ನನಸಾದ ಕನಸು: ವಿಶ್ವದಾಖಲೆ ಬರೆದ ಗೋಪಾಲ ಖಾರ್ವಿ

ಮಲ್ಪೆ: ಲಿಮ್ಕಾ ದಾಖಲೆಗಾರ ಕೋಡಿ ಕನ್ಯಾಣದ 38ರ ಹರೆಯದ ಗೋಪಾಲ ಖಾರ್ವಿ ಅವರು ಕೈ-ಕಾಲು ಕಟ್ಟಿಕೊಂಡು ರವಿವಾರ ಮಲ್ಪೆಯಲ್ಲಿ 3.07 ಕಿ.ಮೀ. ಈಜಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಕಳೆದ ಬಾರಿ ಕೆಲವೊಂದು ತಾಂತ್ರಿಕ ಕಾರಣಗಳಿಂದ ಗಿನ್ನೆಸ್‌ ಪುಸ್ತಕದಲ್ಲಿ ಹೆಸರು ಬರೆಸಿಕೊಳ್ಳಲು ವಿಫಲರಾಗಿದ್ದ ಈ ಬಾರಿ ಎಲ್ಲ ಪೂರ್ವ ಸಿದ್ದತೆಗಳನ್ನು ಮಾಡಿಕೊಂಡು ಮತ್ತೆ ತನ್ನ ಕೈಕಾಲುಗಳನ್ನು ಕಬ್ಬಿಣದ ಸಂಕೋಲೆಯಿಂದ ಬಂಧಿಸಿ ಕೈಯನ್ನು ಬೆನ್ನಿನ ಹಿಂಭಾಗಕ್ಕೆ ಕಟ್ಟಿ ಕೇವಲ ಸೊಂಟ ಮತ್ತು ಎದೆಯ ಸಹಾಯದಿಂದ ಸೈಂಟ್‌ ಮೇರಿಸ್‌ ದೀÌಪದಿಂದ ಮಲ್ಪೆ ಬೀಚ್‌ವರರೆಗೆ 3.07 ಕಿ. ಮೀ. ಈಜಿ ಹೊಸ ಗಿನ್ನೆಸ್‌ ದಾಖಲೆ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೈಕಾಲುಗಳನ್ನು ಕಬ್ಬಿಣದ ಸಂಕೋಲೆಯಲ್ಲಿ ಬಿಗಿದು ಬೆನ್ನಿನ ಹಿಂಭಾಗಕ್ಕೆ ಕಟ್ಟಿ ಬೀಗ ಜಡಿದು ಬೆಳಗ್ಗೆ 7.37ರ ವೇಳೆ ಸೈಂಟ್‌ಮೇರೀಸ್‌ ದೀÌಪದಿಂದ ಭೋರ್ಗೆರೆವ ಕಡಲಿಗೆ ಧುಮುಕಿದ ಖಾರ್ವಿ ಅವರು ಮಲ್ಪೆ ಬೀಚ್‌ವರೆಗೆ 3.07 ಕಿ.ಮೀ ದೂರವನ್ನು ಕೇವಲ 2 ಗಂಟೆ 43 ನಿಮಿಷ 35 ಸೆಕೆಂಡುಗಳಲ್ಲಿ ಕ್ರಮಿಸಿ ಗಿನ್ನೆಸ್‌ ದಾಖಲೆ ಬುಕ್‌ನಲ್ಲಿ ತನ್ನ ಹೆಸರು ದಾಖಲಿಸಿದರು. ಸೈಂಟ್‌ ಮೇರಿಸ್‌ ದೀÌಪದಲ್ಲಿ ಉಡುಪಿ ವೃತ್ತ ನಿರೀಕ್ಷಕ ಮಾರುತಿ ನಾಯಕ್‌ ಅವರು ಖಾರ್ವಿ ಅವರ ಕೈ-ಕಾಲುಗಳಿಗೆ ಕೋಳ ತೊಡಿಸಿದರು.

ಲಂಡನ್‌ನ ಗಿನ್ನೆಸ್‌ ದಾಖಲೆ ತೀರ್ಪುಗಾರ ಪ್ರವೀಣ್‌ ಪಟೇಲ್‌ ಎಂ. ಆರ್‌. ದಾಖಲೆಯನ್ನು ಅಧಿಕೃತವಾಗಿ ಘೋಷಣೆ ಮಾಡಿ ದಾಖಲೆ ಪತ್ರವನ್ನು ನೀಡಿ ಪುರಸ್ಕರಿಸಿದರು.

ಇತರ ಕ್ಷೇತ್ರಗಳಲ್ಲಿ ಗಿನ್ನೆಸ್‌ ದಾಖಲೆ ಹೊಂದಿರುವ ಬೆಂಗಳೂರಿನ ಎಸ್‌. ಸಿದ್ದರಾಜು ಮತ್ತು ಡೇನಿಯಲ್‌ ಮೆಂತೋರೊ ಅವರೊಂದಿಗೆ ಸ್ಥಳೀಯ ಕೋಡಿ ಕನ್ಯಾಣದ ಅಣ್ಣಪ್ಪ ಬಿ. ಕುಂದರ್‌ ಅವರು ಈ ದಾಖಲೆ ಈಜಿಗೆ ಚಾಲನೆ ಹಾಗೂ ಮಾರ್ಗದರ್ಶನ ನೀಡಿದ್ದಾರೆ.

ಈವರೆಗೆ ಯಾರೂ ಈ ತೆರೆನಾಗಿ ಈಜಿ ಗಿನ್ನೆಸ್‌ ದಾಖಲೆ ಮಾಡಿಲ್ಲ. ಈ ಹಿಂದೆ ಕೈಕಾಲುಗಳನ್ನು ಸಂಕೋಲೆಯಿಂದ ಬಿಗಿದು ಸೈಂಟ್‌ಮೇರಿಸ್‌ ದೀÌಪದಿಂದ ಮಲ್ಪೆ ಬೀಚ್‌ವರೆಗೆ 3 ಗಂಟೆ 26 ನಿಮಿಷ 40 ಸೆಕೆಂಡುಗಳಲ್ಲಿ ಈಜಿ ಲಿಮ್ಕಾ ದಾಖಲೆಯನ್ನು ಮಾಡಿದ್ದರು. 2003ರಲ್ಲಿ ಹಂಗಾರಕಟ್ಟೆ -ಸೈಂಟ್‌ ಮೇರಿಸ್‌ ದೀÌಪ - ಕಟಪಾಡಿ ಮಟ್ಟು ವರೆಗೆ 40 ಕಿ. ಮೀ. ದೂರವನ್ನು ನಿರಂತರ ಫೀÅಸ್ಟೈಲಲ್ಲಿ ಕೇವಲ 6 ಗಂಟೆಯಲ್ಲಿ ಹಾಗೂ 2004ರಲ್ಲಿ ಗಂಗೊಳ್ಳಿಯಿಂದ ಮಲ್ಪೆಯವರೆಗೆ 80 ಕಿ. ಮೀ. ದೂರವನ್ನು 11 ಗಂಟೆಯಲ್ಲಿ ಕ್ರಮಿಸಿ ಸಾಧನೆಗೈದಿದ್ದರು.

ಕಳೆದ ಸಲ ಕೈ ತಪ್ಪಿದ ದಾಖಲೆ

2012ರ ಜನವರಿ 8ರಂದು ಸೈಂಟ್‌ ಮೇರಿಸ್‌ ದೀÌಪದಿಂದ ಮಲ್ಪೆ ಬೀಚ್‌ ವರೆಗೆ 2 ಗಂಟೆ 45 ನಿಮಿಷ 14 ಸೆಕೆಂಡುಗಳಲ್ಲಿ ಕ್ರಮಿಸಿದ್ದ ಖಾರ್ವಿ ಅವರ ಸಾಹಸವನ್ನು ಜಿಪಿಎಸ್‌ ಕೆಮರಾದಲ್ಲಿ ಚಿತ್ರಿಸಿಕೊಳ್ಳದ ಕಾರಣ ಗಿನ್ನೆಸ್‌ ದಾಖಲೆ ಸಂಸ್ಥೆ ಅವರ ಸಾಹಸಕ್ಕೆ ಮಾನ್ಯತೆ ನೀಡಿರಲಿಲ್ಲ. ದಾಖಲೆಗಾಗಿ ಖರ್ಚು ಮಾಡಿದ ಲಕ್ಷಾಂತರ ರೂಪಾಯಿ ನೀರಿನ ಮೇಲೆ ಮಾಡಿದ ಹೋಮದಂತಾಯಿತು. ಈ ಬಾರಿ ಲಂಡನ್‌ನಿಂದ ಗಿನ್ನೆಸ್‌ ಅಧಿಕಾರಿಗಳನ್ನು ಇಲ್ಲಿಗೆ ಕರೆಸಲಾಗಿದ್ದು ಎಲ್ಲ ವ್ಯವಸ್ಥೆಯೊಂದಿಗೆ ಈ ಸಾಹಸಕ್ಕೆ ಇಳಿದಿದ್ದರು.

ಖಾರ್ವಿಯ ಸಾಧನೆಯನ್ನು ನೋಡಲು ಅವರ ಅಭಿಮಾನಿಗಳ ಮಹಾಪೂರವೇ ಹರಿದು ಬಂದಿತ್ತು. ಖಾರ್ವಿ ಬೀಚ್‌ ತಲುಪುತ್ತಿದ್ದಂತೆಯೇ ನೆರೆದಿದ್ದ ಎಲ್ಲರೂ ಹರ್ಷೋದ್ಗಾರದೊಂದಿಗೆ ಕುಣಿದಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸರಕಾರಿ ಕೆಲಸಕ್ಕೆ ಪ್ರಯತ್ನ

ಗೋಪಾಲ ಖಾರ್ವಿ ಅವರನ್ನು ಅಭಿನಂದಿಸಿ ಮಾತನಾಡಿದ ಸಚಿವ ವಿನಯ ಕುಮಾರ್‌ ಸೊರಕೆ ಮತ್ತು ಶಾಸಕ ಪ್ರಮೋದ್‌ ಮಧ್ವರಾಜ್‌ ಅವರು, ಇದೊಂದು ಅದ್ಭುತ ದಾಖಲೆ. ಬಡತನ ಸಾಧನೆಗೆಂದೂ ಅಡ್ಡಿಯಾಗದು ಎಂದು ಗೋಪಾಲ ಖಾರ್ವಿ ತೋರಿಸಿಕೊಟ್ಟಿದ್ದಾರೆ. ಅವರ ಈ ಅಮೋಘ ಸಾಧನೆಗೆ ತಗಲಿದ ವೆಚ್ಚಕ್ಕೆ ಸರಕಾರದಿಂದ ನೆರವು ಕಲ್ಪಿಸಿ ಕೊಡುವುದರ ಜೊತೆಗೆ ಗೋಪಾಲ ಖಾರ್ವಿ ಅವರಿಗೆ ಸರಕಾರಿ ಉದ್ಯೋಗವನ್ನು ದೊರಕಿಸಿ ಕೊಡುವಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಸಂಸದ ಜಯಪ್ರಕಾಶ್‌ ಹೆಗ್ಡೆ, ಮಾಜಿ ಶಾಸಕ ಕೆ. ರಘುಪತಿ ಭಟ್‌, ಮೀನು ಮಾರಾಟ ಫಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಎ. ಸುವರ್ಣ, ಜಿ.ಪಂ. ಅಧ್ಯಕ್ಷ ಉಪೇಂದ್ರ ನಾಯಕ್‌, ಕೋಡಿಕನ್ಯಾಣ ಗ್ರಾ.ಪಂ. ಅಧ್ಯಕ್ಷೆ ಜಲಜಾ ಪೂಜಾರ್ತಿ, ಡಾ| ವೈ. ರವೀಂದ್ರನಾಥ್‌ ರಾವ್‌, ಎನ್‌. ಎಂ. ಖಾರ್ವಿ ಮೊದಲಾದವರು ಈ ಕಡಲವೀರನ ದಾಖಲೆಗೆ ಸಾಕ್ಷಿಯಾದರು.

ಬಡ ಕುಟುಂಬ

ಕೋಡಿ ಕನ್ಯಾನದ ನಾಗೇಶ ಖಾರ್ವಿ ಮತ್ತು ರಾಧಾ ಖಾರ್ವಿ ದಂಪತಿಗಳ ಪುತ್ರನಾಗಿ ಜನಿಸಿದ ಗೋಪಾಲ ಖಾರ್ವಿಗೆ ಬಾಲ್ಯದಲ್ಲಿಯೇ ಈಜಿನ ಬಗ್ಗೆ ಒಲವು. ಕಿತ್ತು ತಿನ್ನುವ ಬಡತನದಿಂದಾಗಿ ಶಾಲೆಗೆ ತಿಲಾಂಜಲಿ ಇಟ್ಟು ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿದರು. ಮುಂಜಾನೆ 3 ಗಂಟೆಗೆ ಎದ್ದು ಮೀನು ಹಿಡಿಯಲು ಹೋದರೆ ಹಗಲಲ್ಲಿ ಗೂಡ್ಸ್‌ ಟೆಂಪೋ ಓಡಿಸುತ್ತಿದ್ದಾರೆ. ಆದರೆ ಏನಾದರೂ ಸಾಧಿಸಬೇಕೆಂಬ ಛಲ ಅವರಲ್ಲಿ ಅಚಲವಾಗಿ ಮೂಡಿತ್ತು. ಇಂದು ಅವರ ಕನಸು ನನಸಾಗಿದೆ.

ಸಾಧನೆಯ ಹಿಂದೆ ವೇದನೆ

ಬಡ ಗೋಪಾಲ ಖಾರ್ವಿಯವರಿಗೆ ದಾಖಲೆಯಲ್ಲಿ ಸ್ಪರ್ಧಿಸಲು ಸುಮಾರು 10.50 ಲ.ರೂ. ಹೊಂದಿಸಬೇಕಾದ ಅನಿವಾರ್ಯತೆ ಎದುರಾಯಿತು. ಆಗ ಇವರು ಹಣ ಹೊಂದಿಸಲು ಪಟ್ಟ ಕಷ್ಟ ಹೇಳತೀರದು. ದಾನಿಗಳಿಂದ ಅಲ್ಪ-ಸ್ವಲ್ಪ ಸಹಕಾರವನ್ನು ಪಡೆದು ಅದು ಸಾಲದಿದ್ದಾಗ, ಮನೆಯ ಕಾಗದ ಪತ್ರಗಳನ್ನ ಒತ್ತೆಯಿಟ್ಟು, ಚಿನ್ನಾಭರಣಗಳನ್ನು ಅಡವಿಟ್ಟು, ತನ್ನ ಹಲವು ಸ್ನೇಹಿತರಿಂದ ಸಾಲ ಪಡೆದು ಸಾಧನೆ ಮಾಡಿದ್ದಾರೆ . ಆದರೆ ಸಾಧನೆ ಸಾಕಾರಗೊಂಡ ಅನಂತರ ಸಾಲದ ಹೊರೆ ಚಿಂತೆಗೀಡು ಮಾಡುವಂತೆ ಮಾಡಿದೆ.

ಸರಕಾರದ ಸಹಕಾರ ಶೂನ್ಯ

ಗಿನ್ನೆಸ್‌ ದಾಖಲೆಗಾಗಿ ತರಬೇತುಗೊಳ್ಳುವುದು ಖಾರ್ವಿಯವರಿಗೆ ಸವಾಲಾಗಿ ಪರಿಣಮಿಸಿಲ್ಲ. ಬದಲಾಗಿ ಆರ್ಥಿಕ ಕ್ರೋಡೀಕರಣ ಸವಾಲಾಗಿ ಪರಿಣಮಿಸಿತ್ತು, ಸಂಬಧಪಟ್ಟ ಸಚಿವರುಗಳಿಗೆ, ಇಲಾಖೆಗಳಿಗೆ ಮನವಿ ಸಲ್ಲಿಸಿದರು. ಭರವಸೆ ಹೊರತುಪಡಿಸಿ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಖಾರ್ವಿಯವರ ಮನದಾಳದ ಮಾತು. ಕ್ರೀಡಾ ಇಲಾಖೆಯಿಂದ ಕೋಟ್ಯಾಂತರ ರೂಪಾಯಿ ಕ್ರೀಡೆಗಾಗಿ ಮೀಸಲಿದ್ದರೂ ಇಂತಹ ಸಾಧಕನಿಗೆ ನೆರವು ದೊರಕುತ್ತಿಲ್ಲ.

8 ಕಿ. ಮೀ. ದೂರ ಈಜಬಲ್ಲೆ

ನಾನು 8 ಕಿ. ಮೀ. ದೂರ ಈಜಲು ಶಕ್ತನಾಗಿದ್ದೆ. ಆದರೆ ದಾಖಲೆಯ ಅಂತರ ಮೂರು ಕಿ. ಮೀ ಮಾತ್ರವಿತ್ತು. ಕೈ ಮತ್ತು ಕಾಲುಗಳನ್ನು ಕಬ್ಬಿಣದ ಸರಪಳಿಯಲ್ಲಿ ಕಟ್ಟುವ ಕಾರಣ ತಲೆ ಸೊಂಟ ಮತ್ತು ಕಾಲನ್ನು ಸಮತೋಲನದಲ್ಲಿರಿಸಿಕೊಂಡು ಈಜಬೇಕಾಗುತ್ತದೆ.

ಆರಂಭದಲ್ಲಿ ಗಾಳಿ, ನೀರಿನ ವ್ಯತ್ಯಯದಿಂದಾಗಿ ವೇಗಕ್ಕೆ ಸ್ವಲ್ಪ ತೊಡಕಾಗಿದ್ದರೂ ನನ್ನಲ್ಲಿ ಸಾಧಿಸಬೇಕನ್ನು ಛಲ ಹಾಗೂ ವಿಶ್ವಾಸವಿದ್ದುದರಿಂದ ಯಾವುದೂ ಅಡ್ಡಿಯಾದಂತೆ ಕಂಡು ಬಂದಿಲ್ಲ. ಈಜಿನಲ್ಲಿ ಹೊಸತನ ಸೃಷ್ಟಿಸಿ ದಾಖಲೆ ಮಾಡಬೇಕು ಮತ್ತು ಉಡುಪಿಗೆ ಹೆಸರು ತರಬೇಕು ಎನ್ನುವ ಕನಸಿತ್ತು. ದಾನಿಗಳು, ಸಂಘಸಂಸ್ಥೆಗಳು ಹಾಗೂ ಊರಿನ ಅಭಿಮಾನಿಗಳ ಸಹಕಾರ ಪ್ರೋತ್ಸಾಹದಿಂದ ಸಾಧಿಸಲು ಸಾಧ್ಯವಾಗಿದೆ. ಅದರಲ್ಲೂ ಮಲ್ಪೆಯ ಜನರು ಹೆಚ್ಚು ಸಹಕಾರ ನೀಡಿದ್ದಾರೆ. ದಾಖಲೆಗಾಗಿ ಸುಮಾರು 12.50 ಲ.ರೂ. ವೆಚ್ಚವಾಗಿದೆ. 8.5 ಲ.ರೂ. ಲಂಡನ್‌ ಅಧಿಕಾರಿಗಳಿಗೆ ನೀಡಬೇಕಾಗುತ್ತದೆ. ಸಾಧನೆಗಾಗಿ ಬ್ಯಾಂಕಿನಿಂದ 6 ಲ.ರೂ., ಇತರರಿಂದ 2 ಲ.ರೂ. ಒಟ್ಟು 8 ಲ.ರೂ. ಸಾಲ ಮಾಡಿದೇªನೆ. ರಾಜ್ಯೋತ್ಸವ ಪ್ರಶಸ್ತಿ ಬಿಟ್ಟರೆ ಸರಕಾರದಿಂದ ಇದುವರೆಗೂ ಯಾವುದೇ ಪ್ರೋತ್ಸಾಹ ಸಹಕಾರ ಸಿಕ್ಕಿಲ್ಲ.

ಭಾರತೀಯನ ದಾಖಲೆಯಾಗಿರಲಿ

ನಾನು ಮಾಡಿದ ಗಿನ್ನೆಸ್‌ ದಾಖಲೆಯಿಂದ ನನ್ನ ಹೆಸರು, ಕೀರ್ತಿ ಮುಖ್ಯವಲ್ಲ . ಈ ದಾಖಲೆ ಕೇವಲ ನನ್ನ ದಾಖಲೆಯಾಗಿ ದಾಖಲಾಗದೆ, ಪ್ರಪಂಚದಲ್ಲಿ ಭಾರತೀಯನೋರ್ವನ ದಾಖಲೆಯಾಗಿ ಉಳಿಯಲಿ.

- ಗೋಪಾಲ ಖಾರ್ವಿ

ಈಸಬೇಕು ಇದ್ದು ಜೈಸಬೇಕು

ಈಸಬೇಕು ಇದ್ದು ಜೈಸಬೇಕು ಎಂದು ದಾಸವಾಣಿಯಂತೆ ಗೋಪಾಲ ಖಾರ್ವಿ ಮಹಾನ್‌ ಸಾಧನೆ ಮಾಡಿ ಯುವಪೀಳಿಗೆಗೆ ಮಾದರಿಯಾಗಿದ್ದಾರೆ. ಅವರ ಸಾಧನೆಗೆ ಭಗವಂತ ಫಲ ನೀಡಿದ್ದಾನೆ.

- ಶೀರೂರು ಶ್ರೀಗಳು

ಖಾರ್ವಿ ನಮಗೂ ಸ್ಪೂರ್ತಿ

ಖಾರ್ವಿ ಸಾಧನೆ ಯುವಕರಿಗೆ ಮಾತ್ರವಲ್ಲ ಪೊಲೀಸ್‌ ಇಲಾಖೆಗೂ ಸ್ಫೂರ್ತಿ ನೀಡಿದೆ. ಮನೋಶಕ್ತಿ ಇದ್ದರೆ ಯಾವ ಸಾಧನೆಯನ್ನೂ ಮಾಡಬಹುದು ಎಂಬುವುದಕ್ಕೆ ಖಾರ್ವಿಯೇ ಸಾಕ್ಷಿಯಾಗಿದ್ದಾರೆ.

- ಎಸ್ಪಿ ಡಾ|ಬೋರಲಿಂಗಯ್ಯ

ದಾಖಲೆಗೆ ಹೊಸ ಸೇರ್ಪಡೆ

ಗಿನ್ನೆಸ್‌ ಬುಕ್‌ನಲ್ಲಿ ಇದುವರೆಗೆ ಈ ತೆರನಾದ ದಾಖಲೆಯಾಗಿಲ್ಲ. ಗಿನ್ನೆಸ್‌ ದಾಖಲೆಗೆ ಇದು ಹೊಸ ಸೇರ್ಪಡೆಯಾದರೂ ದಾಖಲೆಗೈಯಲು ಎರಡು ಕಿ. ಮೀ. ದೂರದ ಮಿತಿ ನೀಡಲಾಗಿತ್ತು. ಇಲ್ಲಿ ಸಮಯಾವಕಾಶ ಮುಖ್ಯವಲ್ಲ . ಅಂತರ ಪ್ರಾಮುಖ್ಯವಾಗಿತ್ತು. ಆದರೆ ಖಾರ್ವಿ 3.07 ಕಿ. ಮಿ. ದೂರ ಕ್ರಮಿಸಿ ಸಾಧನೆ ಗೈದಿದ್ದಾರೆ.

- ಪ್ರವೀಣ್‌ ಪಟೇಲ್‌ ಎಂ. ಆರ್‌., ಗಿನ್ನೆಸ್‌ ತೀರ್ಪುಗಾರರು, ಲಂಡನ್‌ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com