600 ಎಕರೆ ದಲಿತರ ಭೂಮಿ ಅತಿಕ್ರಮಣ: ಹೋರಾಟ ಎಚ್ಚರಿಕೆ

ಕುಂದಾಪುರ: ತಾಲೂಕಿನಲ್ಲಿ ನಿಮ್ನ ವರ್ಗಕ್ಕೆ ಮೀಸಲಿಟ್ಟ ಭೂಮಿ ಇತರೆ ಸಮುದಾಯ ಮತ್ತು ರಾಜಕೀಯ ಪ್ರಭಾವಕ್ಕೊಳಪಟ್ಟವರಿಗೆ ಹಂಚಿ ಹೋಗಿದ್ದು ಸರಕಾರ ಮತ್ತು ಆಡಳಿತ ವ್ಯವಸ್ಥೆ ತಕ್ಷಣ ಮಧ್ಯ ಪ್ರವೇಶಿಸಿ ದಲಿತರಿಗೆ ಮೀಸಲಿಟ್ಟ ಭೂಮಿಯನ್ನು ದಲಿತರಿಗೆ ಸಿಗುವಂತೆ ಕ್ರಮ ತೆಗೆದು ಕೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಕಾಳಾವರ ಕನಕದಾಸ ಯುವಕ ಮಂಡಳಿ ಕಾರ್ಯದರ್ಶಿ ಮೋಹನಚಂದ್ರ ಕಾಳಾವರ ಎಚ್ಚರಿಸಿದ್ದಾರೆ. 

ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ 600 ಎಕರೆ ದಲಿತರ ಭೂಮಿ ಅನ್ಯರ ಪಾಲಾಗಿದೆ. ದಲಿತರಿಗೆ ಮೀಸಲಿಟ್ಟ ಕನ್ಯಾನ ಗ್ರಾಮದ 11.30 ಎಕರೆ ಭೂಮಿಯನ್ನು ಖಾಸಗಿ ಸೇವಾ ಸಂಸ್ಥೆಯೊಂದು ಅಕ್ರಮ ಸ್ವಾಧೀನ ಮಾಡಲು ಪ್ರಯತ್ನಿಸುತ್ತಿದೆ. ತಾಲೂಕಿನ ಆಡಳಿತ ವ್ಯವಸ್ಥೆ ತಕ್ಷಣ ಪರಿಶೀಲಿಸಿ ದಲಿತರ ಸ್ವಾಧೀನತೆಗೆ ನೀಡಬೇಕು ಎಂದು ಒತ್ತಾಯಿಸಿದರು. 

ಆರ್‌ಟಿಐ ಕಾರ್ಯಕರ್ತ ರಮೇಶ್ ಟಿ.ಟಿ. ರೋಡ್ ಪ್ರಕರಣದ ವಿವರಣೆ ನೀಡಿ, ಕನ್ಯಾನ ಗ್ರಾಮ ಅಲ್ಲದೆ ತಾಲೂಕಿನಲ್ಲಿ ನೂರಾರು ಎಕರೆ ದಲಿತರಿಗೆ ಮೀಸಲಿಟ್ಟ ಭೂಮಿ ಅತಿಕ್ರಮಣವಾಗಿದ್ದರೂ ಆಡಳಿತ ವ್ಯವಸ್ಥೆ ವೌನ ವಹಿಸಿದೆ. ಪ್ರಮುಖವಾಗಿ ಕನ್ಯಾನ ಗ್ರಾಮದಲ್ಲಿ 11.30 ಎಕರೆ ಜಾಗವನ್ನು ಖಾಸಗಿ ಸಂಸ್ಥೆಯೊಂದಕ್ಕೆ ನೀಡುವಲ್ಲಿ ಆಡಳಿತ ವ್ಯವಸ್ಥೆ ಮುಂದಾಗಿರುವುದು ಖಂಡನೀಯ. ಇದರ ವಿರುದ್ಧ ಸಂಘಟಿತ ಹೋರಾಟ ನಡೆಸಲಾಗುವುದು. ಈಗಾಗಲೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್, ಡಿವೈಎಸ್ಪಿ, ಕಂದಾಯ ನಿರೀಕ್ಷಕ, ಅರಣ್ಯ ಇಲಾಖಾಧಿಕಾರಿ, ಕುಂದಾಪುರ ಠಾಣಾಧಿಕಾರಿ ವಿರುದ್ಧ ದೂರು ದಾಖಲಿಸಲಾಗಿದೆ. ಕುಂದಾಪುರ ಅಕ್ರಮ-ಸಕ್ರಮ ಸಮಿತಿ ಕೆಲವೊಂದು ಜನರಿಗೆ ದಲಿತರಿಗೆ ಮೀಸಲಿರಿಸಿದ ಭೂಮಿಯನ್ನು ಮಂಜೂರು ಮಾಡಿ ದೌರ್ಜನ್ಯ ಎಸಗಿದೆ. ಶೀಘ್ರದಲ್ಲಿಯೇ ದಲಿತರ ಭೂಮಿ ನಿಯಮಾನುಸಾರ ದಲಿತರಿಗೆ ಮೀಸಲಿಡುವಲ್ಲಿ ವೈಫಲ್ಯ ಸಾಧಿಸಿರುವ ಸರಕಾರಿ ನೌಕರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ನೆಲೆಯಲ್ಲಿ ಜಾಥಾ ನಡೆಸಲಾಗುವುದು ಎಂದು ತಿಳಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com