ಮಾನವ ಹೊತ್ತ ಪಲ್ಲಕ್ಕಿಯೇರುವುದಿಲ್ಲ: ಪೇಜಾವರ ಶ್ರೀ ಘೋಷಣೆ

ಉಡುಪಿ: ಮಾನವ ಹೊತ್ತ ಪಲ್ಲಕ್ಕಿಯನ್ನು ಇನ್ನೆಂದೂ ಏರದಿರಲು ನಾನು ನಿರ್ಧರಿಸಿದ್ದೇನೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಘೋಷಿಸಿದ್ದಾರೆ.

ಉಡುಪಿಯ ಅಷ್ಟ ಮಠಗಳ ಸ್ವಾಮೀಜಿಗಳನ್ನು ಮಾನವ ಹೊತ್ತ ಪಲ್ಲಕ್ಕಿಗಳಲ್ಲಿ ಮೆರವಣಿಗೆ ನಡೆ ಸುವ ಪರ್ಯಾಯ ಮೆರವಣಿಗೆ ಇದೇ ಜ.18ರ ಬೆಳಗಿನ ಜಾವ ಕಾಣಿಯೂರು ಮಠಾಧೀಶರ ಪರ್ಯಾಯದ ಸಂದರ್ಭದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಪೇಜಾವರ ಹಿರಿಯ ಶ್ರೀಗಳು ತಮ್ಮ ಮಠದಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.

ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಅಡ್ಡಪಲ್ಲಕ್ಕಿ ಹಾಗೂ ಕೆಲವು ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಸಮ್ಮೇಳನದ ಅಧ್ಯಕ್ಷರನ್ನು ಪಲ್ಲಕ್ಕಿಗಳಲ್ಲಿ ಕರೆದೊ ಯ್ಯುವುದರ ಕುರಿತು ರಾಜ್ಯಾದ್ಯಂತ ಚರ್ಚೆಗಳು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಹಾಗೂ ಇದಕ್ಕೆ ವ್ಯಾಪಕವಾದ ಟೀಕೆಗಳು ವ್ಯಕ್ತವಾದ ಕಾರಣ ತಾನು ಈ ನಿರ್ಧಾರ ತೆಗೆದುಕೊಂಡಿ ರುವುದಾಗಿ ಅವರು ಹೇಳಿದರು.

ಉಡುಪಿಯ ಅಷ್ಟಮಠಗಳ ಪರ್ಯಾಯ ಸಂದರ್ಭದಲ್ಲಿ ಪರ್ಯಾಯ ಪೀಠವೇರುವ ಸ್ವಾಮೀಜಿ ಸೇರಿದಂತೆ ಏಳು ಮಠಗಳ ಸ್ವಾಮೀಜಿಗಳನ್ನು ಜೋಡುಕಟ್ಟೆಯಿಂದ ಪಲ್ಲಕ್ಕಿಯಲ್ಲಿ ಕರೆತರುವುದು ಸಂಪ್ರದಾಯವಾಗಿ ಆಚರಿಸಲ್ಪಡುತ್ತಿದೆ. ಆದರೆ ಸಂಪ್ರದಾಯಕ್ಕೆ ಭಂಗಬರದಂತೆ ವಾಹನದಲ್ಲಿರಿಸಿದ ಪಲ್ಲಕ್ಕಿಯಲ್ಲಿ ಕುಳಿತು ತಾನು ಮೆರವಣಿಗೆಯಲ್ಲಿ ಭಾಗವಹಿಸುತ್ತೇನೆ. ತನ್ನ ಈ ಅಭಿಪ್ರಾಯವನ್ನು ಪರ್ಯಾಯ ಪೀಠವೇರುವ ಪೇಜಾವರದ ದ್ವಂದ್ವ ಮಠವಾದ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು ಅನುಮೋದಿಸಿದ್ದಾರೆ. ಅಲ್ಲದೇ ಪಲಿಮಾರು ಮಠಾಧೀಶರು ಇದಕ್ಕೆ ಸಮ್ಮತಿಸಿದ್ದಾರೆ. ಆದುದರಿಂದ ನಾವೆಲ್ಲರೂ ವಾಹನದಲ್ಲಿರಿಸಿದ ಪಲ್ಲಕ್ಕಿಗಳಲ್ಲಿ ಸಾಗಿಬರುತ್ತೇವೆ. ಆದರೆ ಉಳಿದ ಸ್ವಾಮೀಜಿಗಳು ಅವರ ಕ್ರಮವನ್ನು ಅನುಸರಿಸಲು ಸ್ವತಂತ್ರರಿದ್ದಾರೆ ಎಂದು ಪೇಜಾವರ ಶ್ರೀಗಳು ನುಡಿದರು.

ಇತ್ತೀಚೆಗೆ ಮೂಡುಬಿದಿರೆಯ ವಿಶ್ವನುಡಿಸಿರಿ ಸಂದರ್ಭದಲ್ಲಿ ಎದ್ದ ಪಲ್ಲಕ್ಕಿ ಮೆರವಣಿಗೆ ವಿವಾದದ ಸಂದರ್ಭದಲ್ಲಿ ಸಾಹಿತಿಗಳು ಮಾನವರು ಹೊತ್ತ ಪಲ್ಲಕ್ಕಿಯಲ್ಲಿ ಸಾಗುವುದನ್ನು ವಿರೋಧಿಸಿ ನಾನು ಹೇಳಿಕೆ ನೀಡಿದ್ದೆ. ಈಗ ಅದನ್ನೇ ನಾನು ಅನುಸರಿ ಸುವುದು ಸರಿಯಲ್ಲ. ಅಲ್ಲದೇ ನಾನು ಮೊದಲಿನಿಂದಲೂ ಇಂಥ ಕ್ರಮಕ್ಕೆ ವಿರೋಧಿ ಯಾಗಿದ್ದೆ. ಈಗ ಅದನ್ನು ಕಾರ್ಯರೂಪಕ್ಕೆ ತರುವ ಅವಕಾಶ ದೊರಕಿದೆ ಎಂದರು.

ಅಲ್ಲದೇ ಉತ್ತರ ಕರ್ನಾಟಕದ ಅನೇಕ ಕಡೆಗಳಲ್ಲಿ ಅಡ್ಡಪಲ್ಲಕ್ಕಿ ವಿವಾದ ಆರಂಭಗೊಂಡಾಗ ಕೆಲವರು, ಉಡುಪಿ ಅಷ್ಟಮಠಗಳ ಉದಾಹರಣೆಗಳನ್ನು ನೀಡಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಇದಕ್ಕೆ ಈಗಾಗಲೇ ನಾಡಿನಲ್ಲಿ ವಿರೋಧ ಕಾಣಿಸಿಕೊಂಡಿರುವ ಕಾರಣ, ಉಡುಪಿಯಲ್ಲಿ ನಾವೇ ಸಂಪ್ರದಾಯದ ಬದಲಾವಣೆಗೆ ಮುಂದಾಗುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದರು.ಮಡೆಸ್ನಾನದ ವಿಷಯದಲ್ಲೂ ವಿವಾದ ಉಂಟಾದಾಗ ತಾನು ಎಡೆಸ್ನಾನದ ಪರಿಹಾರ ಸೂಚಿಸಿದ್ದೆ ಎಂದು ಶ್ರೀವಿಶ್ವೇಶ ತೀರ್ಥರು ನುಡಿದರು.

ಪರ್ಯಾಯ ಸಂದರ್ಭದಲ್ಲಿ ಕಳೆದ ಬಾರಿ ವಿವಾದ ರೂಪ ತಳೆದ ಉಡುಪಿಯ ಎಲ್ಲಾ ಎಂಟು ಮಠಾಧೀಶರಿಗೆ ಆಹ್ವಾನ ನೀಡುವ ವಿಷಯದ ಕುರಿತು ಅವರನ್ನು ಪ್ರಶ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಲು ಪೇಜಾವರ ಶ್ರೀ ನಿರಾಕರಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com