ಅಂಬೇಡ್ಕರ್‌ ಪುಣ್ಯತಿಥಿ ಆಚರಣೆಗೆ ಅಂಬೇಡ್ಕರ್‌ ಭವನವಿಲ್ಲ: ದಸಂಸ ಖಂಡನೆ

ಕುಂದಾಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕುಂದಾಪುರ ಘಟಕ (ಭೀಮವಾದ) ಆಯೋಜಿಸಿದ ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ 57ನೇ ಮಹಾ ಪರಿನಿರ್ವಾಣ ದಿನಾಚರಣೆಗೆ ಜಿಲ್ಲಾಡಳಿತ ಹಾಗೂ ತಹಶೀಲ್ದಾರರು ಸ್ಥಳೀಯ ಅಂಬೇಡ್ಕರ್‌ ಭವನದಲ್ಲಿ ಸ್ಥಳವಾಕಾಶ ನೀಡದೇ ದಲಿತ ವಿರೋಧಿ ನೀತಿ ತಾಳಿದ್ದಾರೆ ಎಂದು ದಸಂಸ ತಿಳಿಸಿದೆ.

ಅಂಬೇಡ್ಕರ್‌ ಪುಣ್ಯತಿಥಿಯನ್ನು ನಗರದ ಶಾಸ್ತ್ರಿ ವೃತ್ತದಲ್ಲಿ ಆಚರಿಸುವ ಮೂಲಕ ಜಿಲ್ಲಾಡಳಿತ ಹಾಗೂ ತಾಲೂಕು ಅಡಳಿತಗಳ ನಿರ್ಧಾರಗಳಿಗೆ ಖಂಡನೆ ವ್ಯಕ್ತಪಡಿಸಿದ ದ.ಸಂ.ಸ. ರಾಜ್ಯ ಘಟಕ (ಭೀಮವಾದ)ದ ಸಂಘಟಕ ಸಂಚಾಲಕ ಉದಯ ಕುಮಾರ್‌ ತಲ್ಲೂರು ಮಾತನಾಡಿ, ಕುಂದಾಪುರದಲ್ಲಿ ಸಾಕಷ್ಟು ಸರಕಾರಿ ಹಾಗೂ ಖಾಸಗಿ ಭವನಗಳು ಇದ್ದರೂ ಸಹ ಅವುಗಳನ್ನು ಬಿಟ್ಟು ದಲಿತ ಸಂಘಟನೆಗಳ ಕಾರ್ಯಕ್ರಮಗಳಿಗೆ ಮೀಸಲಾದ ಅಂಬೇಡ್ಕರ್‌ ಭವನವನ್ನು ಬೇರೆಯವರಿಗೆ ನೀಡಿರುವ ಹಿನ್ನೆಲೆ ಏನು ಎಂದು ಪ್ರಶ್ನಿಸಿದರು.

ಡಿ. 23: ಪ್ರತಿಭಟನೆ

ದಲಿತರನ್ನು ಇಲ್ಲಿ ಅವಗಣಿಸಲಾಗಿದೆ. ಇಲ್ಲಿ ಕಾರ್ಯಕ್ರಮಗಳನ್ನು ಮಾಡಲು ಅನುವು ಮಾಡಿಕೊಡದೇ ಇರುವ ಜಿಲ್ಲಾಧಿಕಾರಿ ನೀತಿ ಸರಿಯಲ್ಲ. ಇದಕ್ಕೆ ಪುಷ್ಟಿ ನೀಡಿದ ತಹಶೀಲ್ದಾರರನ್ನು ಅಮಾನಾತುಗೊಳಿಸಬೇಕು ಎಂದು ಆಗ್ರಹಿಸಿದರು. ಈ ನೀತಿಯನ್ನು ಖಂಡಿಸಿ ಡಿ. 23ರಂದು ತಾಲೂಕು ಕಚೇರಿ ಎದುರು ಬೃಹತ್‌ ಪ್ರತಿಭಟನೆ ನಡೆಸಲಾಗುವುದು. ಅಲ್ಲದೇ ದಲಿತವರ್ಗಗಳ ಹಕ್ಕುಗಳನ್ನು ಕಸಿದುಕೊಂಡಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಸರಕಾರ ಮಂಡಿಸಿರುವ ಹೊಸ ವಿಧೇಯಕದನ್ವಯ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಬೆಂಗಳೂರಿಗೆ ತೆರಳಿ ಸಮಾಜ ಕಲ್ಯಾಣ ಸಚಿವರ ಬಳಿ ಈ ಬಗ್ಗೆ ದೂರು ನೀಡಲಾಗುವುದು ಎಂದರು.

ಆರಂಭದಲ್ಲಿ ನಗರದ ಶಾಸ್ತ್ರ ವೃತ್ತದಲ್ಲಿರುವ ಲಾಲ್‌ಬಹದ್ದೂರ್‌ ಶಾಸ್ತ್ರ ಪ್ರತಿಮೆಗೆ ಹಾರಹಾಕುವುದರ ಮೂಲಕ ಬಾಬಾ ಸಾಹೇಬ್‌ ಡಾ| ಬಿ.ಆರ್‌. ಅಂಬೇಡ್ಕರ್‌ ಅವರಿಗೆ ನಮನ ಸಲ್ಲಿಸಲಾಯಿತು.

ನಾರಾಯಣ ಕಿರಿಮಂಜೇಶ್ವರ, ಚಂದ್ರಶೇಖರ್‌ ಎಸ್‌.ಜಿ., ಗೋವಿಂದ ಮಾರ್ಗೋಳಿ, ಗೋಪಾಲ್‌ ವಿ., ವಿಜಯ ಕೆ.ಎಸ್‌., ಕೃಷ್ಣ ಅಲ್ತಾರು, ಶೇಖರ್‌ ಹಾವಂಜೆ, ಚಂದ್ರ ಅಲ್ತಾರು, ಭಾಸ್ಕರ ವಂಡ್ಸೆ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com