ನಾಗೂರು : ಒಡೆಯರಮಠ ದೇವಸ್ಥಾನ ಶಿಲಾನ್ಯಾಸ

ಕಿರಿಮಂಜೇಶ್ವ: ಗ್ರಾಮದ ನಾಗೂರಿನಲ್ಲಿರುವ ಪುರಾತನ ಒಡೆಯರಮಠ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನವೀಕರಣ ಕಾಮಗಾರಿಯ ಶಿಲಾನ್ಯಾಸವನ್ನು ಕೋಟದ ವೇ. ಮೂ. ಯಜ್ಞನಾರಾಯಣ ಸೋಮಯಾಜಿ ಅವರು ಗುರುವಾರ ನೆರವೇರಿಸಿದರು. ಕಾಮಗಾರಿಯು ಶೀಘ್ರ ಪೂರ್ಣಗೊಂಡು, ಪುನರ್‍ಪ್ರತಿಷ್ಠಾಧಿ ವಿಧಿಗಳು ಸಕಾಲದಲ್ಲಿ ನಡೆಯಲಿ ಎಂದು ಅವರು ಹಾರೈಸಿದರು. 
   ಎಲ್ಲರನ್ನು ಸ್ವಾಗತಿಸಿದ ಆಡಳಿತಗಾರ ಹಾಗೂ ಅರ್ಚಕ ಮಂಜುನಾಥ ಉಡುಪ ದೇವಸ್ಥಾನದ ಹಿನ್ನೆಲೆಯನ್ನು ವಿವರಿಸಿದರು. ಮೂಲತ ಒಡೆಯರ ಮಠವು ಘಟ್ಟದ ಮೇಲಿನ ಬಂಡಿಗಡಿ ತೆಂಗಿನ ಮಠಕ್ಕೆ ಸೇರಿತ್ತು. ಬಂಡಿಗಡಿ ಮಠದಲ್ಲಿ ಕಿರಿಮಂಜೇಶ್ವರದಲ್ಲಿ ಇರುವಂತೆ ಅಗಸ್ತ್ಯೇಶ್ವರ, ವಿಶಾಲಾಕ್ಷಿ ಮತ್ತು ಗಣಪತಿ ದೇವಾಲಯಗಳಿವೆ. ಇಲ್ಲಿನ ಒಡೆಯರ ಮಠದ ಆವರಣದಲ್ಲಿ ಆಗಿ ಹೋದ ಐವರು ಗುರುಗಳ ಸಮಾಧಿಗಳಿವೆ. ಆರ್ಥಿಕ ಸಂಕಷ್ಠದ ಕಾರಣ ಮಠದ ಆಸ್ತಿಯು 1904ರಲ್ಲಿ ಏಲಂ ಆದಾಗ ಅದು ಉಡುಪಿಯ ಪೇಜಾವರ ಮಠದ ಅಧೀನಕ್ಕೆ ಸೇರಿತು. ನಾಗಪುರ ಬ್ರಾಹ್ಮಣ ವರ್ಗದವರಿಗೆ ಇದು ಗುರುಮಠವೆನಿಸಿದ್ದು, ವ್ಯಾಸ ಪೂರ್ಣಿಮೆಯಂದು ಅವರು ಗುರುಗಳ ಆರಾಧನೆ ನಡೆಸುತ್ತಾರೆ. ಇಲ್ಲಿ ಲಕ್ಷ್ಮೀ ಸಹಿತವಾದ ದಶಭುಜ ಗಣಪತಿ, ಹನುಮಂತ ಪರಿವಾರ ದೇವರುಗಳು. ಇದು ಸ್ಮಾರ್ತ ಮಠವಾದರೂ ಈಗ ಪೇಜಾವರ ಮಠದ ಶಾಖಾ ಮಠ ಎಂದು ಪರಿಗಣಿಸಲ್ಪಡುತ್ತದೆ. ಮಠದ 
ಗೋಪಾಲಕೃಷ್ಣ ದೇವಸ್ಥಾನ ಜೀರ್ಣಗೊಂಡಿರುವ ಹಿನ್ನೆಲೆಯಲ್ಲಿ ಸುಮಾರು 35 ಲಕ್ಷ ರೂಪಾಯಿ 
ವೆಚ್ಚದಲ್ಲಿ ಶಿಲಾಮಯ ದೇಗುಲ ನಿರ್ಮಿಸಲು ಸಂಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
  ಈ ಸಂದರ್ಭದಲ್ಲಿ ಅಗಸ್ತ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಉಮೇಶ 
ಶ್ಯಾನುಭಾಗ್, ಮಾಜಿ ಅಧ್ಯಕ್ಷ ಪ್ರೊ. ಕೆ. ವಾಸುದೇವ ಕಾರಂತ, ಮಹಾಭಾರತ ಪದ್ಮನಾಭ ಹೆಬ್ಬಾರ್, ಜೋಷಿ ರಾಮಕೃಷ್ಣ ಕಾರಂತ, ಚಂದ್ರಶೇಖರ ಭಟ್, ಕೂಟಾಡಿ ರಾಮಕೃಷ್ಣ ಭಟ್, ಕಂಡಿಕೆರೆ ರಾಘವೇಂದ್ರ ಕಾರಂತ, ಗಜಾನನ ಜೋಷಿ, ಸುಬ್ರಹ್ಮಣ್ಯ ಐತಾಳ್, ವಾಸುದೇವ ನಾವಡ, ಕೆ. ಚೆನ್ನಕೇಶವ ಕಾರಂತ, ಶ್ರೀನಿವಾಸ ಬಿಡುವಾಳ, ಅಳವಳ್ಳಿ ನಾರಾಯಣ, ಸುಬ್ಬ ಎನ್. ಚಂದನ್, ಎಸ್. ನಾರಾಯಣ, ಸಂಜೀವ ಮಡಿವಾಳ, ರಮೇಶ ದೇವಾಡಿಗ ಮಕ್ಕಿತ್ತಾರು, ಸತೀಶ ದೇವಾಡಿಗ ಮಠದಹಿತ್ಲು, ಎಸ್. ಜನಾರ್ದನ ಮರವಂತೆ ಮತ್ತಿತರರು ಇದ್ದರು.

ಕಿರಿಮಂಜೇಶ್ವರ ಗ್ರಾಮದ ನಾಗೂರು ಒಡೆಯರಮಠ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸ್ವಾಗತ ದ್ವಾರವನ್ನು ವೇ. ಮೂ. ಕೋಟ ಯಜ್ಞನಾರಾಯಣ ಸೋಮಯಾಜಿ ಗುರುವಾರ ಉದ್ಘಾಟಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com