ಕುಂದಪ್ರಭ ಕೋ.ಮ. ಕಾರಂತ ಪ್ರಶಸ್ತಿಗೆ ಹರೀಶ್ ಹಂದೆ ಆಯ್ಕೆ

ಕುಂದಾಪುರ: ವಿದ್ಯುತ್ ಇಲ್ಲದ ಹಳ್ಳಿ ಪ್ರದೇಶಗಳಲ್ಲೂ ಬೆಳಕು ಹರಿಯುವಂತೆ ಮಾಡಿ ಗ್ರಾಮೀಣ ಜನರ ಕತ್ತಲ ಬದುಕಿಗೆ ಬೆಳಕು ತುಂಬಿದ ಸಾಧಕ ಹರೀಶ್ ಹಂದೆಯವರನ್ನು ಕುಂದಾಪುರದ ಕುಂದಪ್ರಭ-ಕೋ.ಮ.ಕಾರಂತ ಪ್ರತಿಷ್ಠಾನ ಪ್ರದಾನ ಮಾಡುವ ಕೋ.ಮ.ಕಾರಂತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ. 

ಸೆಲ್ಕೊ ಇಂಡಿಯಾದ ಸ್ಥಾಪಕ ಹಾಗೂ ಆಡಳಿತ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಹರೀಶ ಹಂದೆ ಓರ್ವ ಅಂತಾರಾಷ್ಟೀಯ ಮಟ್ಟದ ಪ್ರಯೋಗಶೀಲ, ಉದ್ಯಮಿ ಹಾಗೂ ಸಂಶೋಧಕರಾಗಿದ್ದು ಭಾರತದ ಗ್ರಾಮೀಣ ಪ್ರದೇಶದ ಜನರ ಏಳಿಗೆ ಹಾಗೂ ಸೌರಶಕ್ತಿ ಬಗ್ಗೆ ಜನ ಜಾಗತಿ ಮೂಡಿಸುವ ಪ್ರಯತ್ನವನ್ನು ನಿರಂತರ ಸುಮಾರು 2 ದಶಕಗಳಿಂದ ಮಾಡುತ್ತಿದ್ದಾರೆ. 

ಕರ್ನಾಟಕ, ಕೇರಳ, ಗುಜರಾತ್ ರಾಜ್ಯದ ಸುಮಾರು 1,25,000 ಮನೆಗಳಿಗೆ ಸಹಕಾರಿ ಬ್ಯಾಂಕ್, ಗ್ರಾಮೀಣ ಬ್ಯಾಂಕ್, ಸಂಘ-ಸಂಸ್ಥೆಗಳ ಮೂಲಕ ಸೋಲಾರ್ ದೀಪ ಅಳವಡಿಸಿದ್ದಾರೆ. 

ಉಡುಪಿ ಜಿಲ್ಲೆಯ ಹೆಮ್ಮೆಯ ಪುತ್ರರಾದ ಹರೀಶ್ ಹಂದೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಖರಗ್‌ಪುರ್‌ನಲ್ಲಿ ಪದವಿ ಪಡೆದು ಅಮೆರಿಕದ ಮಾಸಚ್ಯುಸೆಟ್ಸ್ ಯುನಿವರ್ಸಿಟಿಯಲ್ಲಿ ಮಾಸ್ಟರ್ಸ್‌ ಹಾಗೂ ಪಿಎಚ್‌ಡಿ ಪಡೆದವರು. ಶ್ರೀಲಂಕಾ ಹಾಗೂ ಡೊಮೆನಿಕ್ ರಿಪಬ್ಲಿಕ್‌ನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸೌರಶಕ್ತಿಯ ಬೆಳಕಿನ ಅಳವಡಿಕೆ ಬಗ್ಗೆ ಪ್ರಯೋಗ ಮಾಡಿದವರು.ಅಲ್ಲಿನ ಅನುಭವದಿಂದ ಭಾರತಕ್ಕೆ ಮರಳಿ 1994-95ರಲ್ಲಿ ಸೆಲ್ಕೊ ಇಂಡಿಯಾ ಸಂಸ್ಥೆ ಸ್ಥಾಪಿಸಿ, ಕತ್ತಲಲ್ಲಿರುವ ಬಡವರ ಹಾಗೂ ಗ್ರಾಮೀಣ ಪ್ರದೇಶದ ಜನರ ಜೀವನದಲ್ಲಿ ಹೊಸಬೆಳಕು ತುಂಬಲು ಆರಂಭಿಸಿದರು. ಏಷ್ಯಾದ ಅತ್ಯಂತ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾದ ಹಂದೆ 2011ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದಾರೆ.ಬಿಜಿನೆಸ್ ಇಂಡಿಯಾ ಪತ್ರಿಕೆ ರಾಷ್ಟ್ರದ 21 ಯುವ ನಾಯಕರಲ್ಲಿ ಒಬ್ಬರಾಗಿಯೂ ಇವರನ್ನು ಗುರುತಿಸಿದೆ. ಇಂಡಿಯಾ ಟುಡೇ 50 ಪ್ರಮುಖ ಪ್ರಯೋಗಶೀಲದ ನಾಯಕರಲ್ಲಿ ಇವರೊಬ್ಬರೆಂದು ಹೆಸರಿಸಿದೆ. 2014, ಜ.12ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com