ರೈತ ವಿರೋಧಿ ನೀತಿಯ ವಿರುದ್ಧ ಹೋರಾಟ ಪ್ರತಾಪ್‌ಚಂದ್ರ ಶೆಟ್ಟಿ

ಬೈಂದೂರು : ಸರಕಾರ ಪಶ್ಚಿಮಘಟ್ಟ ತಪ್ಪಲಿನ ಪ್ರದೇಶದಲ್ಲಿ ಕಸ್ತೂರಿರಂಗನ ವರದಿ ಜಾರಿಗೆ ತರಲು ಚಿಂತನೆ ನಡೆಸುತ್ತಿದೆ. ಈ ವರದಿ ಜಾರಿಗೆ ಬಂದರೆ ಜಿಲ್ಲೆಯ 23 ಗ್ರಾಮದ ರೈತರಿಗೆ ತೊಂದರೆಯಾಗಲಿದೆ. ಮಾತ್ರವಲ್ಲದೆ ಈ ಭಾಗದಲ್ಲಿ ವನ್ಯಜೀವಿ ಸಂರಕ್ಷಣೆ ಹೆಸರಿನಲ್ಲಿ ಅನಾದಿಕಾಲದಿಂದ ವಾಸಿಸುತ್ತಿರುವ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಸರಕಾರ ಯಾವುದೇ ರೈತ ವಿರೋಧಿ ನೀತಿ ಜಾರಿಗೆ ತಂದರೂ ಅದರ ವಿರುದ್ಧ ಜಿಲ್ಲಾ ರೈತ ಸಂಘ ಹೋರಾಟಕ್ಕಿಳಿಯಲಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪ್‌ಚಂದ್ರ ಶೆಟ್ಟಿ ಹೇಳಿದರು.

ಅವರು ಬೈಂದೂರು ವಲಯದ ಜಡ್ಕಲ್‌ನ ಸೈಂಟ್‌ ಜಾರ್ಜ್‌ ಸಭಾಭವನದಲ್ಲಿ ರೈತರ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಂಘಟನೆಯ ಮೂಲ ಉದ್ದೇಶ ಜಿಲ್ಲೆಯ ಎಲ್ಲಾ ರೈತರ ಸಮಸ್ಯೆಗೆ ಒಂದು ಹಂತದಲ್ಲಿ ಪರಿಹಾರ ಒದಗಿಸುವ ಯತ್ನವಾಗಿದೆ. ಚಟುವಟಿಕೆುಂದ ಕೆಲಸ ಮಾಡಿದಾಗ ಮಾತ್ರ ರೈತರ ಎಲ್ಲಾ ಪ್ರಸ್ತಾಪಗಳು ಸರಕಾರದ ಮಟ್ಟಕ್ಕೆ ತಲುಪುತ್ತದೆ.

ಜಿಲ್ಲೆಯ ಎಲ್ಲಾ ಭಾಗದಲ್ಲೂ ಸರ್ವೆಯರ್‌ ಕೊರತೆ ಇದೆ.ಇದು ರೈತರಿಗೆ ಅತೀ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಆದರೆ ಸರ್ವೇಯರ್‌ ನೇಮಕಾತಿ ಪ್ರಕ್ರಿಯೆ ಆಗುವ ಹಂತದಲ್ಲಿದೆ, ಇದನ್ನು ಸರ್ಕಾರ ಕಾಲಮಿತಿಯೊಳಗೆ ನಡೆಸದಿದ್ದರೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.

ರಾಜ್ಯದ ಎಲ್ಲಾ ಭಾಗದಲ್ಲೂ ಕೃಷಿ ಬೆಳೆ ಮಂಗಗಳ ಹಾವಳಿಯಿಂದಾಗಿ ಹಾಳಾಗುತ್ತಿದೆ.ಇದರಿಂದಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಇದನ್ನು ನಿಯಂತ್ರಣ ಮಾಡಬೇಕಾಗಿದೆ. ದೇಶದ ನಾನಾ ರಾಜ್ಯದಲ್ಲಿ ಮಂಗನ ಹಾವಳಿಯಿಂದ ಕೃಷಿ ಬೆಳೆಯನ್ನು ರಕ್ಷಿಸಲು ಹಲವು ಪ್ರಯತ್ನ ನಡೆಯುತ್ತಿದೆ. ಇದನ್ನು ನಮ್ಮ ರಾಜ್ಯದಲ್ಲೂ ಜಾರಿಗೆ ತರುವಂತೆ ಅರಣ್ಯ ಸಚಿವರ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಸಚಿವರು ಚಿಂತನೆ ನಡೆಸಿದ್ದು, ಅದನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ಸೈಂಟ್‌ ಜಾರ್ಜ್ ಚರ್ಚಿನ ಧರ್ಮಗುರು ರೆ|ಫಾ| ನರ್ಗಿಸ್‌, ತಾ.ಪಂ .ಸದಸ್ಯ ರಮೇಶ ಗಾಣಿಗ, ಗ್ರಾ.ಪಂ .ಅಧ್ಯಕ್ಷೆ ರೇಸಿ ಜೋಸೆಫ್‌, ಉಪಾಧ್ಯಕ್ಷೆ ರಶ್ಮಿತಾ, ಕೊಲ್ಲೂರು ವ್ಯ.ಸೇ.ಸ.ಸಂಘದ ಅಧ್ಯಕ್ಷ ವಿಶ್ವೇಶ್ವರ ಹೆಗಡೆ, ಮೂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಜಯ ಶಾಸ್ತ್ರಿ, ಸಿದ್ದಾಪುರ ವ್ಯ.ಸೇ.ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ಪೈ, ಸುಬ್ರಾಯ ಸೇರುಗಾರ್‌, ವಿನಾಯಕ್‌ ರಾವ್‌, ಪ್ರಸನ್ನ ಕುಮಾರ ಶೆಟ್ಟಿ, ಸತೀಶ ಕಿಣಿ ಮೊದಲಾದವರು ಉಪಸ್ಥಿತರಿದ್ದರು.

ಸಹಕಾರಿ ಧುರೀಣ ರಾಜು ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಎಲ್‌ ಜೋಷ್‌ ಸ್ವಾಗತಿಸಿದರು. ಪ್ರಭಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com