ಅಡಕೆ ನಿಷೇಧವಿಲ್ಲ: ಸಂಸದ ಜಯಪ್ರಕಾಶ್ ಹೆಗ್ಡೆ

ಕುಂದಾಪುರ: ಕೇಂದ್ರ ಸರಕಾರದ ಮುಂದೆ ಅಡಕೆ ನಿಷೇಧ ಪ್ರಶ್ನೆಯೇ ಇಲ್ಲ. ಖುದ್ದು ಕೇಂದ್ರ ಆರೋಗ್ಯ ಮಂತ್ರಿ ಹಾಗೂ ಆರೋಗ್ಯ ಇಲಾಖೆ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಡಕೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಸ್ಪಷ್ಟಪಡಿಸಿದ್ದಾರೆ. 

ಕುಂದಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಡಕೆ ಬೆಳೆಗಾರರಿಗಾಗಿ ಸಾಕಷ್ಟು ಹೋರಾಟ ನಡೆಸಿದ್ದೇನೆ. ಅಂಕುರ್ ಎಂಬ ಗುಟ್ಕಾ ನಿಷೇಧ ವಿಷಯವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಇರುವ ಸಾರ್ವಜನಿಕ ಹಿತಾಸಕ್ತಿ ದಾವೆ ಸಂದರ್ಭ ಸುಪ್ರೀಂ ಕೋರ್ಟ್ ಅಡಕೆ ಹಾನಿಕಾರವೇ ಎಂಬ ಪ್ರಶ್ನೆ ಎತ್ತಿದೆಯೇ ಹೊರತು ಅದರ ನಿಷೇಧದ ಕುರಿತು ಎಲ್ಲಿಯೂ ಪ್ರಸ್ತಾಪಿಸಿಲ್ಲ. ಮಾಧ್ಯಮಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ಅಡಕೆ ಬೆಳೆಗಾರರನ್ನು ಗೊಂದಲಕ್ಕೀಡು ಮಾಡುವ ಪ್ರಯತ್ನ ನಡೆದಿದೆ. ಸುಪ್ರೀಂ ಕೋರ್ಟ್‌ನ ದಾಖಲೆಗಳು, ಕೇಂದ್ರ ಆರೋಗ್ಯ ಖಾತೆ ನೀಡಿರುವ ದಾಖಲೆಗಳು ನನ್ನಲ್ಲಿವೆ. ಇದರಿಂದಾಗಿ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದರು. 

ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ಅಡಕೆ ಪ್ರಧಾನ ಬೆಳೆಯಾಗಿದೆ. ಇತರೆ 6 ರಾಜ್ಯದ ಅಡಕೆ ಬೆಳೆಗಾರರು ಈ ವಿಷಯವಾಗಿ ತಲೆಕೆಡಿಸಿಕೊಂಡಿಲ್ಲ. ವಿಷಯ ಅವರಿಗೆ ಮನದಟ್ಟಾಗಿದೆ. ಕರ್ನಾಟಕದಲ್ಲಿ ಮಾತ್ರ ವೃಥಾ ಗೊಂದಲ ಹುಟ್ಟಿಸುವ ಪ್ರಯತ್ನ ನಡೆದಿದೆ. ರಾಜ್ಯದಲ್ಲಿ ಗುಟ್ಕಾ ನಿಷೇಧಿಸಿದ ಬಳಿಕ ನ್ಯಾಯಾಧೀಶರನ್ನು ಸರಕಾರ ಕೇಂದ್ರದಿಂದ ಹಿಂದಕ್ಕೆ ಕರೆಸಿಕೊಂಡಿದೆಯೇ ಹೊರತು ಅಡಕೆ ನಿಷೇಧದ ಉದ್ದೇಶದಿಂದಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಈಗಾಗಲೆ ಆಹಾರ ಭದ್ರತಾ ಇಲಾಖೆ ಅಡಕೆ ಹಾನಿಕರವಲ್ಲ ಎಂದು ವರದಿ ನೀಡಿದೆ. 2004ರಲ್ಲಿ ಅಡಕೆ ಹಾನಿಕಾರಕ ಎಂಬ ನಿರ್ಧಾರ ಎನ್‌ಡಿಎ ತೆಗೆದುಕೊಂಡಿದ್ದಾಗ ವಿವಾದ ತಲೆಯೆತ್ತಿರಲಿಲ್ಲ. ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್, ಶರದ್ ಪವಾರ್ ಸೇರಿದಂತೆ ಯುಪಿಎ ಒಕ್ಕೂಟ ಅಡಕೆ ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ. ನಿಷೇಧದ ಪ್ರಶ್ನೆಯೇ ಇಲ್ಲದಿರುವಾಗ ಅದರ ಬಗ್ಗೆ ಗೊಂದಲ ಹುಟ್ಟಿಸುವುದು ತರವಲ್ಲ ಎಂದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com