ಸಾಸ್ತಾನ ಸಂಭ್ರಮ ಸಭಾಭವನದ ಉದ್ಘಾಟನೆ

ಕೋಟ: ಸಮಾಜದಲ್ಲಿ ಎಲ್ಲ ಸಮುದಾಯಗಳನ್ನು ಒಂದೇ ರೀತಿಯಲ್ಲಿ ಪರಿಗಣಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರ ಕಾರ್ಯಪ್ರವೃತ್ತವಾಗಿದ್ದು, ಒಂದು ಕೋ. ರೂ.ಯನ್ನು ಹಿಂದುಳಿದ ಕ್ರೈಸ್ತ ಸಮುದಾಯಕ್ಕೆ ಮೀಸಲಿರಿಸುವ ಮೂಲಕ ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಒತ್ತು ನೀಡಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್‌ ಸೊರಕೆ ಹೇಳಿದರು.
     ಅವರು ಸಾಸ್ತಾನ ಸೈಂಟ್‌ ಥೋಮಸ್‌ ಓಥೊಡೋಕ್ಸ್‌ ಸಿರಿಯನ್‌ ಇಗರ್ಜಿಯ ಸಂಭ್ರಮ ಸಭಾಭವನ ಉದ್ಘಾಟಿಸಿ ಮಾತನಾಡಿದರು.

ಸೌಲಭ್ಯದ ಭರವಸೆ
 ಸಾಸ್ತಾನ ಸೈಂಟ್‌ ಥೋಮಸ್‌ ಓಥೊìಡೋಕ್ಸ್‌ ಇಗರ್ಜಿಗೆ ಸರಕಾರದಿಂದ ದೊರಕುವ ಅನುದಾನ ಹಾಗೂ ವಿವಿಧ ಸೌಲಭ್ಯ ದೊರಕಿಸಿಕೊಡುವುದಾಗಿ ಅವರು ಭರವಸೆ ನೀಡಿದರು.   
ಸಭಾಭವನದ ಶುದ್ಧಿಕರಣ ಹಾಗೂ ಆಶೀರ್ವಚನ ವಿಧಿಧಿವಿಧಾನವನ್ನು ಬ್ರಹ್ಮಾವರ ಪ್ರಾಂತ್ಯದ ಬಿಷಪ್‌ ಪರಮಪೂಜ್ಯ ಯಾಕೂಬ್‌ ಮಾರ್‌ ಎಲಿಯಾಸ್‌ ನೆರವೇರಿಸಿದರು.

ಸಾಮಾಜಿಕ ಸಮಸ್ಯೆ ದೂರ ಮಾಡಬೇಕು

ಮುಖ್ಯ ಅತಿಥಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದ ಜಯಪ್ರಕಾಶ್‌ ಹೆಗಡೆ ಮಾತನಾಡಿ, ಸಮಾಜದಲ್ಲಿ ಮಾನವೀಯ ಮೌಲ್ಯದೊಂದಿಗೆ ಎಲ್ಲ ಸಮುದಾಯಗಳು ಒಂದೇ ಎಂಬ ಭಾವನೆಯೊಂದಿಗೆ ಸಂಭ್ರಮದಿಂದ ಬೆರೆಯುವ ಕೆಲಸವಾಗಬೇಕು. ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಸಾಮಾಜಿಕ ಸಮಸ್ಯೆ ದೂರ ಮಾಡುವ ಕೆಲಸವಾಗಬೇಕು ಎಂದರು.

ದೇವರ ಕೃಪೆಯಿಂದ ಕಾರ್ಯ ಸುಲಭ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಾವರ ಪ್ರಾಂತ್ಯ ಬಿಷಪ್‌ ಪೂಜ್ಯ ಯಾಕೊಬ್‌ ಮಾರ್‌ ಎಲಿಯಾಸ್‌ ಆಶಿರ್ವಚನ ನೀಡಿ, ಪ್ರತಿಯೊಂದು ಕೆಲಸ ಕಾರ್ಯಗಳನ್ನು, ಉತ್ತಮ ಗುರಿಯೊಂದಿಗೆ ನಿರ್ವಹಿಸಿದಾಗ ದೇವರ ಕೃಪೆಯಿಂದ ಆ ಕಾರ್ಯ ಸುಲಭವಾಗುತ್ತದೆ. ಈ ಸಂಭ್ರಮ ಸಭಾಭವನ ಸಮಾಜದ ಉತ್ತಮ ಕೆಲಸ ಕಾರ್ಯಗಳಿಗೆ ಉಪಯೋಗವಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಪಾಂಡೇಶ್ವರ ಪಂಚಾಯತ್‌ ಅಧ್ಯಕ್ಷೆ ಲೀಲಾವತಿ ಗಂಗಾಧರ್‌, ಸೈಂಟ್‌ ಮೇರಿಯಸ್‌ ಕೆಥೆಡ್ರಲ್‌ ನಾವಿಗಾರ ಜನರಲ್‌ ರೆ.ಫಾ. ಡೆವಿಡ್‌ ಕ್ರಾಸ್ತಾ, ಸಹಾಯಕ ಧರ್ಮಗುರು ರೆ.ಫಾ. ಲಾರೆನ್ಸ್‌ ಡಿಸೋಜ, ರೆ.ಫಾ ಅಬ್ರಹಾಮ್‌ ಕುರಿಯಾಸ್‌, ರೆ.ಪಾ. ಪೌಲ್‌ ಜೇಕಬ್‌ ಮೊದಲಾದವರು ಉಪಸ್ಥಿತರಿದ್ದರು.

ಸಭಾಂಗಣ ನಿರ್ಮಾಣದಲ್ಲಿ ಶ್ರಮಿಸಿದ ಇಗರ್ಜಿಯ ಟ್ರಸ್ಟಿ ಜೆರೋಮ್‌ ರೋಡಿಗ್ರಸ್‌, ಕಾರ್ಯದರ್ಶಿ ಲಾರೆನ್ಸ್‌ ಆಲ್ಮೇಡಾ ಅವರನ್ನು ಸಮ್ಮಾನಿಸಲಾಯಿತು.

ರೋಬರ್ಟ್‌ ರೋಡ್ರಿಗಸ್‌ ನಿರೂಪಿಸಿ, ಜೇರೋಮ್‌ ರೋಡ್ರಿಗಸ್‌ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com