ಜಾನಪದ ಉತ್ಸವ ಕಂಬಳಕ್ಕೆ ಪ್ರೋತ್ಸಾಹ ಅಗತ್ಯ: ಬಾರಕೂರು ಶಾಂತಾರಾಮ ಶೆಟ್ಟಿ

ಕುಂದಾಪುರ: ಕರಾವಳಿ ಜಾನಪದ ಉತ್ಸವಗಳಲ್ಲಿ ಕಂಬಳಕ್ಕೆ ತನ್ನದೇ ಆದ ಪ್ರಾಧಾನ್ಯತೆ ಇದೆ. ಮುಂಗಾರು-ಹಿಂಗಾರು ಕೃಷಿ ನಡುವಿನ ಅವಧಿಯಲ್ಲಿ ಹಿರಿಯರು ಮನೋರಂಜನೆಗಾಗಿ ರೂಪಿಸಿದ ಕಂಬಳ ಮಹೋತ್ಸವ ಕರಾವಳಿಯ ಅಭಿಮಾನದ ದ್ಯೋತಕ. ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿದ್ದ ಮೊಳಹಳ್ಳಿ ಕಂಬಳ ಮಹೋತ್ಸವ ಈ ವರ್ಷದಿಂದ ಅದ್ದೂರಿಯಾಗಿ ರೂಪುಗೊಂಡಿರುವುದು ಶ್ಲಾಘನೀಯ ಎಂದು ಕಂಬಳದ ಗುರಿಕಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾರಕೂರು ಶಾಂತಾರಾಮ ಶೆಟ್ಟಿ ಹೇಳಿದರು. 

ಮೊಳಹಳ್ಳಿ ಕಂಬಳಗದ್ದೆಯಲ್ಲಿ ಮೊಳಹಳ್ಳಿ ಒಂಬತ್ತು ಮನೆಯವರು, ಮೊಳಹಳ್ಳಿ ಪಟೇಲರ ಮನೆಯವರು ಮತ್ತು ಕಂಬಳ ಮಹೋತ್ಸವ ಸಮಿತಿ ಭಾನುವಾರ ಹಮ್ಮಿಕೊಂಡ ಮೊಳಹಳ್ಳಿ ಕಂಬಳ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು. 

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕಂಬಳಕ್ಕೆ ಬಹು ದೊಡ್ಡ ಇತಿಹಾಸವಿದೆ. ಇದು ಕರಾವಳಿಯ ಭೂತಾರಾಧನೆ, ನಾಗಾರಾಧನೆಯ ಒಂದು ಭಾಗ. ಸಾಂಪ್ರದಾಯಿಕ ಕಂಬಳ ನೋಡುವುದೇ ಆನಂದ ಎಂದು ಬಣ್ಣಿಸಿದರು. 

ಕಂಬಳ ಮಹೋತ್ಸವ ಸಮಿತಿ ಅಧ್ಯಕ್ಷ ಎಂ. ದಿನೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮೊಳಹಳ್ಳಿ ಪಟೇಲರ ಮನೆಯ ಕರುಣಾಕರ ಸೇರ್ವೆಗಾರ್, ಜಿಪಂ ಸದಸ್ಯ ರಶ್ವಥ್‌ಕುಮಾರ ಶೆಟ್ಟಿ, ಶರತ್ ಶೆಟ್ಟಿ, ನಾರಾಯಣ ಶೆಟ್ಟಿ, ವಿಜಯಾನಂದ ಶೆಟ್ಟಿ, ಮಡಾಮಕ್ಕಿ ಶಶಿಧರ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕ ರತ್ನಾಕರ ಶೆಟ್ಟಿ, ಮೊಳಹಳ್ಳಿ ಮಹೇಶ್ ಹೆಗ್ಡೆ, ಹೃದಯಕುಮಾರ ಶೆಟ್ಟಿ, ಗ್ರಾಪಂ ಸದಸ್ಯೆ ವಾಣಿ ಶೆಟ್ಟಿ, ತಾಪಂ ಸದಸ್ಯ ಪ್ರದೀಪಚಂದ್ರ ಶೆಟ್ಟಿ ಉಪಸ್ಥಿತರಿದ್ದರು. 

ನಿವೃತ್ತ ಮುಖ್ಯ ಶಿಕ್ಷಕ ಮೋಹನ ಶೆಟ್ಟಿ ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ ಶೆಟ್ಟಿ ಬೆಳಗೋಡು ಸ್ವಾಗತಿಸಿದರು. ಅಕ್ಷಯ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಬಳಿಕ ಜಿಲ್ಲೆಯ ನಾನಾ ಕಡೆಗಳಿಂದ ಆಗಮಿಸಿದ ಕೋಣಗಳ ಹಲಗೆ ಮತ್ತು ಓಟದ ಸ್ಪರ್ಧೆ, ಸಾರ್ವಜನಿಕರ ಹಗ್ಗಜಗ್ಗಾಟ ಮತ್ತು ಕೆಸರುಗದ್ದೆ ಸ್ಪರ್ಧೆ ನಡೆಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com