ಮೂಡುಗಲ್ಲು ಗುಹಾಂತರ ದೇವಸ್ಥಾನದಲ್ಲಿ ಎಳ್ಳಮಾವಾಸ್ಯೆ ಉತ್ಸವ

ಕುಂದಾಪುರ: ತಾಲೂಕು ಕೆರಾಡಿ ಗ್ರಾಮದ ಅತೀ ಕುಗ್ರಾಮವಾದ ಮೂಡುಗಲ್ಲು ಸಿದ್ಧಿಕ್ಷೇತ್ರ ಕೇಶವನಾಥೇಶ್ವರ ಗುಹಾಂತರ ದೇವಾಲಯದಲ್ಲಿ ಎಳ್ಳಮಾವಾಸ್ಯೆ ಉತ್ಸವ ಜನವರಿ 1ರಂದು ನಡೆಯಲಿದೆ. ಆ ದಿನ ಮುಂಜಾನೆ 4 ಗಂಟೆಯಿಂದಲೇ ಪ್ರಾತಃ ಪೂಜೆಗಳೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ ಎಂದು ಉಪನ್ಯಾಸಕ ದಿವ್ಯಾದರ ಶೆಟ್ಟಿ ಹೇಳಿದರು.
ಅವರು ಡಿ.26ರಂದು ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಿಗ್ಗೆ 7 ಗಂಟೆಯಿಂದ ರುದ್ರಾಭಿಷೇಕ, 9 ಗಂಟೆಗೆ ಶತರುದ್ರಾಭಿಷೇಕ, 12ಗಂಟೆಗೆ ಹೈಗುಳಿ ದೇವರ ದರ್ಶನ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ 6-45ಕ್ಕೆ ದೀಪೋತ್ಸವ, 7ಗಂಟೆಗೆ ರಂಗಪೂಜೆ, ರಾತ್ರಿ 8ಗಂಟೆಯಿಂದ ಗೆಂಡಸೇವೆ ನಡೆಯಲಿದೆ. ರಾತ್ರಿ 9ಕ್ಕೆ ದುರ್ಗಾಪರಮೆಶ್ವರಿ ಯುವಕ ಮಂಡಲ ಕೆರಾಡಿ ಮತ್ತು ಕಲ್ಕುಡ ಯಕ್ಷಗಾನ ಮಂಡಳಿ ಕಾರಿಬೈಲು ಇವರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.
ಉಡುಪಿ ಜಿಲ್ಲೆಯಲ್ಲಿಯೇ ವಿಶಿಷ್ಠವಾದ ಗುಹಾಂತರ ದೇವಾಲಯ ಇದಾಗಿದೆ. ನಾಥ ಪರಂಪರೆಯ ಶಿವ ವಿಷ್ಣುವಿನ ಸಂಗಮ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಸೂಕ್ತ ಸಂಪರ್ಕದ ಕೊರತೆಯಿಂದ ಪಾಕೃತಿಕ ವೈಶಿಷ್ಟ್ಯದ ಈ ಕ್ಷೇತ್ರ  ಸುಪ್ತವಾಗಿಯೇ ಉಳಿದಿದೆ. ಸುಮಾರು 500 ವರ್ಷಗಳ ಇತಿಹಾಸ ಉಳ್ಳ ಈ ಕ್ಷೇತ್ರ ಬಾರಕೂರು ಅರಸರು, ಹೊಸಂಗಡಿ ಅರಸರ ಆಳ್ವಿಕೆಗೂ ಒಳಪಟ್ಟಿತ್ತು. ಕರ್ನಲ್ ಮೆಕ್ಕಿಂಜೆ ಕೂಡಾ ಈ ಕ್ಷೇತ್ರಕ್ಕೆ ಭೇಟಿನೀಡಿದ್ದ ಎನ್ನಲಾಗಿದೆ. ಕೆರಾಡಿಯಿಂದ ಎತ್ತರದ ಪ್ರದೇಶದಲ್ಲಿರುವ ಮೂಡುಗಲ್ಲು ನಿಸರ್ಗದ ಅದ್ಬುತ. ಗುಹೆಯೊಳಗೆ ನಿರಂತರ ನೀರಿನಲ್ಲಿ ಶಿವನ ವಿಗ್ರಹವಿದೆ. ಲಕ್ಷಾಂತರ ಸಂಖ್ಯೆಯ ಮೀನುಗಳು ಯಾವಾಗಲೂ ಇಲ್ಲಿ ಇರುತ್ತವೆ. ಸುಮಾರು 100 ಅಡಿಗಳಷ್ಟು ಉದ್ದದ ಗುಹೆಯಲ್ಲಿ ಕೇಶವನಾಥೇಶ್ವರ ನೆಲೆಯಾಗಿದ್ದಾನೆ ಎಂದರು.
ಮೂಡುಗಲ್ಲು ಒಂದು ಐತಿಹಾಸಿಕ ಸ್ಥಳ. ಹಲವಾರು ಸ್ಮಾರಕಗಳು ಇಲ್ಲಿವೆ. ಕೋಟೆ ಕೊತ್ತಲಗಳು ಕೂಡಾ ಇವೆ. ಆದರೆ ಯಾವುದೇ ಮೂಲಭೂತ ಸೌಕರ್ಯ ಮೂಡುಗಲ್ಲಿಗೆ ಇಲ್ಲ. ಸರ್ಕಾರ, ಸ್ಥಳೀಯಾಡಳಿತದಿಂದ ಯಾವುದೇ ಸಹಕಾರ ಸಿಗದಿರುವುದರಿಂದ ಸ್ಥಳೀಯ ಯುವಕರು ಸೇರಿ, ಶಶಿಧರ ಮಿತ್ರವೃಂದವನ್ನು ಸ್ಥಾಪಿಸಿಕೊಂಡು ಮೂರು ವರ್ಷಗಳಿಂದ ಎಳ್ಳಮಾವಾಸ್ಯೆ ಉತ್ಸವವನ್ನು ವ್ಯವಸ್ಥಿತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ಈ ದೇವಸ್ಥಾನವನ್ನು ತಲೆತಲಾಂತರಗಳಿಂದ ನಂಬಿಕೊಂಡು ಬಂದಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಅರ್ಚಕ ರಾಘವೇಂದ್ರ ಕುಂಜತ್ತಾಯ, ಪ್ರದೀಪ ಶೆಟ್ಟಿ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com