13ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ, ಸನ್ಮಾನ

ಸಿದ್ಧಾಪುರ: ಎಲ್ಲರ ಹಿತ ಬಯಸುವುದು ಸಾಹಿತ್ಯ. ಕನ್ನಡ ಸಾಹಿತ್ಯ ಜಗತ್ತಿಗೆೆ ಅನೇಕ ಕೊಡುಗೆ ನೀಡಿದೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ದೊರಕುವುದರೊಂದಿಗೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯಾಗಿದೆ. ಜಗತ್ತಿನಲ್ಲಿ ಸುಮಾರು 300 ಭಾಷೆಗಳಿವೆ. ಮುಂದೆ ಈ ಭಾಷೆಗಳೆಲ್ಲವೂ ನಶಿಸಿದರೂ ಉಳಿಯುವುದು ಮಾತ್ರ ಕನ್ನಡ ಭಾಷೆ. ಇದರಿಂದಾಗಿ ಕನ್ನಡದ ನೆಲ ಸಾಹಿತ್ಯದ ಹಸಿರಿನ ನೆಲ ಎಂದು ಸಾಹಿತಿ ಕೋಣಿ ಶಿವಾನಂದ ಕಾರಂತ ಹೇಳಿದರು. ಸಿದ್ಧಾಪುರದ ಶ್ರೀ ರಂಗನಾಥ ಸಭಾಭವನದಲ್ಲಿ ಭಾನುವಾರ ಕುಂದಾಪುರ ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದರು. 

ಇಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲಾ ಸಾಹಿತ್ಯ ಸಮ್ಮೇಳಕ್ಕೆ ಸಮಾನಾಗಿದೆ. ನಿಜವಾದ ಕನ್ನಡ ಅಭಿಮಾನ ಹಳ್ಳಿಯವರಲ್ಲಿ ಇಂದು ಕಾಣಬಹುದು. ವಿಚಾರಧಾರೆ ತಿಳಿಸಲು ಭಾಷೆ ಬೇಕು. ಯಾವ ಭಾಷೆ ವ್ಯವಹಾರಕ್ಕೆ ಸಿಲುಕುವುದಿಲ್ಲವೋ ಆ ಭಾಷೆ ಉಳಿಯುವುದಿಲ್ಲ. ಇತ್ತೀಚೆಗೆ ಕನ್ನಡಿಗರಿಗೆ ಕನ್ನಡಾಭಿಮಾನ ಕಡಿಮೆಯಾಗುತ್ತಿದೆ. ಆಂಗ್ಲ ಭಾಷೆ ಕಲಿತರೆ ಮಾತ್ರ ಅದು ಭಾಷೆ ಎನ್ನುವ ಮನೋಭಾವ ಕೆಲವರಲ್ಲಿದೆ. ಈ ರೀತಿಯ ಮನೋಭಾವ ತೊಡೆದು ಹಾಕಿ ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಿ ಎಂದು ಹೇಳಿದರು. 

ಸಮ್ಮೇಳನದ ಅಧ್ಯಕ್ಷ ಕೆ.ಕೆ. ಕಾಳವರ್ಕರ್ ಮಾತನಾಡಿ, ಬಾಲ್ಯದ ನೆನಪು, ಅಸ್ಪೃಶ್ಯತೆ, ಜಾನಪದದ ಕುರಿತು ಬೆಳಕು ಚೆಲ್ಲಿದರು. ಸಿದ್ಧಾಪುರದ ಸಾಹಿತ್ಯ ಸಮ್ಮೇಳನ ಮಾದರಿ ಸಮ್ಮೇಳನ. ಒಬ್ಬ ದಲಿತ ಸಾಹಿತಿಯನ್ನು ಗುರುತಿಸಿ ಸಮ್ಮೇಳನದ ಅಧ್ಯಕ್ಷ ಸ್ಥಾನ ನೀಡುವ ಮೂಲಕ ದಲಿತ ಸಮುದಾಯಕ್ಕೆ ಗೌರವ ನೀಡಿದಂತಾಗಿದೆ. ಪ್ರತಿಯೊಬ್ಬ ಕನ್ನಡಿಗರೂ ತಮ್ಮ ಜವಾಬ್ದಾರಿಯನ್ನು ಮನಸ್ಸಿನಲ್ಲಿಟ್ಟುಕೊಂಡು ದೇಶಾಭಿಮಾನ, ಧರ್ಮಾಭಿಮಾನ, ಪರೋಪಕಾರವೇ ಮೊದಲಾದ ಸದ್ಗುಣ ಬೆಳಸಿಕೊಳ್ಳಬೇಕು. ಕನ್ನಡಿಗರಿಗೆ ಕನ್ನಡದ ಬಗ್ಗೆ ಅಭಿಮಾನವಿದ್ದರೆ ಮಾತ್ರ ಕನ್ನಡ ನೆಲದಲ್ಲಿ ಕನ್ನಡ ಉಳಿಯುತ್ತದೆ. ಪ್ರತಿಯೊಬ್ಬರೂ ಆಂಗ್ಲ ಮಾಧ್ಯಮದಲ್ಲಿ ವಿದ್ಯೆ ಕಲಿಯಲು ಇಚ್ಛಿಸುತ್ತಾರೆ. ಪರಿಣಾಮ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಕನ್ನಡಿಗರಾದ ನಾವು ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು. 

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಇದೊಂದು ಯಶಸ್ವಿ ಸಮ್ಮೇಳನ. ಇದಕ್ಕೆ ಸಿದ್ಧಾಪುರ ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿಯ ದಕ್ಷತೆಯ ಕಾರ್ಯವೇ ಕಾರಣ. ಕರಾವಳಿಯ ಸಂಸ್ಕೃತಿ ಶ್ರೇಷ್ಠ. ಜಗತ್ತಿನ ಯಾವುದೇ ಮೂಲೆಗೆ ಹೋದರೂ ಈ ಸಂಸ್ಕೃತಿ ಕಾಣ ಸಿಗದು. ಎಲ್ಲ ಕಡೆ ಏಕ ರೂಪದ ಶಿಕ್ಷಣ ಜಾರಿಯಾಗಬೇಕು ಎಂದು ಹೇಳಿದರು. 

ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷ ಕೆ. ನಾರಾಯಣ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಡಿ. ಗೋಪಾಲಕೃಷ್ಣ ಕಾಮತ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭ ಸಮ್ಮೇಳನದ ಅಧ್ಯಕ್ಷ ಕೆ.ಕೆ. ಕಾಳವರ್ಕರ್ ಅವರನ್ನು ಸನ್ಮಾನಿಸಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com