ಗೂಂಡಾಕಾಯಿದೆ ವಾಪಸಿಗೆ ಜಾಗರಣ ವೇದಿಕೆ ಆಗ್ರಹ

ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಅನಂತರ ಹಿಂದೂ ಸಮಾಜದ ಮೇಲೆ ಆಕ್ರಮಣ, ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಪ್ರಯತ್ನ ಆರಂಭವಾಗಿದೆ. ತುಮಕೂರಿನಲ್ಲಿ ಸಾಮಾಜಿಕ ಕಾರ್ಯಕರ್ತನಾಗಿ ಹೋರಾಟ ನಡೆಸಿದ ಹಿಂದೂ ಸಂಘಟನೆ ಕಾರ್ಯಕರ್ತ ರಾಘವೇಂದ್ರ ಅಜೆಕಾರು ಅವರ ಮೇಲೆ ಮತೀಯ ಗೂಂಡಾ ಕಾಯಿದೆ ಹಾಕಲಾಗಿದೆ. ಇದನ್ನು ಬೇಷರತ್‌ ಆಗಿ ವಾಪಸ್‌ ಪಡೆಯಬೇಕು ಎಂದು ಹಿಂದೂ ಜಾಗರಣ ಆಗ್ರಹಿಸಿದೆ.

ಈ ಸಂಬಂಧ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜ. 1ರಂದು ಪ್ರತಿಭಟನೆ ನಡೆಯಲಿದೆ. ಹಿಂಜಾವೇ ರಾಜ್ಯ ಸಹ ಸಂಚಾಲಕ ಸತ್ಯಜಿತ್‌ ಸುರತ್ಕಲ್‌ ಮತ್ತು ಹಿಂಜಾವೇ ಉಡುಪಿ ಜಿಲ್ಲಾಧ್ಯಕ್ಷ ಅಚ್ಯುತ ಅಮೀನ್‌ ಕಲ್ಮಾಡಿ ಅವರು ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದರು.

'ತುಮಕೂರು ಜಿಲ್ಲೆಯ ಶಿರಾ ನಗರದಲ್ಲಿ ಮುಸಲ್ಮಾನರ ಖಬರಸ್ಥಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಮುಸಲ್ಮಾನರು ಅಕ್ರಮವಾಗಿ ವಾಣಿಜ್ಯ ಮಳಿಗೆ ಕಟ್ಟುತ್ತಿರುವುದನ್ನು ವಿರೋಧಿಸಿ ರಾಘವೇಂದ್ರ ಅವರು ಕಾನೂನುಬದ್ಧವಾಗಿ ಹೋರಾಟ ನಡೆಸಿಕೊಂಡು ಬಂದಿದ್ದರು. ಆದರೆ ಸರಕಾರವು ಒಂದು ಕೋಮಿನ ಓಲೈಕೆ ಮಾಡುವುದಕ್ಕಾಗಿ ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಮೊಕ್ಕದ್ದಮೆ ದಾಖಲಿಸಿದೆ. ರಾಘವೇಂದ್ರ ಅವರ ಮೇಲೆ ಮತೀಯ ಗೂಂಡಾ ಕಾಯಿದೆ ಹಾಕಿದೆ. ಇವರ ಮೇಲೆ ಇದುವರೆಗೆ ಯಾವುದೇ ಒಂದು ಪ್ರಕರಣವೂ ದಾಖಲಾಗಿರಲಿಲ್ಲ. ಆದರೆ ಕೇವಲ ಹಿಂದೂ ಕಾರ್ಯಕರ್ತ ಎಂಬ ಉದ್ದೇಶದಿಂದ ಗೂಂಡಾ ಕಾಯಿದೆ ಹಾಕಲಾಗಿದೆ ಎಂದು ಹೇಳಿದರು.

ಸೋಗಲಾಡಿ ಸೆಕ್ಯುಲರ್‌ವಾದಿಗಳು, ಬಾಡಿಗೆ ಬುದ್ಧಿಜೀವಿಗಳು, ಸ್ವಯಂಘೋಷಿತ ಪ್ರಗತಿಪರರು, ವಿಕೃತ ವಿಚಾರವಾದಿಗಳ ಒಂದು ಗುಂಪು ಸರಕಾರದಲ್ಲಿ ಸೇರಿಕೊಂಡು ವ್ಯವಸ್ಥಿತವಾಗಿ ಹಿಂದೂ ಸಮಾಜವನ್ನು ಗುರಿಯಾಗಿಸಿ ಅದರ ನಾಶಕ್ಕೆ ಪಣ ತೊಟ್ಟಿದೆ ಎಂದು ಆರೋಪಿಸಿ ಅವರು, ಸರಕಾರದ ಹಿಂದೂ ವಿರೋಧಿ ಮಾನಸಿಕತೆಯ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಹಿಂಜಾವೇಯಿಂದ ನಡೆಯಲಿದೆ ಎಂದರು.

ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಿಂಜಾವೇ ಮಂಗಳೂರು ವಿಭಾಗ ಅಧ್ಯಕ್ಷ ವಾಸುದೇವ ಗೌಡ, ವಿಭಾಗ ಸಂಚಾಲಕ ರವಿರಾಜ್‌ ಬಿಸಿರೋಡ್‌, ಬಜರಂಗದಳ ಮುಖಂಡ ಶರಣ್‌ ಪಂಪ್‌ವೆಲ್‌, ಉಡುಪಿಯ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಅರವಿಂದ ಕೋಟೇಶ್ವರ, ಉಡುಪಿ ತಾಲೂಕು ಅಧ್ಯಕ್ಷ ದಿನೇಶ್‌ ನಾಯಕ್‌, ತಾಲೂಕು ಸಂಚಾಲಕ ಶಿವಪ್ರಸಾದ್‌ ಪಾಲನ್‌, ಹರ್ಷವರ್ಧನ್‌, ಪ್ರಕಾಶ್‌ ಕುಕ್ಕೆಹಳ್ಳಿ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com