ರಾಷ್ಟ್ರಕವಿ ಜಿ.ಎಸ್. ಎಸ್. ಇನ್ನಿಲ್ಲ

ಬೆಂಗಳೂರು: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಇನ್ನಿಲ್ಲ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಿ.ಎಸ್ಎಸ್ ಬೆಂಗಳೂರಿನ ಬನಶಂಕರಿಯ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಡಿಸೆಂಬರ್ 26ರಂದು ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಜ್ಞಾನಭಾರತಿಯ ಕಲಾಗ್ರಾಮದಲ್ಲಿ ಜಿಎಸ್ಎಸ್ ಅವರ ಅಂತ್ಯಕ್ರಿಯೆ ನೆರವೇರಲಿದೆ. ಅಂದು ಬೆಳಗ್ಗೆ 10ರಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. 
2006ರಲ್ಲಿ ಶಿವರುದ್ರಪ್ಪ ಅವರಿಗೆ ರಾಷ್ಟ್ರಕವಿ ಎಂಬ ಬಿರುದು ನೀಡಿ ಗೌರವಿಸಲಾಗಿತ್ತು. 61ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಜಿ.ಎಸ್. ಶಿವರುದ್ರಪ್ಪ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರು.

ಶಿಕಾರಿಪುರದಲ್ಲಿ ಫೆಬ್ರವರಿ 7, 1926ರಲ್ಲಿ ಜನಿಸಿದ ಅವರು, 1946ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎ. ಆನರ್ಸ್, 1953ರಲ್ಲಿ ಎಂ.ಎ ಪ್ರಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಮೂರು ಸುವರ್ಣ ಪದಕಗಳನ್ನು ಪಡೆದರು. ಕುವೆಂಪುರವರ ಮೆಚ್ಚಿನ ಶಿಷ್ಯರಾಗಿ ಅವರ ಬರವಣಿಗೆ ಮತ್ತು ಜೀವನದಿಂದ ಪ್ರಭಾವಿತರಾಗಿದ್ದರು. ತಮ್ಮ ಗುರುಗಳಾದ ಕುವೆಂಪುರವರ ಮಾರ್ಗದರ್ಶನದಲ್ಲಿ ಬರೆದ 'ಸೌಂದರ್ಯ ಸಮೀಕ್ಷೆ' ಎಂಬ ಗ್ರಂಥಕ್ಕೆ ಪಿಹೆಚ್‌ಡಿ ಪದವಿ ಪಡೆದರು.

ಜಿಎಸ್ಎಸ್ ವೃತ್ತಿ ಬದುಕು: ತಾವು ಓದಿದ ಮೈಸೂರು ವಿಶ್ವವಿದ್ಯಾಲಯದಲ್ಲೇ 1949ರಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದರು 1963ರಲ್ಲಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ರೀಡರ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿ ಹೋಗಿ 1966ರ ವರೆಗೂ ಅಲ್ಲಿ ಸೇವೆ ಸಲ್ಲಿಸಿದರು. 1966ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿ ಆಯ್ಕೆಯಾಗಿ 1985ರವರೆಗೂ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು. ಅವರ ಕಾಲದಲ್ಲೇ ಕನ್ನಡ ವಿಭಾಗವು ಕನ್ನಡ ಅಧ್ಯಯನ ಕೇಂದ್ರವಾಯಿತು.

ಕವನಸಂಕಲನಗಳು: ರಾಜ್ಯದ 3ನೇ ರಾಷ್ಟ್ರಕವಿ ಎಂಬ ಖ್ಯಾತಿಗೆ ಒಳಗಾಗಿದ್ದ ಶಿವರುದ್ರಪ್ಪ ನವರು ಹಲವು ಕವನ ಸಂಕಲನಗಳನ್ನ ರಚಿಸಿದ್ದಾರೆ. ಸಾಮಗಾನ, ಚೆಲುವುಒಲವು, ದೇವಶಿಲ್ಪಿ, ದೀಪದಹೆಜ್ಜೆ, ಅನಾವರಣ, ತೆರೆದಬಾಗಿಲು, ಗೋಡೆ, ವ್ಯಕ್ತಮಧ್ಯಓರೆಅಕ್ಷರಗಳು, ತೀರ್ಥವಾಣಿ, ಕಾರ್ತಿಕ, ಕಾಡಿನ ಕತ್ತಲಲ್ಲಿ, ಪ್ರೀತಿ ಇಲ್ಲದ ಮೇಲೆ ಮತ್ತು ಚಕ್ರಗತಿ ಜಿಎಸ್ ಎಸ್ ರಚಿಸಿರುವ ಕವನಸಂಕಲನಗಳು

ಜಿಎಸ್ಎಸ್ ಅವರ ವಿಮರ್ಶೆ-ಗದ್ಯ: ಪರಿಶೀಲನ, ವಿಮರ್ಶೆಯ ಪೂರ್ವ ಪಶ್ಚಿಮ, ಸೌಂದರ್ಯ ಸಮೀಕ್ಷೆ(ಇದು ಅವರ ಪಿಹೆಚ್‌ಡಿ ಪ್ರಬಂಧ), ಕಾವ್ಯಾರ್ಥ ಚಿಂತನ, ಗತಿಬಿಂಬ, ಅನುರಣನ, ಪ್ರತಿಕ್ರಿಯೆ, ಕನ್ನಡ ಸಾಹಿತ್ಯ ಸಮೀಕ್ಷೆ, ಮಹಾಕಾವ್ಯ ಸ್ವರೂಪ, ಕನ್ನಡ ಕವಿಗಳ ಕಾವ್ಯಕಲ್ಪನೆ, ಹೊಸಗನ್ನಡ ಕವಿತೆಗಳಲ್ಲಿ ಕಾವ್ಯ ಚಿಂತನ, ಕುವೆಂಪು : ಪುನರವಲೋಕನ, ಸಮಗ್ರ ಗದ್ಯ ಭಾಗ ೧, ೨ ಮತ್ತು ೩ 

ಶಿವರುದ್ರಪ್ಪನವರ ಪ್ರವಾಸಕಥನ: ಮಾಸ್ಕೋದಲ್ಲಿ ೨೨ ದಿನ, ಇಂಗ್ಲೆಂಡಿನಲ್ಲಿ ಚತುರ್ಮಾಸ, ಅಮೆರಿಕದಲ್ಲಿ ಕನ್ನಡಿಗ, ಗಂಗೆಯ ಶಿಖರಗಳಲ್ಲಿ ಪ್ರಶಸ್ತಿ, ಪುರಸ್ಕಾರ: ಜಿ.ಎಸ್. ಶಿವರುದ್ರಪ್ಪನವರ ಅಪಾರ ಸಾಹಿತ್ಯ ಕೃಷಿಗೆ ಹಲವು ಪ್ರಶಸ್ತಿ, ಪುಸ್ಕಾರಗಳು ಬಂದಿವೆ. 1948ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1953ರಲ್ಲಿ ಪಂಪ ಪ್ರಶಸ್ತಿ, 1973ರಲ್ಲಿ ಸೋವಿಯತ್‌ ಲ್ಯಾಂಡ್ ನೆಹರೂ ಪ್ರಶಸ್ತಿ, ದಾವಣಗೆರೆಯಲ್ಲಿ ನಡೆದ ೬೧ನೇ ಅಖಿಲ-ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ, 2006ರಲ್ಲಿ ರಾಷ್ಟ್ರಕವಿ ಪುರಸ್ಕಾರ, 1982ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಗೌರವ, ಬೆಂಗಳೂರು ಮತ್ತು ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಲಭಿಸಿವೆ.

ಹಣತೆ
* ಜಿ.ಎಸ್ . ಶಿವರುದ್ರಪ್ಪ

ಹಣತೆ ಹಚ್ಚುತ್ತೇನೆ ನಾನೂ
ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ

ಹಣತೆ ಹಚ್ಚುತ್ತೇನೆ ನಾನೂ
ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ ಆಸೆಯಿಂದಲ್ಲ
ಕತ್ತಲಿನಿಂದ ಕತ್ತಲಿಗೆ ತಡಕಾಡಿಕೊಂಡು ಬಂದಿವೆ
ಹೆಜ್ಜೆ ಶತಮಾನದಿಂದಲೂ

ನಡು ನಡುವೆ ಒಂದಷ್ಟು ಬೆಳಕು ಬೇಕೆಂದು
ಆಗಾಗ ಕಡ್ಡಿ ಗೀಚಿದ್ದೇವೆ, ದೀಪ ಮುಡಿಸಿದ್ದೇವೆ.
ವೇದ, ಶಾಸ್ತ್ರ , ಪುರಾಣ, ಇತಿಹಾಸ, ಕಾವ್ಯ , ವಿಜ್ಞಾನಗಳ
ಮತಾಪು, ಪಟಾಕಿ, ಸುರುಸುರು ಬತ್ತಿ , ಹೂ ಬಾಣ ಸುಟ್ಟಿದ್ದೇವೆ.
ತಮಸೋಮ ಜ್ಯೋತಿರ್ಗಮಯ
ಎನ್ನುತ್ತಾ ಬರೀ ಬೂದಿಯನ್ನೇ ಕೊನೆಗೆ ಕಂಡಿದ್ದೇವೆ.

ನನಗೂ ಗೊತ್ತು, ಈ ಕತ್ತಲೆಗೆ
ಕೊನೆಯಿರದ ಬಾಯಾರಿಕೆ.
ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತಿಂದರೂ
ಕುಡಿದರೂ ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನುವ ಬಯಕೆ

ಆದರೆ ಹಣತೆ ಹಚ್ಚುತ್ತೇನೆ ನಾನೂ
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ
ಇರುವಷ್ಟು ಹೊತ್ತು ನಿನ್ನ ಮುಖ ನಾನು ನಿನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ
ಹಣತೆ ಆರಿದ ಮೇಲೆ, ನೀನು ಯಾರೋ? ಮತ್ತೆ
ನಾನು ಯಾರೋ?
('ಗೋಡೆ' ಕವನ ಸಂಕಲನ 1972)
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com