ಕಾಂಗ್ರೆಸಿಗೆ ಪಾಠ ಹೇಳುವ ನೈತಿಕತೆ ಡಿವಿಎಸ್‌ಗಿಲ್ಲ: ಕಾಂಗ್ರೆಸ್

ಉಡುಪಿ: ಆಡಳಿತ ಪಕ್ಷದ ಸಚಿವರು ಆರೋಪಿಗಳಿಗೆ ರಕ್ಷಣೆ ನೀಡುತ್ತಿರುವುದರಿಂದ ಕರಾವಳಿಯಲ್ಲಿ ಭಯಾನಕ ವಾತಾವರಣ ಸೃಷ್ಟಿಯಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಉಡುಪಿ ಜಿಲ್ಲಾ ಕಾಂಗ್ರೆಸ್, ಕರಾವಳಿ ಜಿಲ್ಲೆಯಲ್ಲಿ ಭಯೋತ್ಪಾದನೆ ಚಟುವಟಿಕೆಗೆ ಪ್ರೋತ್ಸಾಹ ಸಿಗುತ್ತಿರುವ ಬಗ್ಗೆ 2 ವರ್ಷದ ಹಿಂದೆಯೇ ಸಿಬಿಐ ರಾಜ್ಯ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರೂ ಕ್ರಮ ಕೈಗೊಳ್ಳದ ಬಿಜೆಪಿ ಮತ್ತು ಮಾಜಿ ಸಿಎಂಗೆ ಈಗ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದಿದೆ. 

ಕಾಂಗ್ರೆಸ್‌ನವರಿಗೆ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಕುರ್ಚಿ ಬಿಟ್ಟು ತೆರಳಲಿ ಎಂದು ಪೌರುಷ ಮೆರೆಯುತ್ತಿರುವುದು ಹಾಸ್ಯಾಸ್ಪದ ಎಂದು ಹೇಳಿಕೆಯಲ್ಲಿ ತಿಳಿಸಿರುವ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಲೆವೂರು ಹರೀಶ್ ಕಿಣಿ, ಕುರ್ಚಿ ಬಿಟ್ಟು ತೆರಳಲು ಹೇಳುವ ನೈತಿಕ ಅಧಿಕಾರ ಬಿಜೆಪಿಗೆ ಇಲ್ಲ. ಅದೇನಿದ್ದರೂ ಜನರ ಪರಮಾಧಿಕಾರ. ಆ ಅಧಿಕಾರ ಚಲಾಯಿಸಿಯೇ ಮತದಾರರು ಕಾಂಗ್ರೆಸನ್ನು ಅಧಿಕಾರಕ್ಕೇರಿಸಿದ್ದಾರೆ ಹಾಗೂ ಸದಾನಂದ ಗೌಡ ಅವರ ಬಿಜೆಪಿಯನ್ನು ಕುರ್ಚಿ ಬಿಟ್ಟು ತೆರಳುವಂತೆ ಮಾಡಿದ್ದಾರೆ ಎಂದಿದ್ದಾರೆ. 

ಮಣಿಪಾಲ ಪ್ರಕರಣದ ಆರೋಪಿಗಳನ್ನು ಕೆಲವೇ ದಿನದಲ್ಲಿ ಬಂಧಿಸಿ ಜೈಲಿಗಟ್ಟಿರುವ ಬಗ್ಗೆ ಬಿಜೆಪಿ ಕಾರ್ಯಕರ್ತರು ಸರಿಯಾಗಿ ಮಾಹಿತಿ ನೀಡದಿರುವುದರಿಂದಲೇ ಡಿವಿಎಸ್ ಇದರ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರಬಹುದು ಎಂದು ಹೇಳಿರುವ ಕಾಂಗ್ರೆಸ್, ಈ ಹಿಂದೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಗೆದ್ದಾಗ ಉಡುಪಿಯಲ್ಲೇ ಇರುತ್ತೇನೆ ಎಂದು ಮನೆ ಖರೀದಿಸಿದ್ದ ಡಿವಿಎಸ್ ಕೆಲವೇ ದಿನದಲ್ಲಿ ಹೆಚ್ಚಿನ ಬೆಲೆ ಮಾರಿ ರಿಯಲ್ ಎಸ್ಟೇಟ್ ದಂಧೆಯಲ್ಲಿ ಲಕ್ಷಾಂತರ ಲಾಭಗಳಿಸಿ ಬೆಂಗಳೂರಿಗೆ ತೆರಳಿದ್ದಾರೆ. ಈಗ ಪುನಃ ಕರಾವಳಿಯಿಂದ ಸ್ಪರ್ಧಿಸಲು ವೇದಿಕೆ ಸಿದ್ಧಪಡಿಸಿಕೊಳ್ಳುವ ಯತ್ನದಲ್ಲಿ ಕರಾವಳಿಯ ಆಗುಹೋಗುಗಳ ಬಗ್ಗೆ ಅಪಭ್ರಂಶ ಹೇಳಿಕೆ ನೀಡುತ್ತಿದ್ದಾರೆ ಎಂದು ಗೇಲಿ ಮಾಡಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com