ಟಿ ಪ್ರಸ್ತಾವನೆಗೈದರು. ಪತ್ರಕರ್ತ ಕೆ.ಸಿ. ರಾಜೇಶ್‌ ಕಾರ್ಯಕ್ರಮ ನಿರ್ವಹಿಸಿದರು.

ಕುಂದಾಪುರದಲ್ಲಿ ಕೃಷಿಮೇಳ

ಈ ಬಾರಿ ಉಡುಪಿ ಜಿಲ್ಲಾ ಕೃಷಿ ಮೆಳವನ್ನು ಕುಂದಾಪುರದಲ್ಲಿ ಸಂಘಟಿಸಲು ಉದ್ದೇಶಿಸಲಾಗಿದ್ದು, ರೈತಬಾಂಧವರು, ಜಿಲ್ಲೆಯ ಎಲ್ಲ ಸಹಕಾರಿಗಳು ಜತೆಗಿದ್ದು ಯಶಸ್ವಿಗೊಳಿಸಬೇಕು. ಇದು ಸಹಕಾರಿ-ರೈತರ ಮೇಳವಾಗಬೇಕು. ಜಿಲ್ಲಾಡಳಿತ ತಮ್ಮ ಜತೆಗಿರುತ್ತದೆ ಎಂದು ಸಚಿವ ವಿನಯ ಕುಮಾರ್‌ ಸೊರಕೆ ಹೇಳಿದರು. ಕೃಷಿ ಮೆಳವನ್ನು ಆಯೋಜಿಸುವ ಮೂಲಕ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ಕೆ ಚಾಲನೆ ನೀಡುವ ಪ್ರಯತ್ನ ಯಶಸ್ವಿಯಾಗಲಿ ಎಂದು ಅವರು ಹೇಳಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com