ಕೇಜ್ರಿವಾಲ್ ತಂಡದಲ್ಲಿರುವ ಸಚಿವರುಗಳು

ನವದೆಹಲಿ: ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಮತ್ತು ಜನ ಸಾಮಾನ್ಯರ ಕೈಗೆಟುಕುವ ಸರ್ಕಾರ ನೀಡುವ ಭರವಸೆ ನೀಡಿ ಜನರ ಬೆಂಬಲ ಗಿಟ್ಟಿಸಿದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಐತಿಹಾಸಿಕ ವಿಜಯ ಸಾಧಿಸಿ ದೆಹಲಿಯ ಅಧಿಕಾರದ ಗದ್ದುಗೆ ಹಿಡಿದಿದೆ. ಕೇಜ್ರಿವಾಲ್ ದೆಹಲಿಯ ಅತೀ ಕಿರಿಯ ಮುಖ್ಯಮಂತ್ರಿಯಾಗಿದ್ದಾರೆ. ಅವರ ಸಹೋದ್ಯೋಗಿಗಳ ಪೈಕಿ ಆರ್ವರು ಸಂಪುಟ ಸಚಿವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕೇಜ್ರಿವಾಲ್ ತಂಡದ ಬಗ್ಗೆ ಒಂದು ಸಂಕ್ಷಿಪ್ತ ಪರಿಚಯ ಇಲ್ಲಿದೆ...

1) ಅರವಿಂದ್ ಕೇಜ್ರಿವಾಲ್
ಐಐಟಿ(ಖರಗ್'ಪುರ) ಪದವೀಧರರಾದ ಇವರು ಟಾಟಾ ಸ್ಟೀಲ್ಸ್'ನಲ್ಲಿ ಉನ್ನತ ಹುದ್ದೆ ತ್ಯಜಿಸಿ ಸಾರ್ವಜನಿಕ ವಲಯಕ್ಕೆ ಬಂದು ಅಲ್ಲಿ ಕಂದಾಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಬಳಿಕ ಭ್ರಮನಿರಸನಗೊಂಡು ಆ ಕೆಲಸವನ್ನೂ ಬಿಟ್ಟು ಕೊನೆಗೆ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಅಣಿಯಾದರು. 2001ರಿಂದ ಇವರು ಭ್ರಷ್ಟ ವಿರೋಧಿ ಹೋರಾಟದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಮಾಹಿತಿ ಹಕ್ಕು ಕಾಯ್ದೆಗೆ ಒತ್ತಾಯಿಸಿ ಹೋರಾಟ ನಡೆಸಿದವರಲ್ಲಿ ಇವರೂ ಒಬ್ಬರು. ಇವರ ಹೋರಾಟಕ್ಕೆ 2005ರಲ್ಲಿ ಮ್ಯಾಗ್ಸಸೆ ಪ್ರಶಸ್ತಿಯೂ ಲಭ್ಯವಾಯಿತು.

45 ವರ್ಷದ ಕೇಜ್ರಿವಾಲ್ ಹೆಚ್ಚು ಜನಪ್ರಿಯತೆ ಗಳಿಸಿದ್ದು ಅಣ್ಣಾ ಹಜಾರೆಯವರ ಜನಲೋಕಪಾಲ್ ಹೋರಾಟದ ಮೂಲಕವೇ... ಆಂದೋನಲದಿಂದ ಹೆಚ್ಚೇನೂ ಸಾಧಿಸಲು ಸಾಧ್ಯವಿಲ್ಲವೆಂದು, ರಾಜಕೀಯವನ್ನ ಶುದ್ಧೀಕರಿಸಲು ರಾಜಕಾರಣಕ್ಕೇ ಇಳಿಯಬೇಕೆಂದು ಇವರು ಅಣ್ಣಾ ಹಜಾರೆ ವಿರೋಧದ ನಡುವೆಯೂ ಸ್ವತಃ ರಾಜಕೀಯ ಪಕ್ಷ ಸ್ಥಾಪಿಸಿದರು. ಅದರಲ್ಲಿ ಯಶಸ್ವಿಯೂ ಆದರು. ದೆಹಲಿಯಲ್ಲಿ ಅಧಿಕಾರವನ್ನೂ ಹಿಡಿದರು... ದೆಹಲಿಯ ಹಿಂದಿನ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನ ನವದೆಹಲಿ ಕ್ಷೇತ್ರದಲ್ಲಿ ಸೋಲಿಸಿದ್ದು ವಿಶೇಷ...

ಸದ್ಯ ದೆಹಲಿ ಮುಖ್ಯಮಂತ್ರಿಯಾಗಿರುವ ಅರವಿಂದ್ ಕೇಜ್ರಿವಾಲ್ ಗೃಹ, ಹಣಕಾಸು, ವಿದ್ಯುತ್ ಮತ್ತು ವಿಚಕ್ಷಣಾ ಖಾತೆಗಳನ್ನ ತಮ್ಮ ಬಳಿಯಲ್ಲೇ ಇರಿಸಿಕೊಂಡಿದ್ದಾರೆ.

2) ಮನೀಶ್ ಸಿಸೋಡಿಯಾ
ಪತ್ರಕರ್ತರಾದ ಇವರು ಅಣ್ಣಾ ಹಜಾರೆಯವರ ಜನಲೋಕಪಾಲ್ ಹೋರಾಟದ ವೇಳೆ ಬೆಳಕಿಗೆ ಬಂದಿದ್ದರು. ಉತ್ತರಪ್ರದೇಶ ಮೂಲದ 41 ವರ್ಷದ ಮನೀಶ್ ಸಿಸೋಡಿಯಾ ಈ ಮುಂಚೆ ಆಲ್ ಇಂಡಿಯಾ ರೇಡಿಯೋ ಮತ್ತು ಜೀನ್ಯೂಸ್ ವಾಹಿನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಮಾಹಿತಿ ಹಕ್ಕು ಕಾಯ್ದೆಗೆ ಒತ್ತಾಯಿಸಿ ನಡೆದ ಹೋರಾಟದಲ್ಲಿ ಇವರೂ ಭಾಗಿಯಾಗಿದ್ದರು. ಅದಕ್ಕಾಗಿ ತಮ್ಮ ಕೆಲಸವನ್ನ ತ್ಯಜಿಸಿ ಈ ಹೋರಾಟಕ್ಕೆ ಸಮರ್ಪಿಸಿಕೊಂಡಿದ್ದರು. ಅಣ್ಣಾ ಹಜಾರೆಯವರೊಂದಿಗೆ ಇವರೂ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು...

ಮನೀಶ್ ಸಿಸೋಡಿಯಾಗೆ ಸಿಕ್ಕ ಖಾತೆಗಳು...!
* ಶಿಕ್ಷಣ
* ಉನ್ನತ ಶಿಕ್ಷಣ
* ಪಿಡಬ್ಲ್ಯೂಡಿ
* ನಗರಾಭಿವೃದ್ಧಿ
* ಸ್ಥಳೀಯ ಸಂಸ್ಥೆ
* ಕಂದಾಯ

3) ರಾಖಿ ಬಿರ್ಲಾ
ಈಕೆ ಕೇಜ್ರಿವಾಲ್ ಸಂಪುಟದಲ್ಲಿರುವ ಅತೀ ಕಿರಿಯ ಸದಸ್ಯೆ. 26 ವರ್ಷದ ರಾಖಿ ಬಿರ್ಲಾ ಕೂಡ ಒಬ್ಬ ಪತ್ರಕರ್ತೆ. ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ರಾಜಕುಮಾರ್ ಚೌಹಾಣ್ ಅವರನ್ನ ಸೋಲಿಸಿದ ಗಟ್ಟಿಗಿತ್ತಿ ಈಕೆ. ರಾಖಿ ಬಿರ್ಲಾ ಅನೇಕ ಸಾಮಾಜಿಕ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿದ್ದಾಳೆ. ದಲಿತರ ಏಳಿಗೆಗಾಗಿ ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದಾಳೆ...

ರಾಖಿ ಬಿರ್ಲಾಗೆ ಸಿಕ್ಕ ಖಾತೆಗಳು
* ಮಹಿಳೆ ಮತ್ತು ಮಕ್ಕಳ ಕಲ್ಯಾಣ
* ಸಾಮಾಜಿಕ ಕಲ್ಯಾಣ
* ಮಹಿಳಾ ಸುರಕ್ಷತೆ
* ಭಾಷೆಗಳು


4) ಸೋಮನಾಥ್ ಭಾರತಿ
ಪ್ರತಿಷ್ಠಿತ ಐಐಟಿಯಲ್ಲಿ ಮಾಸ್ಟರ್ ಡಿಗ್ರಿ ಪಡೆದಿರುವ ಸೋಮನಾಥ್ ಭಾರತಿ  ವೃತ್ತಿಯಲ್ಲಿ ವಕೀಲರು... ದೆಹಲಿ ಗ್ಯಾಂಗ್ ರೇಪ್ ಪ್ರಕರಣದ ವಿರುದ್ಧ ನಡೆಸಿದ ಪ್ರತಿಭಟನೆಗಳಲ್ಲಿ ನಿರತರಾಗಿದ್ದವರನ್ನ ಪೊಲೀಸರಿಂದ ರಕ್ಷಿಸುವಲ್ಲಿ ಸೋಮನಾಥ್ ಅವರ ಕೆಲಸ ಬಲು ಮಹತ್ವದ್ದಾಗಿತ್ತು...

ಸೋಮನಾಥ್ ಭಾರತಿಗೆ ಸಿಕ್ಕ ಖಾತೆಗಳು..
* ಪ್ರವಾಸ
* ಕಾನೂನು
* ಆಡಳಿತ ಸುಧಾರಣೆ
* ಕಲೆ ಮತ್ತು ಸಂಸ್ಕೃತಿ


5) ಸೌರಭ್ ಭಾರದ್ವಜ್
ಇವರು ಎಂಜಿನಿಯರಿಂಗ್ ಮತ್ತು ಕಾನೂನು ಶಿಕ್ಷಣ ಪಡೆದಿದ್ದಾರೆ. ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್'ನಲ್ಲಿ ಬಿಟೆಕ್ ಪದವಿ ಹಾಗೂ ಎಲ್.ಎಲ್.ಬಿ. ಪದವಿಗಳನ್ನ ಪಡೆದು ಸಾಫ್ಟ್'ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದವರು. 33 ವರ್ಷದ ಈ ಚುರುಕು ಯುವಕ ಈ ಮುಂಚೆ ಅಂಧರು, ಬಡ ವಿದ್ಯಾರ್ಥಿಗಳು, ಸಂತ್ರಸ್ತರು ಮತ್ತು ಹಿರಿಯ ನಾಗರಿಕರ ಪರವಾಗಿ ಸಾಕಷ್ಟು ಹೋರಾಟಗಳನ್ನ ಮಾಡಿದ್ದಾರೆ...

ಸೌರಭ್ ಭಾರದ್ವಜ್'ಗೆ ಸಿಕ್ಕ ಖಾತೆಗಳು...
* ಆಹಾರ ಮತ್ತು ಸರಬರಾಜು
* ಪರಿಸರ
* ಸಾರಿಗೆ
* ಚುನಾವಣೆ

6) ಗಿರೀಶ್ ಸೋನಿ
ಇವರು ಕೇಜ್ರಿವಾಲ್ ಸಂಪುಟದಲ್ಲಿರುವ ಅತ್ಯಂತ ಹಿರಿಯ ಜೀವಗಳಲ್ಲೊಬ್ಬರು. 12ನೇ ತರಗತಿ ಓದಿರುವ ಇವರು ಸಂಪುಟದಲ್ಲಿರುವವರ ಪೈಕಿ ಅತೀ ಕಡಿಮೆ ಓದಿರುವ ವ್ಯಕ್ತಿಯೂ ಹೌದು. 49 ವರ್ಷದ ಗಿರೀಶ್ ಸೋನಿ ಇದುವರೆಗಿನ ಆಮ್ ಆದ್ಮಿ ಹೋರಾಟಗಳ ಹಿಂದೆ ಲವಲವಿಕೆಯಿಂದ ಕೆಲಸ ಮಾಡಿದ್ದವರು. "ಬಿಜ್ಲಿ ಪಾನಿ" ಆಂದೋಲನದಲ್ಲಂತೂ ಇವರ ಪಾತ್ರ ಬಲು ಮಹತ್ವದ್ದು. ಇವರ ಹೋರಾಟ ಮನೋಭಾವ, ಸಂಘಟನಾ ಚಾತುರ್ಯವನ್ನ ಗುರುತಿಸಿರುವ ಕೇಜ್ರಿವಾಲ್ ಇವರಿಗೆ ಸಚಿವ ಸ್ಥಾನ ನೀಡಿ ಹೆಚ್ಚಿನ ಜವಾಬ್ದಾರಿ ವಹಿಸಿದ್ದಾರೆ.

ಗಿರೀಶ್ ಸೋನಿಗೆ ಸಿಕ್ಕಿರುವ ಖಾತೆಗಳು...
* ಅಭಿವೃದ್ಧಿ
* ಉದ್ಯೋಗ
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ

7) ಸತ್ಯೇಂದ್ರ ಕುಮಾರ್ ಜೈನ್
ಗಿರೀಶ್ ಸೋನಿಯವರಂತೆ ಇವರೂ 49 ವರ್ಷದ ಮಧ್ಯಮ ವಯಸ್ಕ ವ್ಯಕ್ತಿ. ಆರ್ಕಿಟೆಕ್ಟ್ ಪದವೀಧರ. ವೃತ್ತಿಯಲ್ಲಿ ಆರ್ಕಿಟೆಕ್ಟ್ ಕನ್ಸಲ್ಟೆಂಟ್... ಪಿಡಬ್ಲ್ಯೂಡಿ ಇಲಾಖೆಯೊಂದಿಗೆ ಕೆಲಸ ಮಾಡುತ್ತಿದ್ದ ಇವರು ಇಲಾಖೆಯಲ್ಲಿದ್ದ ಭ್ರಷ್ಟಾಚಾರ ಸಹಿಸದೇ ಕೆಲಸಕ್ಕೆ ತಿಲಾಂಜಲಿ ನೀಡಿದ್ದರಂತೆ. ಸಾಮಾಜಿಕ ಹೋರಾಟಗಾರರಾಗಿ ಇವರು ಸೇವೆ ಸಲ್ಲಿಸಿದ್ದಾರೆ. ಅಣ್ಣಾ ಹಜಾರೆಯವರ ಜನಲೋಕಪಾಲ್ ಸತ್ಯಾಗ್ರಹದಲ್ಲಿ ಇವರೂ ಸಕ್ರಿಯರಾಗಿ ಭಾಗವಹಿಸಿದ್ದರು.

ಸತ್ಯೇಂದರ್ ಕುಮಾರ್ ಜೈನ್ ಅವರಿಗೆ ಸಿಕ್ಕ ಖಾತೆಗಳು...
* ಆರೋಗ್ಯ
* ಕೈಗಾರಿಕೆ
* ಗುರುದ್ವಾರಾ
* ಚುನಾವಣೆಗಳು

ಮಾಹಿತಿ ಕೃಪೆ: ಎನ್.ಡಿ.ಟಿ.ವಿ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com