ಶಿವ ಕೇಶವರು ಒಂದೇ: ಶೃಂಗೇರಿ ಶ್ರೀ

ಕುಂದಾಪುರ: ಭಗವಂತನಿಗೆ ನಿರ್ದಿಷ್ಟ ರೂಪವಿಲ್ಲದಿದ್ದರೂ ನಾನಾ ರೂಪದಲ್ಲಿ ಆತನನ್ನು ಅರ್ಚಿಸಿ ಅನುಗ್ರಹ ಪಡೆಯುವುದು ನಡೆದುಕೊಂಡುಬಂದಿದೆ. ಕ್ರೋಢ ಕ್ಷೇತ್ರದಲ್ಲಿ ಶಿವ ಕೇಶವರು ಬೇರೆ ಬೇರೆ ಅಲ್ಲ. ಭಕ್ತರನ್ನು ಅನುಗ್ರಹಿಸಲು ಒಂದಾಗಿ ನೆಲೆನಿಂತವರು. ಇಂತಹ ಪುರಾಣ ಕ್ಷೇತ್ರ ಹೊಸ ಭವ್ಯತೆಯೊಂದಿಗೆ ಶೋಭಿಸುತ್ತಿರು ವುದು ನಾಡಿಗೆ ಶ್ರೇಯಸ್ಕರ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಭಾರತಿ ತೀರ್ಥ ಸ್ವಾಮೀಜಿ ಹೇಳಿದರು. 
     ಶಂಕರನಾರಾಯಣದ ಕ್ರೋಢ ಶ್ರೀಶಂಕರನಾರಾ ಯಣ ಕ್ಷೇತ್ರದಲ್ಲಿ ದೇವರ ನೂತನ ವಿಗ್ರಹ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶಾಭಿಷೇಕ ಅಂಗವಾಗಿ ಜರುಗಿದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. 
    ಭಾರತ ದೇವಾಲಯಗಳ ನೆಲೆವೀಡು. ಪುರಾತನ ದೇವಾಲಯಗಳ ಚೈತನ್ಯವೃದ್ಧಿಯಿಂದ ಪರಿಸರದ ಪ್ರಗತಿ ಆಗುವುದು. ಕ್ರೋಢ ಶ್ರೀ ಶಂಕರನಾರಾಯಣ ಕ್ಷೇತ್ರದಲ್ಲಿ ಹೊಸ ಪ್ರಭೆ ಅವತರಿಸಿದೆ. ಜನರು ಭಕ್ತಿಶ್ರದ್ಧೆಯಿಂದ ಭಗವಂತನನ್ನು ಆರಾಧಿಸುವ ಮೂಲಕ ಕ್ಷೇತ್ರದ ಔನ್ನತ್ಯಕ್ಕೆ ಮುಂದಾಗಬೇಕು. ಹರಿಹರರು ಒಂದಾಗಿ ನೆಲೆನಿಂತಿರುವ ಈ ಕ್ಷೇತ್ರ ಪರಮಪಾವನವಾದುದು ಎಂದು ಅವರು ಬಣ್ಣಿಸಿದರು. ಅವರು ಇದೇ ಸಂದರ್ಭದಲ್ಲಿ ಶ್ರೀಗಳು ದೇವಾಲಯಗಳ ನವೀಕರಣದಲ್ಲಿ ಸಹಕರಿಸಿದ ದಾನಿಗಳನ್ನು, ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡ ಶಿಲ್ಪಿಗಳನ್ನು ಗೌರವಿಸಿದರು. ದೇವಾಲಯದ ಜೀರ್ಣೋದ್ಧಾರ ಕೈಂಕರ್ಯದಲ್ಲಿ ದುಡಿದ ಪ್ರತಿಯೊಬ್ಬರನ್ನೂ ಗುರುತಿಸಿ ಗೌರವಿಸಲಾಯಿತು. 
     ಬ್ರಹ್ಮಕುಂಭಾಭಿಷೇಕದ ನೂತನ ನಾಮಫಲಕ ಅನಾವರಣ ಗೊಳಿಸಿದರು. ದೇವಾಲಯದ ಆಡಳಿತ ಮೊಕ್ತೇಸರ ಲಕ್ಷ್ಮೀನಾರಾ ಯಣ ಉಡುಪ ಸ್ವಾಗತಿಸಿದರು. ತಟವಟ್ಟು ವಾಸುದೇವ ಜೋಯಿಸ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶೃಂಗೇರಿ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಡಾ.ಎಚ್.ವಿ. ನರಸಿಂಹಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು. ಎಸ್. ದಯಾನಂದ ರಾವ್ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com