ಫೇಸ್‌ಬುಕ್‌ನಲ್ಲಿ ಪ್ರೇಮ: ಯುವತಿಗೆ ಲಕ್ಷಾಂತರ ವಂಚನೆಉಡುಪಿ: ಫೇಸ್‌ಬುಕ್ ಸಾಮಾಜಿಕ ತಾಣದ ದುರುಪಯೋಗದ ಇನ್ನೊಂದು ಅವಾಂತರ ಬಯಲಾಗಿದೆ. ದ.ಕ. ಜಿಲ್ಲೆಯ ಕೊಣಾಜೆಯ ಇಲಿಯಾಸ್ (24) ಎಂಬಾತ ಫೇಸ್‌ಬುಕ್‌ನಲ್ಲಿ ನಕಲಿ ಖಾತೆಯೊಂದನ್ನು ತೆರೆದು, ಉಡುಪಿ ಜಿಲ್ಲೆಯ ಯುವತಿಯೊಬ್ಬಳಿಗೆ ಲಕ್ಷಾಂತರ ರು. ಮೋಸ ಮಾಡಿದ್ದಾನೆ. ಇದೇ ರೀತಿ ಹತ್ತಾರು ಹೆಣ್ಣು ಮಕ್ಕಳಿಗೆ ಮೋಸ, ಬ್ಲಾಕ್‌ಮೇಲ್ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ.
 ಕೊಣಾಜೆಯ ಹಮೀದ್ ಎಂಬವರ ಮಗ ಇಲಿಯಾಸ್ ಎಂಬಾತ ರಾಹುಲ್ ಶೆಟ್ಟಿ ಎಂಬ ಸುಳ್ಳು ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಖಾತೆ ಹೊಂದಿದ್ದು, ಅದರ ಮೂಲಕ ಹದಿಹರೆಯದ ಯುವತಿಯರಿಗೆ ಗೆಳೆತನದ ಆಹ್ವಾನ ಕಳುಹಿಸುತ್ತಿದ್ದ, ಈ ಆಹ್ವಾನವನ್ನು ಸ್ವೀಕರಿಸಿದ ಯುವತಿಯರಿಗೆ ಫೇಸ್ ಬುಕ್‌ನಲ್ಲಿಯೇ ತಾನೊಬ್ಬ ಕಾನೂನು ಕಾಲೇಜಿನ ವಿದ್ಯಾರ್ಥಿ ಎಂದೆಲ್ಲ ಹೇಳಿಕೊಂಡು, ಸಲುಗೆ ಬೆಳೆಸಿ ಮದುವೆಯ ಪ್ರಸ್ತಾಪ ಇಡುತ್ತಾನೆ, ಒಪ್ಪಿಕೊಂಡ ಹುಡುಗಿಯರನ್ನು ಭಾವನಾತ್ಮಕವಾಗಿ ಬಳಸಿಕೊಂಡು ಹಣ, ಚಿನ್ನಾಭರಣ ಪಡೆದು ಕೊನೆಗೆ ಮದುವೆಯೂ ಆಗದೇ ಚಿನ್ನಾಭರಣಗಳನ್ನೂ ನೀಡದೆ ವಂಚಿಸುತ್ತಿದ್ದ.
 ಪ್ರಸ್ತುತ ಈತನಿಂದ ವಂಚನೆಗೊಳಗಾದ ಉಡುಪಿ ತಾಲೂಕಿನ ಕೆಮ್ತೂರಿನ ಯುವತಿಯೊಬ್ಬಳ ಮನೆಯವರು ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2 ತಿಂಗಳ ಹಿಂದೆ ಪರಿಚಯವಾಗಿದ್ದ: ಈ ಯುವತಿಯನ್ನು ಇಲಿಯಾಸ್ 2 ತಿಂಗಳ ಹಿಂದೆ ಫೇಸ್‌ಬುಕ್ ಮೂಲಕ ರಾಹುಲ್ ಶೆಟ್ಟಿ ಎಂದು ಪರಿಚಯ ಮಾಡಿಕೊಂಡಿದ್ದ. ಆತನ ಮಾತಿಗೆ ಮರುಳಾದ ಯುವತಿ ಆತನನ್ನು ಮದುವೆಯಾಗುವ ಹಗಲುಗನಸು ಕಂಡಿದ್ದಳು. ಆತ ತಾನು ಕಷ್ಟದಲ್ಲಿದ್ದೇನೆ ಎಂದಾಗ ಈ ಯುವತಿ ಮನೆಯಿಂದ 4 ಬಾರಿ ಸುಮಾರು ರು. 4 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಆತನಿಗೆ ನೀಡಿದ್ದಳು. ಇದು ಮನೆಯವರಿಗೆ ಗೊತ್ತಾಗಿ ವಿಚಾರಿಸಿದಾಗ ಆಕೆ ಈ ರಾಹುಲ್ ಶೆಟ್ಟಿಯ ಹೆಸರು ಹೇಳಿದ್ದಾಳೆ.
 ಮನೆಯವರು ಬುಧವಾರವೇ ಈತನ ಬಗ್ಗೆ ಪೊಲೀಸರಿಗೆ ಬಾಯಿಮಾತಲ್ಲಿ  ದೂರು ನೀಡಿದ್ದಾರೆ.
ಪೊಲೀಸರು ದೂರು ತೆಗೆದುಕೊಂಡು ಸುಮ್ಮನಾಗಿದ್ದಾರೆ. ಗುರುವಾರ ಈ ಯುವತಿಯ ಮನೆಯವರು ಆತ ವಾಸವಾಗಿರುವ ಮಣಿಪಾಲದ ಪೆರಂಪಳ್ಳಿ ರಸ್ತೆಯಲ್ಲಿನ ಶ್ರೀಮಂತರು ವಾಸಿಸುವ ಸೆವೆನ್ತ್ ಹೆವೆನ್ ಎಂಬ ವಸತಿ ಸಂಕೀರ್ಣದ ಫ್ಲಾಟ್‌ಗೆ ಹೋಗಿ ಚೆನ್ನಾಗಿ ತದುಕಿದ್ದಾರೆ, ಆಗ ತನ್ನ ಹೆಸರು ರಾಹುಲ್ ಅಲ್ಲ, ಇಲಿಯಾಸ್ ಎಂದು ಒಪ್ಪಿಕೊಂಡು ಅಲ್ಲಿಂದ ಕಾಲು ಕಿತ್ತಿದ್ದಾನೆ.
ಠಾಣೆಯಲ್ಲಿ ಬಯಲಾದ ನಾಟಕ: ಅಲ್ಲಿಂದ ಓಡಿ ಬಂದ ಈ ಇಲಿಯಾಸ್ ನೇರವಾಗಿ ಬಂದದ್ದು ಮಣಿಪಾಲ ಠಾಣೆಗೆ, ತನ್ನ ಮೇಲೆ ಗುಂಪೊಂದು ಹಲ್ಲೆ ಮಾಡಿದೆ ಎಂದು ದೂರು ಹೇಳಿಕೊಂಡಿದ್ದ.
 ಪೊಲೀಸರು ಇನ್ನೇನು ಆತನ ದೂರನ್ನು ದಾಖಲಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಯುವತಿಯ ಮನೆಯವರು ವಿವಿಧ ಹಿಂದೂ ಸಂಘಟನೆಗಳ ನಾಯಕರೊಂದಿಗೆ ಠಾಣೆಗೆ ಬಂದರು. ಅಲ್ಲಿ ಈ ಇಲಿಯಾಸನ ನಾಟಕ ಬಹಿರಂಗವಾಯಿತು. ಪೊಲೀಸರು ಇಲಿಯಾಸನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಅನೇಕ ಯುವತಿಯರಿಗೆ ವಂಚನೆ ಸಾಧ್ಯತೆ: ನಿರುದ್ಯೋಗಿಯಾಗಿದ್ದ ಇಲಿಯಾಸ್ ರು. 30 ಸಾವಿರ ಬಾಡಿಗೆಯ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದ, ಜೊತೆಗೆ ಐಷಾರಾಮಿ ಜೀವನ ನಡೆಸುತ್ತಿದ್ದ. ಆತನ ಇಂತಹ ಶೋಕಿ ಜೀವನ ನಡೆಸುವುದಕ್ಕೆ ಎಷ್ಟು ಯುವತಿಯರ ಬದುಕನ್ನು ಈ ರೀತಿ ಬಲಿ ಕೊಟ್ಟಿದ್ದಾನೋ ವಿಚಾರಣೆಯಿಂದ ಇನ್ನಷ್ಟೇ ಬಯಲಿಗೆ ಬರಬೇಕಾಗಿದೆ. ಪೊಲೀಸರ ಪ್ರಕಾರ ಈತ ಫೇಸ್‌ಬುಕ್ ಮೂಲಕ ಅನೇಕ ಯುವತಿಯರಿಗೆ ಈ ರೀತಿ ವಂಚಿಸಿದ ಸಾಧ್ಯತೆಗಳಿವೆ.
ಮಣಿಪಾಲ ವೃತ್ತ ನಿರೀಕ್ಷಕ ಬಿ.ಪಿ. ದಿನೇಶ್ ಕುಮಾರ್, ಉಡುಪಿ ವೃತ್ತ ನಿರೀಕ್ಷಕ ಮಾರುತಿ ನಾಯಕ್, ಮಣಿಪಾಲ ಠಾಣಾಧಿಕಾರಿ ರವಿ ಕುಮಾರ್ ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.
 ಗುರುವಾರ ಮಣಿಪಾಲ ಠಾಣೆಗೆ ಬಜರಂಗದಳದ ನಾಯಕ ಸುನಿಲ್ ಕೆ.ಆರ್., ವಿಹಿಂಪ ನಾಯಕ ಸುಪ್ರಸಾದ್ ಬೈಕಂಪಾಡಿ, ನಮೋ ಬ್ರಿಗೇಡ್‌ನ ಶ್ರೀಕಾಂತ ಶೆಟ್ಟಿ ಮುಂತಾದವರು ತಮ್ಮ ಬೆಂಬಲಿಗರೊಂದಿಗೆ ಮುತ್ತಿಗೆ ಹಾಕಿ, ಆರೋಪಿಯನ್ನು ಬಂಧಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com