ಚುಟುಕು ಸಾಹಿತಿ ಡುಂಡಿರಾಜ್‌ರಿಗೆ ಬಿಂದುಶ್ರೀ ಪ್ರಶಸ್ತಿ ಪ್ರದಾನ

ಬೈಂದೂರು: ಸರಕಾರದ ವತಿಯಿಂದ ನವ್ಯ ಹರಿಕಾರ ಮೊಗೇರಿ ಗೋಪಾಲಕೃಷ್ಣ ಅಡಿಗರ ಹೆಸರಿನಲ್ಲಿ ಪ್ರಶಸ್ತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ಈ ಭಾಗದ ಸಾಹಿತಿಗಳ ನಿಯೋಗ ಕೊಂಡೊಯ್ದು, ಚರ್ಚಿಸಲಾಗುವುದು. ಮುಂದಿನ ಬಜೆಟ್‌ನಲ್ಲಿ ಬೈಂದೂರು ತಾಲೂಕು ರಚನೆ ಘೋಷಣೆಯಾಗುವ ವಿಶ್ವಾಸವಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ಜೈಸಿರಿ ಕಾರ್ಯಕ್ರಮದಲ್ಲಿ ಖ್ಯಾತ ಚುಟುಕು ಸಾಹಿತಿ ಡುಂಡಿರಾಜ್ ಅವರಿಗೆ ಪ್ರಥಮ ಬಿಂದುಶ್ರೀ ಪ್ರಶಸ್ತಿ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡುಂಡಿರಾಜ್, ಇಂದು ಸಾಂಘಿಕ ಮನೋಭಾವ ಕಡಿಮೆಯಾಗುತ್ತಿದೆ. ಕೇವಲ ಸ್ವಾರ್ಥ ಸಾಧನೆ ತುಂಬಿರುವ ಸಮಾಜದಲ್ಲಿ ಸಾಹಿತ್ಯ, ಸಂಸ್ಕೃತಿ ಉಳಿಯುವುದು ಕಷ್ಟ ಸಾಧ್ಯ. ಜನರನ್ನು ಬೆಸೆಯುವ ಸಂಸ್ಕೃತಿ ಕೇವಲ ಸಾಹಿತ್ಯಕ್ಕೆ ಮಾತ್ರವಿದೆ. ಹುಟ್ಟಿನಿಂದಲೇ ನಾಟಕ, ಕಲೆ, ಸಾಹಿತ್ಯದ ಬಗೆಗಿನ ಅತಿಯಾದ ಆಸಕ್ತಿಯೇ ಸಾಧನೆಗೆ ಪ್ರೇರಣೆಯಾಗಿದೆ. ಈ ಪ್ರಶಸ್ತಿ ಇನ್ನೂ ಹೆಚ್ಚಿನ ಸಾಧನೆಗೆ ಸೂರ್ತಿಯಾಗಲಿದೆ ಎಂದರು. 

ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಸಾಹಿತಿ ಡಾ. ನಾ. ಮೊಗಸಾಲೆ, ನವ್ಯ ಹರಿಕಾರ ಗೋಪಾಲಕೃಷ್ಣ ಅಡಿಗರ ಹೆಸರಿನಲ್ಲಿ ಇನ್ನೂ ಪ್ರಶಸ್ತಿ ಬಾರದಿರುವುದು ದುರಂತವೇ ಸರಿ. ಇಂದು ಚಿಂತಕರು ರಾಜಕಾರಣಿಗಳನ್ನು ಅವಹೇಳನ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ಅವರನ್ನು ಸಾಹಿತ್ಯ ಕಾರ್ಯಕ್ರಮಗಳಿಗೆ ಆಹ್ವಾನಿಸುವುದರ ಮೂಲಕ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಬೇಕು. ಇಂದು ಎಲ್ಲ ರೀತಿಯ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಜಾಗ್ರತೆ ವಹಿಸಬೇಕಾದ ಅಗತ್ಯತೆಯಿದೆ. ಸರಕಾರಕ್ಕೆ ಸಾಮಾಜಿಕ ಜವಾಬ್ದಾರಿ ಇರುವುದರಿಂದ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಸ್ವಲ್ಪಮಟ್ಟಿನ ತಪ್ಪು ನಡೆಯುವುದು ಸಹಜ. ಆದರೆ ಖಾಸಗಿ ಪ್ರಶಸ್ತಿ ಆಯ್ಕೆ ಮಾಡುವಾಗ ಪಾರದರ್ಶಕತೆ ಕಾಪಾಡಬೇಕಾಗಿದೆ ಎಂದು ಕಿವಿಮಾತು ಹೇಳಿದರು. 

ತಾಪಂ ಸದಸ್ಯ ರಾಜು ಪೂಜಾರಿ, ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ವೆಂಕಟೇಶ ಕಿಣಿ, ಪಾರ್ವತಿ ಟೀಚರ್ ಉಪಸ್ಥಿತರಿದ್ದರು. ಜಾದೂಗಾರ ಓಂ ಗಣೇಶ ಉಪ್ಪುಂದ ಪ್ರಾಸ್ತಾವಿಕ ಮಾತನಾಡಿದರು. ಕೃಷ್ಣಮೂರ್ತಿ ಉಡುಪ ಸ್ವಾಗತಿಸಿದರು. ಗಣಪತಿ ಹೋಬಳಿದಾರ್ ವಂದಿಸಿದರು. ಸುಧಾಕರ ಪಿ. ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com