ರಸ್ತೆ ದುರಸ್ತಿ, ಮಹಾರಾಜಸ್ವಾಮಿ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾ.ಪಂ.ಎದುರು ಬೃಹತ್ ಪ್ರತಿಭಟನೆನಾಡಾ: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ(ಡಿವೈಎಫ್‍ಐ) ಪಡುಕೋಣೆ ಘಟಕದ ನೇತೃತ್ವದಲ್ಲಿ ನಾಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಟೋ ರಿಕ್ಷಾ ಮತ್ತು ವಾಹನ ಚಾಲಕರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ನಾಡಾ ಗ್ರಾಮ ಪಂಚಾಯತ್ ಎದುರು ನಾಡಾ ಗ್ರಾ.ಪಂ.ವ್ಯಾಪ್ತಿಯ ನಾಡ, ಹಡವು, ಬಡಾಕೆರೆ ಹಾಗೂ ಸೇನಾಪುರ ಗ್ರಾಮಗಳ ಎಲ್ಲಾ ರಸ್ತೆಗಳ ದುರಸ್ತಿ ಮತ್ತು ಮಹಾರಾಜ ಸ್ವಾಮಿ ಸೇತುವೆ ನಿರ್ಮಾಣಕ್ಕೆ ಸರ್ಕಾರವನ್ನು ಒತ್ತಾಯಿಸುವ ಸಲುವಾಗಿ ಬೃಹತ್ ಪ್ರತಿಭಟನೆ  ನಡೆಯಿತು.
ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಗ್ರಾ.ಪಂ.ಸದಸ್ಯ ಫಿಲಿಪ್ ಡಿಸಿಲ್ವಾ, ಹತ್ತು ವರ್ಷಗಳ ಹಿಂದೆ ಅಲ್ಫೋನ್ಸ್ ಲೋಬೋರವರ ಈ ಭಾಗದ ರಸ್ತೆ ಅಭಿವೃದ್ಧಿ ಕನಸುಗಳು, ಅವರ ನಿಧನ ನಂತರ ಹಾಗೆಯೇ ಉಳಿದುಕೊಂಡಿವೆ. ಕಳೆದ ಗ್ರಾ.ಪಂ.ಚುನಾವಣೆಯ ಸಂದರ್ಭ ಪೌರಸಮಿತಿ ತಾವು ಅಧಿಕಾರಕ್ಕೆ ಬಂದರೆ ಗ್ರಾ.ಪಂ. ವ್ಯಾಪ್ತಿಯ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದು, ಇಂದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಅವರ ಸರಕಾರ, ಚುನಾಯಿತ ಪ್ರತಿನಿಧಿಗಳಿದ್ದರೂ ರಸ್ತೆ ದುರಸ್ತಿಗೆ ಮುಂದಾಗದೇ, ನಿರ್ಲಕ್ಷ್ಯ ವಹಿಸಿದ್ದಾರೆ ಎಂದರು.
ಕಾರ್ಮಿಕ ಮುಖಂಡ ಹೆಚ್.ನರಸಿಂಹ ಮಾತನಾಡಿ, ಇವತ್ತು ಅಧಿಕಾರ ಸಿಕ್ಕಿದ ಕೂಡಲೆ ಭರವಸೆಗಳು ಹಾಗೆಯೇ ಉಳಿಯಲ್ಪಡುತ್ತವೆ. ಜನರು ಸಂಘಟಿತರಾಗಿ ಹೋರಾಟ ಮಾಡಿದಾಗಲೇ ಬದಲಾವಣೆ ಸಾಧ್ಯ. ಗ್ರಾಮೀಣ ಭಾಗದ ರಸ್ತೆಗಳನ್ನು ನಿರ್ಲಕ್ಷಿಸಿದ ಚುನಾಯಿತ ಪ್ರತಿನಿಧಿಗಳು ತಕ್ಷಣ ಸ್ಪಂದಿಸಬೇಕಾಗಿದೆ ಎಂದರು.
ಡಿವೈಎಫ್‍ಐ ಪಡುಕೋಣೆ ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಆಚಾರ್ ಮಾತನಾಡಿ, ‘ಚುನಾಯಿತ ಜನಪ್ರತಿನಿಧಿಗಳ ನಿರಂತರ ನಿರ್ಲಕ್ಷ್ಯದಿಂದ ಇಲ್ಲಿನ ರಸ್ತೆಗಳು ಜನರು ತಿರುಗಾಡಲು ಕೂಡಾ ಅಯೋಗ್ಯವಾಗಿದ್ದು, ಸಂಬಂಧಪಟ್ಟವರು ದಿವ್ಯ ಮೌನ ವಹಿಸಿದ್ದಾರೆ. ಇಲ್ಲಿನ ಗ್ರಾಮಸ್ಥರ ಹಲವಾರು ವರ್ಷಗಳ ಮಹರಾಜಸ್ವಾಮಿ ಸೇತುವೆ ಕನಸು ಇನ್ನೂ ನನಸಾಗಿಲ್ಲ. ಚುನಾವಣೆ ಸಂದರ್ಭ ಸೇತುವೆ ಆಶ್ವಾಸನೆ ನೀಡಿ ನಂತರ ಆ ಬಗ್ಗೆ ಮಾತನಾಡದಿರುವುದು ಜನವಿರೋಧಿ ನೀತಿಯಾಗಿದೆ.  ಗುಡ್ಡೆಹೋಟೆಲ್-ಪಡುಕೋಣೆ ರಸ್ತೆ ತೀರಾ ಹದಗೆಟ್ಟು ಹೋಗಿದ್ದು, ತಕ್ಷಣ ದುರಸ್ತಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾದೀತು’ ಎಂದರು.
ಗ್ರಾ.ಪಂ.ಸದಸ್ಯ ರಾಜೀವ ಪಡುಕೋಣೆ ಮಾತನಾಡಿದರು. ಈ ಬಗ್ಗೆ ಮನವಿಯನ್ನು ಗ್ರಾ.ಪಂ.ಅಧ್ಯಕ್ಷರಿಗೆ ಸಲ್ಲಿಸಲಾಯಿತು. ಗ್ರಾ.ಪಂ.ಅಧ್ಯಕ್ಷ ಪ್ರವೀಣ ಕುಮಾರ್ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಪಾಂಡುರಂಗ ಶೇಟ್ ಮನವಿ ಸ್ವೀಕರಿಸಿದರು. ಗ್ರಾ.ಪಂ.ಸದಸ್ಯ ಶಂಕರ ಬೆದ್ರಾಡಿಮನೆ, ಕಾರ್ಮಿಕ ಮುಖಂಡರಾದ ವೆಂಕಟೇಶ್ ಕೋಣಿ, ಉದಯ ಮರವಂತೆ, ಮನೋರಮಾ ಭಂಡಾರಿ, ಶಿಕ್ಷಕ ಪಿ.ನರಸಿಂಹ ಮೂರ್ತಿ ಉಪಸ್ಥಿತರಿದ್ದರು.
(ಪೋಟೋ ಇದೆ)

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

1 comments:

Anonymous said...

Good job guys

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com