ಪ್ರೀತಿಯ ಭಾಷೆ ಕಲಿಸಲು ಕಂಕಣಬದ್ಧರಾಗಿ: ಉಡುಪಿ ಬಿಷಪ್

ಕುಂದಾಪುರ: ದೇವರು ಎಲ್ಲರಿಗೂ ನೀಡಿರುವ ಏಕೈಕ ಭಾಷೆ ಪ್ರೀತಿ. ದೇವರು-ಮನುಷ್ಯರ ನಡುವೆ ಬಂಧನ ಬೆಸೆದಿರುವುದು ಪ್ರೀತಿ. ಪ್ರೀತಿಯೇ ಪರಮಾತ್ಮ. ಗಾಂಧೀಜಿ ಕಂಡ ರಾಮರಾಜ್ಯ ನಮ್ಮದಾಗಬೇಕಿದ್ದರೆ ಪ್ರೀತಿಯ ಭಾಷೆ ಕಲಿಸಲು ನಾವೆಲ್ಲರೂ ಕಂಕಣಬದ್ಧರಾಗಬೇಕು ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. 

ಇಲ್ಲಿನ ಸೈಂಟ್ ಮೇರಿಸ್ ಶಾಲೆ ಸಭಾಂಗಣದಲ್ಲಿ ಉಡುಪಿ ಪ್ರದೇಶ್ ಕೆಥೋಲಿಕ್ ಸಭಾ ಕುಂದಾಪುರ ವಲಯ ಸಮಿತಿ ಭಾನುವಾರ ಹಮ್ಮಿಕೊಂಡ ಕ್ರಿಸ್ಮಸ್ ಬಾಂಧವ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಕ್ರಿಸ್ಮಸ್ ಪ್ರೀತಿ ಹಂಚುವ ಹಬ್ಬ. ಶಾಂತಿಯ ಪ್ರತೀಕ. ಇದು ಬದುಕಿನ ಕತ್ತಲನ್ನು ದೂರೀಕರಿಸುತ್ತದೆ. ಶಾಂತಿ, ಪ್ರೀತಿ ಪ್ರತಿ ಮನೆ, ಮನಗಳಲ್ಲಿ ಮೂಡಬೇಕು. ನಾವೆಲ್ಲರೂ ದೇವರ ಮಕ್ಕಳು. ಜಾತಿ, ಬಣ್ಣ, ಭಾಷೆ ಮೀರಿ ನಾವೆಲ್ಲ ಮಾನವರು ಎಂಬ ಭಾವದೊಂದಿಗೆ ನಮ್ಮ ನಡುವಿರುವ ಗೋಪುರ ಕೆಡವಿ ಜೀವಿಸಬೇಕಾಗಿದೆ. ಈಗಾಗಲೆ ಧರ್ಮಪ್ರಾಂತ್ಯದ ವತಿಯಿಂದ ದೀಪಾವಳಿ ಹಬ್ಬ ಆಚರಿಸಿದ್ದೇವೆ. ಎಲ್ಲ ಧರ್ಮಗಳಿಗಿಂತ ಮಿಗಿಲಾದುದು ಮಾನವೀಯ ಧರ್ಮ. ಅದರ ಮೂಲ ಅಂತಃಸತ್ವ ಶಾಂತಿ ಮತ್ತು ಪ್ರೀತಿ ಅನ್ನುವುದನ್ನು ಯಾರೂ ಮರೆಯಬಾರದು ಎಂದರು. 

ಮಂಗಳೂರು ಬಲ್ಮಠ ಸಿಎಸ್‌ಐ ಕರ್ನಾಟಕ ದಕ್ಷಿಣ ಸಭಾ ಪ್ರಾಂತ್ಯದ ಬಿಷಪ್ ರೈಟ್ ರೆವರೆಂಡ್ ಡಾ. ಜೆ.ಎಸ್. ಸದಾನಂದ ಪಾರಿವಾಳ ಹಾರಿ ಬಿಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಮಗುವಿನ ಸುತ್ತ ಕೇಂದ್ರೀಕೃತ ಸಮಾಜ ಇಂದಿನ ಅಗತ್ಯ ಎಂದು ಪ್ರತಿಪಾದಿಸಿದರು. 

ಎಲ್ಲ ಮಗುವೂ ದೇವರಿಗೆ ಸಮಾನ. ಮಗುವಿಗೆ ಸಮಾಜ, ಪ್ರಕೃತಿ, ಒಳಿತು-ಕೆಡಕನ್ನು ಒಂದುಗೂಡಿಸುವ ಶಕ್ತಿ ಇದೆ. ಮನುಷ್ಯ ತನ್ನ ಜೀವಿತದುದ್ದಕ್ಕೂ ಮಗುವಿನಂತೆ ಬಾಳಬೇಕು. ಹುಟ್ಟುವ ಮಗು ಲೋಕೋದ್ಧಾರನಾಗುತ್ತಾನೆ ಎಂಬ ಆಶಯದೊಂದಿಗೆ ಯೇಸುಕ್ರಿಸ್ತರ ಜನನವಾಯಿತು. ಮಗುವಿದ್ದಾಗಲೆ ಸಮಾಜ, ಪ್ರಕೃತಿ ಅವರ ಆಸರೆಗೆ ಬಂತು. ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ದೇವರಂತೆ ಕಾಣಬೇಕು. ಶಾಂತಿಯ ಹೂದೋಟ ರಚಿಸಬೇಕು. ಶಾಂತಿ ಅಂದರೆ ಭಯಪಡುವ ಜನ ಇದ್ದಾರೆ. ಧರ್ಮವನ್ನು ರಾಜಕೀಯಕರಣಗೊಳಿಸುವ ಪ್ರಕ್ರಿಯೆ ನಿಂತಾಗ ಶಾಂತಿಯ ಭಯ ಕಾಡದು ಎಂದರು. 

ಕುಂದಾಪುರ ತಹಸೀಲ್ದಾರ್ ಗಾಯತ್ರಿ ಎನ್. ನಾಯಕ್ ಮಾತನಾಡಿ, ಜಗತ್ತಿಗೆ ಅತ್ಯಂತ ದೊಡ್ಡ ಸಂಸ್ಕೃತಿ ಕೊಟ್ಟ ನಾಡು ಭಾರತ. ಪರಧರ್ಮ ಸಹಿಷ್ಣುತೆ ಈ ದೇಶದ ಗುಣ. ಎಲ್ಲರೂ ಒಂದಾಗಿ ಬದುಕುವ ನಾಡು ಬೇರೆಲ್ಲೂ ಕಾಣಸಿಗದು. ಕ್ರೈಸ್ತ ಧರ್ಮ ಜಗತ್ತಿಗೆ ಶಾಂತಿಮಂತ್ರ ಬೋಸಿದೆ. ಕ್ರೈಸ್ತ ವಿದ್ಯಾಸಂಸ್ಥೆಯಲ್ಲಿ ಓದಿರುವ ನಾವು ಇಂದು ಸರಳ ಮತ್ತು ಶಿಸ್ತುಬದ್ಧ ಜೀವನ ನಡೆಸಲು ಪ್ರೇರಣೆಯಾಗಿದೆ. ಕ್ರಿಸ್ಮಸ್ ಹಬ್ಬ ಕೇವಲ ಕ್ರೈಸ್ತ ಸಮುದಾಯದವರ ಹಬ್ಬ ಮಾತ್ರವಲ್ಲ. ಈ ನಾಡಿನ ಪ್ರತಿಯೊಬ್ಬರ ಹಬ್ಬವಾಗಿದೆ ಎಂದರು. 

ಮುದೂರು ಸೀರೊ ಮಲಬಾರ್ ಕೆಥೋಲಿಕ್ ಚರ್ಚ್ ಧರ್ಮಗುರು ಸೆಬಾಸ್ಟಿನ್, ಕುಂದಾಪುರ ಸಿಎಸ್‌ಐ ಕೃಪಾ ಚರ್ಚ್‌ನ ಧರ್ಮಗುರು ಯೇಸುದಾಸ್, ಕುಂದಾಪುರ ವಲಯ ಮುಖ್ಯ ಧರ್ಮಗುರು ರೆ.ಫಾ. ಅನಿಲ್ ಡಿಸೋಜ, ಕೆಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಎಲ್‌ರಾಯ್ ಕಿರಣ್ ಕ್ರಾಸ್ತಾ, ಕ್ರಿಸ್ಮಸ್ ಬಾಂಧವ್ಯ ಕಾರ್ಯಕ್ರಮದ ಸಂಚಾಲಕ ಪ್ಲೈವನ್ ಡಿಸೋಜ, ಕೆಥೋಲಿಕ್ ಸಭಾ ಕುಂದಾಪುರ ವಲಯ ಕಾರ್ಯದರ್ಶಿ ಶಾಂತಿ ಪಿರೇರಾ, ಜಾನ್ಸನ್ ಡಿ. ಅಲ್ಮೇಡಾ, ಕುಂದಾಪುರ ಪುರಸಭೆ ಅಧ್ಯಕ್ಷೆ ಕಲಾವತಿ ಉಪಸ್ಥಿತರಿದ್ದರು. 

ಕೆಥೋಲಿಕ್ ಸಭಾ ಕುಂದಾಪುರ ವಲಯಾಧ್ಯಕ್ಷ ವಿನೋದ್ ಕ್ರಾಸ್ತಾ ಸ್ವಾಗತಿಸಿದರು. ಐರಿನ್ ಟೀಚರ್, ಪ್ರೆಸಿಲ್ಲಾ ಮಿನೇಜಸ್ ಮತ್ತು ಆಲ್ವಿನ್ ಕ್ವಾಡ್ರಸ್ ಅತಿಥಿಗಳನ್ನು ಪರಿಚಯಿಸಿದರು. ವಿಲ್ಸನ್ ಒಲಿವೇರಾ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಥಾಮಸ್ ವಂದಿಸಿದರು. ಕಾರ್ಯಕ್ರಮದಲ್ಲಿ ರೋಮನ್ ಕೆಥೋಲಿಕ್, ಸೀರೊ ಮಲಬಾರ್ ಕೆಥೋಲಿಕ್, ಸಿರಿಯನ್ ಕೆಥೋಲಿಕ್, ಪ್ರೊಟೆಸ್ಟೆಂಟ್ ಸಭಾ, ಮುಸ್ಲಿಂ ಹಾಗೂ ಹಿಂದೂ ಬಾಂಧವರು ಭಾಗವಹಿಸಿದ್ದರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com