ಜ.25ರಿಂದ ಉಡುಪಿ ಜಿಲ್ಲಾ ಕೃಷಿ ಉತ್ಸವ

ಕುಂದಾಪುರ:  ಉಡುಪಿ ಜಿಲ್ಲಾ ಮಟ್ಟದ ಕೃಷಿ ಉತ್ಸವಕ್ಕೆ ಸಂಬಂಧಿಸಿ ಕುಂದಾಪುರ ತಾಲ್ಲೂಕು ಪಂಚಾಯಿತಿ ಸಭಾಂಗಣ­ದಲ್ಲಿ ಶನಿವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿ­ಸಬೇಕಾಗಿದ್ದ ತಾಲ್ಲೂಕಿನ ಪ್ರಮುಖ ಜನಪ್ರತಿನಿಧಿಗಳ ವಿಳಂಬ ಹಾಜರಾತಿ­ಯಿಂದಾಗಿ 11 ಗಂಟೆಗೆ ನಿಗದಿಯಾಗಿದ್ದ ಸಭೆ 12 ಕ್ಕೆ ಪ್ರಾರಂಭವಾಗಿ ಅಪೂರ್ಣ ನಿರ್ಣಯಗಳೊಂದಿಗೆ ಮುಕ್ತಾಯ­ವಾಯಿತು.

ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ.ಗೋಪಾಲ ಪೂಜಾರಿ, ಕಂದಾಯ ಉಪವಿಭಾಗಾಧಿಕಾರಿ ಯೋಗೀಶ್ವರ ಅವರುಗಳು ಉತ್ಸವದ ರೂಪರೇಷೆಗಳ ಕುರಿತು ಚರ್ಚೆ ನಡೆಸಿದರು. ಹಿರಿಯ ಸಹಕಾರಿ ವಾಸುದೇವ ಯಡಿಯಾಳ್, ಕೃಷಿಕ ಸಂಘಟನೆಯ ಮುಂದಾಳು ಅಶೋಕ್ ಕುಮಾರ್ ಕೊಡ್ಗಿ, ಪ್ರಗತಿಪರ ಕೃಷಿಕ ಕೆಂಚನೂರು ಸೋಮಶೇಖರ್ ಶೆಟ್ಟಿ, ದೀನಪಾಲ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ,  ಹದ್ದೂರು ರಾಜೀವ ಶೆಟ್ಟಿ ಮೊದಲಾದವರು ಅಗತ್ಯ ಸಲಹೆ ನೀಡಿದರು.

ಕೋಟೇಶ್ವರ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಜ.25 ಹಾಗೂ 26 ರಂದು ಕೃಷಿ ಉತ್ಸವ ನಡೆಸುವ ತೀರ್ಮಾನ ಕೈಗೊಳ್ಳ­ಲಾಯಿತು. ಪಶು ಸಂಗೋಪಣಾ ಇಲಾಖೆಯಿಂದ ಕುಕ್ಕುಟ, ಶ್ವಾನ ಪ್ರದರ್ಶನ, ಮೊಲ ಸಾಕಣೆಯ ಬಗ್ಗೆ ಮಾಹಿತಿ, ಹಾಲು ಕರೆಯುವ ಸ್ಪರ್ಧೆ, ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ, ಸಾವಯವ ಕೃಷಿಯ ಮಹತ್ವ, ತರಕಾರಿ ಬೆಳೆಗಳು, ವಿವಿಧ ಬ್ಯಾಂಕುಗಳಲ್ಲಿ ಕೃಷಿ ಸಾಲದ ಬಗ್ಗೆ ರೈತರಿಗೆ ಮಾಹಿತಿ ಸೇರಿದಂತೆ ಕೃಷಿಕರಿಗೆ ಉಪಯೋಗವಾಗಬಲ್ಲ ಹಲವು ಕಾರ್ಯಕ್ರಮಗಳನ್ನು ಸಂಯೋಜಿಸುವ ಕುರಿತು ಸಭೆಯಲ್ಲಿ ವಿಚಾರ ವಿನಿಮಯ ಮಾಡಲಾಯಿತು.

ಕೃಷಿಕರಿಗೆ ಮಾಹಿತಿ ನೀಡುವ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸುವ ಕುರಿತು ಪ್ರಸ್ತಾಪವಾದರೂ, ಈ ಕುರಿತು ಯಾವುದೆ ಸ್ವಷ್ಟ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಮುಂದಿನ ಶನಿವಾರ ಇನ್ನೊಂದು ಸಭೆ ನಡೆಸಿ ಕಾರ್ಯಕ್ರಮದ ಸಿದ್ದತೆಯನ್ನು ಪೂರ್ಣ­ಗೊಳಿಸಲು ತೀರ್ಮಾನಿಸ­ಲಾಯಿತು.ಜಿ.ಪಂ.ಸ್ಥಾಯಿ ಸಮಿತಿಯ ಅಧ್ಯಕ್ಷ ಗಣಪತಿ ಟಿ. ಶ್ರೀಯಾನ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಆಂಟನಿ ಮರಿಯಾ ಇಮ್ಯಾನುವೆಲ್, ಉಡುಪಿ ತಾ.ಪಂ. ಅಧ್ಯಕ್ಷೆ ಗೌರಿ ಪೂಜಾರಿ ಇತರರು ಇದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com