2014: ನಾಲ್ವರಿಗೆ ಹೊಸ ವರ್ಷದ ಸಾಧಕ ಪ್ರಶಸ್ತಿ

ಉಡುಪಿ: ಮಣಿಪಾಲ ವಿಶ್ವವಿದ್ಯಾನಿಲಯ, ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌, ಸಿಂಡಿಕೇಟ್‌ ಬ್ಯಾಂಕ್‌ ಜಂಟಿಯಾಗಿ ಕಳೆದ ಅನೇಕ ವರ್ಷಗಳಿಂದ ವೃತ್ತಿ, ಶಿಕ್ಷಣ, ಆರೋಗ್ಯದಾನ, ಸಮಾಜ ಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಹಿರಿಯ ಗಣ್ಯರಿಗೆ ಹೊಸವರ್ಷದ ಪ್ರಶಸ್ತಿ ನೀಡುತ್ತ ಬಂದಿವೆ. 2014ರ ಜನವರಿ 1ರಂದು ಮಣಿಪಾಲದ ವ್ಯಾಲಿವ್ಯೂನಲ್ಲಿ ಜರಗುವ ಹೊಸವರ್ಷದ ಸಮಾರಂಭದಲ್ಲಿ ಸಮ್ಮಾನಿತರಾಗುವ ನಾಲ್ವರ ಕಿರು ಪರಿಚಯ ಇಲ್ಲಿದೆ.

ನ್ಯಾಯವಾದಿ ಎಸ್‌. ರಾಜಗೋಪಾಲಾಚಾರ್‌

ಕಾರ್ಕಳದ ಪ್ರಸಿದ್ಧ ನ್ಯಾಯವಾದಿ ದಿ| ಎ.ಎನ್‌. ಸೀತಾರಾಮ ಆಚಾರ್‌ ಅವರ ಪುತ್ರ ರಾಜಗೋಪಾಲಾಚಾರ್‌ ಅವರೂ ಪ್ರಸಿದ್ಧ ನ್ಯಾಯವಾದಿಗಳಾಗಿ ಖ್ಯಾತರಾದವರು. ಸೀತಾರಾಮ ಆಚಾರ್‌ ಅವರು ದಿ| ಟಿ.ಎಂ.ಎ. ಪೈ ಹಾಗೂ ದಿ| ಟಿ.ಎ. ಪೈ ಅವರ ನಿಕಟವರ್ತಿಯಾಗಿದ್ದು ಕಾರ್ಕಳದ ಭುವನೇಂದ್ರ ಕಾಲೇಜಿನ ಸ್ಥಾಪಕ ಆಡಳಿತ ಮಂಡಳಿಯ ಸದಸ್ಯರಾಗಿದ್ದರು. ಅದೇ ದಾರಿಯಲ್ಲಿ ಅವರ ಪುತ್ರ ರಾಜಗೋಪಾಲಾಚಾರ್ಯರೂ ಸಾಗಿಬಂದಿದ್ದಾರೆ.

1933ರಲ್ಲಿ ಜನಿಸಿದ ಅವರು ಮಂಗಳೂರಿನ ಸೈಂಟ್‌ ಅಲೋಸಿಯಸ್‌ ಕಾಲೇಜಿನಲ್ಲಿ ಬಿ.ಎ. ಪದವಿ ಗಳಿಸಿ ಮದ್ರಾಸಿನಲ್ಲಿ ಕಾನೂನು ಅಭ್ಯಸಿಸಿ ಬಿ.ಎಲ್‌. ಪದವಿ ಗಳಿಸಿದರು. 1956ರಲ್ಲಿ ಅವರು ಮೈಸೂರು ಹೈಕೋರ್ಟಿನಲ್ಲಿ ಅಡ್ವೋಕೇಟ್‌ ಆಗಿ ಸೇರಿಕೊಂಡರು. ಕೆಲಕಾಲ ಕಾರ್ಕಳದ ಬಾರ್‌ ಅಸೋಸಿಯೇಶನ್‌ ಅಧ್ಯಕ್ಷರಾಗಿದ್ದರು. ಸಮರ್ಥ ಸಿವಿಲ್‌ ನ್ಯಾಯವಾದಿ ಎಂದು ಹೆಸರು ಗಳಿಸಿದ ರಾಜಗೋಪಾಲ್‌ ಅವರು ಅನೇಕ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಅಲ್ಲದೆ ಸಹಕಾರಿ ಸಂಘಗಳಿಗೆ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ಕಾರ್ಕಳದ ರೋಟರಿ ಕ್ಲಬ್ಬಿನ ಚಾರ್ಟರ್ಡ್‌ ಸದಸ್ಯರಾಗಿರುವ ಹೆಗ್ಗಳಿಕೆ ಆಚಾರ್ಯ ಅವರದ್ದು, ಎರಡು ಬಾರಿ ಅದರ ಅಧ್ಯಕ್ಷರೂ ಆಗಿದ್ದರು. ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಟ್ರಸ್ಟಿನ ಸದಸ್ಯರೂ ಗವರ್ನಿಂಗ್‌ ಕೌನ್ಸಿಲಿನ ಅಧ್ಯಕ್ಷರೂ ಆಗಿದ್ದಾರೆ. ಅಕಾಡೆಮಿ ಆಫ್ ಜನರಲ್‌ ಎಜುಕೇಶನಿನ ಸುಪ್ರೀಮ್‌ ಗವರ್ನಿಂಗ್‌ ಕೌನ್ಸಿಲ್‌ನಲ್ಲೂ ಸದಸ್ಯರಾಗಿದ್ದರೆ.

ಶಿಕ್ಷಣ ತಜ್ಞ ಡಾ| ಕೆ. ರಾಮನಾರಾಯಣ್‌

2010ರ ಮೇ ತಿಂಗಳಲ್ಲಿ ಮಣಿಪಾಲ ವಿಶ್ವವಿದ್ಯಾಲಯದ ಐದನೇ ವೈಸ್‌-ಚಾನ್ಸಲರ್‌ ಆಗಿ ನಿಯುಕ್ತರಾದ ಡಾ| ಕೆ. ರಾಮನಾರಾಯಣ್‌ ಮಣಿಪಾಲದಲ್ಲೇ ವೈದ್ಯಕೀಯ ಶಿಕ್ಷಕರಾಗಿ ತಮ್ಮ ಜಾnನ, ಸಾಮರ್ಥ್ಯವನ್ನು ವರ್ಧಿಸಿಕೊಳ್ಳುತ್ತ ಉನ್ನತ ಸ್ಥಾನಕ್ಕೆ ಏರಿದವರು.

ಚೆನ್ನೈಯ ಸ್ಟಾನ್ಲಿ ಮೆಡಿಕಲ್‌ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್‌. ಮುಗಿಸಿ, 1977ರಲ್ಲಿ ಕೆಎಂಸಿ ಮಣಿಪಾಲದ ಪೆಥಾಲಜಿ ವಿಭಾಗದಲ್ಲಿ ಟ್ಯೂಟರ್‌ ಆಗಿ ಸೇರಿಕೊಂಡ ಡಾ| ರಾಮನಾರಾಯಣ್‌ ಅಲ್ಲಿ ಅದೇ ವಿಭಾಗದಲ್ಲಿ ಎಂ.ಡಿ. ಪದವಿ ಗಳಿಸಿ ತಮ್ಮ ಸೇವಾ ಕ್ಷೇತ್ರವಾಗಿ ಕೆಎಂಸಿಯನ್ನೇ ಆರಿಸಿಕೊಂಡರು.

ಪೆಥಾಲಜಿಯಲ್ಲಿ ಅಧ್ಯಾಪಕ, ಪ್ರಾಧ್ಯಾಪಕರಾಗಿ, ಜತೆಗೆ ವಿದ್ಯಾರ್ಥಿ ಕ್ಷೇಮ ವಿಭಾಗದ ಡೀನ್‌, ಪಠ್ಯಕ್ರಮ ಅಭಿವೃದ್ಧಿ ವಿಭಾಗದ ಸಹಾಯಕ ಡೀನ್‌ ಆಗಿಯೂ ಸೇವೆ ಸಲ್ಲಿಸಿದರು. 1994ರಲ್ಲಿ ಅಂತಾರಾಷ್ಟ್ರೀಯ ಆರೋಗ್ಯ ವಿಜಾnನಗಳ ಕೇಂದ್ರದಲ್ಲಿ ಸಹಾಯಕ ಡೀನ್‌ ಆಗಿ ವೆಸ್ಟ್‌ ಇಂಡೀಸ್‌ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಪಠ್ಯಕ್ರಮ ಅಭಿವೃದ್ಧಿ ಯೋಜನೆಯಲ್ಲಿ ಕಾರ್ಯನಿರತರಾದರು. ಆಗಲೇ ಮಲೇಶಿಯಾ ಸಹಯೋಗದೊಂದಿಗೆ ಸ್ಥಾಪಿತವಾದ ಮಲೇಕ- ಮಣಿಪಾಲ ಎಂಬಿಬಿಎಸ್‌ ಶಿಕ್ಷಣ ಸಂಸ್ಥೆಯ ಪ್ರಥಮ ಡೀನ್‌ ಆಗಿ ನಿಯುಕ್ತಿಗೊಂಡರು. ಈ ಯೋಜನೆಯು ಅತ್ಯಂತ ಯಶಸ್ವಿಯಾಗಿ ಅನೇಕ ಪ್ರಶಸ್ತಿಗಳಿಗೆ ಭಾಜನವಾಗಿದೆ. ಡಾ| ರಾಮನಾರಾಯಣ್‌ ಅವರು ಅತ್ಯುತ್ತಮ ಶಿಕ್ಷಕ ಪಶಸ್ತಿ, ಶಿಕ್ಷಣ ಸೇವಾ ಪ್ರಶಸ್ತಿ ಮುಂತಾದವುಗಳಿಂದ ಸಮ್ಮಾನಿತರಾಗಿದ್ದಾರೆ.

ವಿದೇಶಗಳಲ್ಲಿ ಉನ್ನತ ವೈದ್ಯಕೀಯ ತರಬೇತಿ, ವೈದ್ಯಕೀಯ ಶಿಕ್ಷಣವನ್ನು ಪುನಾರಚಿಸುವಲ್ಲಿ ಪಡೆದ ನೈಪುಣ್ಯ, ನೂರಾರು ಶಿಕ್ಷಕ ಅಭಿವೃದ್ಧಿ ಯೋಜನಗೆಳನ್ನು ಕಾರ್ಯಗತಗೊಳಿಸಿದ ಅನುಭವ ಅವರನ್ನು ಅಸಾಧಾರಣ ತಜ್ಞರನ್ನಾಗಿ ರೂಪಿಸಿವೆ. ಇಗ್ನೊ ಯುನಿವರ್ಸಿಟಿಯಲ್ಲಿ ಶಿಕ್ಷಣ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೋಮವನ್ನು ಅವರು ಪಡೆದಿದ್ದಾರೆ. ಯುಜಿಸಿ ನಿಯೋಜಿಸಿದ ಡೀಮ್ಡ್ ವಿಶ್ವವಿದ್ಯಾನಿಲಯಗಳ ನಿಯಂತ್ರಣ ನಿಯಮಗಳನ್ನು ರೂಪಿಸಿದ ಸಮಿತಿಯ ಸದಸ್ಯರೂ ಅವರಾಗಿದ್ದರು. ಪೆಥಾಲಜಿಯಲ್ಲಿ ಅವರು ಉನ್ನತ ಮಟ್ಟದ ಪಠ್ಯಪುಸ್ತಕಗಳನ್ನು ರಚಿಸಿದ್ದಾರೆ.

ಬ್ಯಾಂಕಿಂಗ್‌ ಕ್ಷೇತ್ರದ ಮುತ್ಸದ್ದಿ ಟಿ.ಜೆ.ಎ. ಗಾಣಿಗ

ಉಡುಪಿಯಲ್ಲಿ ಜನಿಸಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ರಾಷ್ಟ್ರೀಯ ನೆಲೆಯಲ್ಲಿ ಮಹಾಸಾಧನೆಗೈದವರು ಟಿ.ಜೆ.ಎ. ಗಾಣಿಗ. ಆಂಧ್ರ ಬ್ಯಾಂಕಿನ ಅಧ್ಯಕ್ಷ - ಆಡಳಿತ ನಿರ್ದೇಶಕ ಅಲ್ಲದೆ ಹೈದರಾಬಾದಿನ ಬ್ಯಾಂಕಿಂಗ್‌ ಸೇವಾಕ್ಷೇತ್ರದ ನೇಮಕಾತಿ ಮಂಡಳಿಯ ಅಧ್ಯಕ್ಷರಾಗಿದ್ದ ಅವರದು 4 ದಶಕಗಳಿಗೂ ಮಿಕ್ಕಿದ ಸೇವಾನುಭವ.

ಗಾಣಿಗರು 1938ರಲ್ಲಿ ಉಡುಪಿಯ ತೆಂಕನಿಡಿಯೂರಿನಲ್ಲಿ ಹುಟ್ಟಿ ಕೊಡವೂರು ಮಲ್ಪೆಗಳಲ್ಲಿ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಪಡೆದರು. ಉನ್ನತ ಶಿಕ್ಷಣದ ಹಂತದಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯದಿಂದ ವಾಣಿಜ್ಯ ಆಡಳಿತದಲ್ಲಿ ಸ್ನಾತಕೋತ್ತರ ಪದವಿ, ಭಾರತೀಯ ಬ್ಯಾಂಕಿಂಗ್‌ ಸಂಸ್ಥೆಯ ಸರ್ಟಿಫೈಡ್‌ ಅಸೊಸಿಯೇಟ್‌ ಆದರು.

ಉದ್ಯೋಗಿಯಾಗಿದ್ದುಕೊಂಡೇ ರಾತ್ರಿ ಕಾಲೇಜುಗಳಲ್ಲಿ, ಪೋಸ್ಟಲ್‌ ಟ್ಯೂಷನ್‌ ಮುಖಾಂತರ ಅಧ್ಯಯನ ಮಾಡಿ ಪದವಿ ಗಳಿಸಿದ ಹೆಗ್ಗಳಿಕೆ ಅವರದು. ತಮ್ಮ ಎಳೆ ಹರೆಯದಲ್ಲೇ ಡಾ| ಟಿ.ಎಂ.ಎ. ಪೈ ಅವರ ಸಂಪರ್ಕಕ್ಕೆ ಬಂದವರು ಅವರು. 1957ರಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಸೇರಿ ಎಚ್‌.ಡಿ.ಎಸ್‌. ಪೈ ಅವರ ಗರಡಿಯಲ್ಲಿ ಪಳಗಿದರು. 1965ರಲ್ಲಿ ಮುಂಬಯಿಗೆ, 1966ರಲ್ಲಿ ದಿಲ್ಲಿಗೆ ವರ್ಗಾವಣೆಗೊಂಡ ಅವರು ಪಿ.ಎಸ್‌.ವಿ. ಮಲ್ಯ ಅವರ ಹಿರಿತನದಲ್ಲಿ ಬ್ಯಾಂಕಿಂಗ್‌ ಕ್ಷೇತ್ರದ ವಿಸ್ತಾರವಾದ ಜಾnನ, ಕ್ಷೇತ್ರ ಪರಿಣತಿ ಗಳಿಸಿಕೊಂಡರು.

ದಿಲ್ಲಿಯಲ್ಲಿದ್ದಾಗ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹಲವಾರು ಅಸಾಧಾರಣ ಪ್ರಯೋಗಗಳನ್ನು ಮಾಡಿದರು. ದಿಲ್ಲಿ ಬ್ರಾಂಚ್‌ಗಳ ತತ್‌ಕ್ಷಣ ಪಾವತಿ ಕೌಂಟರ್‌, 12 ಗಂಟೆ ತೆರೆದಿರುವ ಕೌಂಟರ್‌, ಹಿರಿಯ ನಾಗರಿಕರ ಕೌಂಟರ್‌, ಸೇನಾನಿಗಳಿಗಾಗಿ ವಿಶೇಷ ತರದ ವ್ಯವಹಾರ ಸೌಲಭ್ಯಗಳನ್ನು ಒದಗಿಸಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದರು.

ತಮ್ಮ ದೂರದರ್ಶಿತ್ವ ಹಾಗೂ ಕಾರ್ಯ ಪಟುತ್ವದಿಂದಾಗಿ ಗಾಣಿಗರಿಗೆ ಹೆಚ್ಚು ಹೆಚ್ಚು ಜವಾಬ್ದಾರಿಯ ಸ್ಥಾನಗಳು ಪ್ರಾಪ್ತವಾದವು. ಸಿಂಡಿಕೇಟ್‌ ಬ್ಯಾಂಕಿನ ದಿಲ್ಲಿ ವಿಭಾಗದ ಪ್ರಾದೇಶಿಕ ಅಧಿಕಾರಿಯಾಗಿ 1978ರಲ್ಲಿ ಭಡ್ತಿ ಹೊಂದಿದರು. 1980ರಲ್ಲಿ ಅಸಿಸ್ಟೆಂಟ್‌ ಜನರಲ್‌ ಮೇನೇಜರ್‌, 1985ರಲ್ಲಿ ಜನರಲ್‌ ಮ್ಯಾನೇಜರ್‌ ಆದರು. 1987ರಲ್ಲಿ ಬ್ಯಾಂಕಿನ ಜನರಲ್‌ ಮೇನೇಜರ್‌ ಆಗಿ ಅಧಿಕಾರ ಸ್ವೀಕರಿಸಿದರು.

1995ರಲ್ಲಿ ಸರಕಾರವು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಅವರ ಸಾಧನೆ, ಅನುಭವಗಳನ್ನು ಗಮನಿಸಿ, ಆಂಧ್ರ ಬ್ಯಾಂಕಿನ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌, 1998ರಲ್ಲಿ ಅದರ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿ ನೇಮಿಸಿತು. ಬ್ಯಾಂಕಿನ ಹಣಕಾಸು ಸ್ಥಿತಿಯನ್ನು ಕ್ಷಿಪ್ರದಲ್ಲಿ ಅಭಿವೃದ್ಧಿ ಪಥದಲ್ಲಿ ತಂದುದು ಅವರ ಸಾಧನೆ.

ನಿವೃತ್ತಿಯ ಬಳಿಕ ಸರಕಾರವು ಅವರನ್ನು ಎರಡು ವರ್ಷದ ಅವಧಿಗೆ ಹೈದರಾಬಾದಿನ ಬ್ಯಾಂಕಿಂಗ್‌ ಸರ್ವಿಸಸ್‌ ರಿಕ್ರೂಟ್‌ಮೆಂಟ್‌ ಬೋರ್ಡಿನ ಅಧ್ಯಕ್ಷರನ್ನಾಗಿ ನೇಮಿಸಿತು.

ಹೆಂಚು ಉದ್ದಿಮೆಯ ನೇತಾರ ಸೊಲೊಮನ್‌ ಸಾಮ್ಯುಯೆಲ್‌ ಸೋನ್ಸ್‌

ಸೊಲೊಮನ್‌ ಸಾಮ್ಯುಯೆಲ್‌ ಸೋನ್ಸ್‌ 1933ರಲ್ಲಿ ಕುಂದಾಪುರದಲ್ಲಿ ಜನಿಸಿದರು. ಅವರ ತಂದೆ ಥಿಯೋಡೋರ್‌ ಸೋನ್ಸ್‌ ಕುಂದಾಪುರದ ಪ್ರಭಾಕರ ಹೆಂಚು ಕಾರ್ಖಾನೆಯ ಸ್ಥಾಪಕರಾಗಿದ್ದರು. ಕುಂದಾಪುರ, ಉಡುಪಿಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಅಧ್ಯಯನ ಮಾಡಿ 1956ರಲ್ಲಿ ಕುಂದಾಪುರದ ತಮ್ಮ ತಂದೆಯ ಉದ್ದಿಮೆಯನ್ನು ಸೇರಿ ತಮ್ಮ ದೂರದರ್ಶಿತ್ವ, ಕಾರ್ಯೋತ್ಸಾಹಗಳಿಂದ ಅಭಿವೃದ್ಧಿ ಪಡಿಸಿದರು. ಇದೀಗ ಹೆಂಚು ಉದ್ದಿಮೆಯ ನೇತಾರರಾಗಿದ್ದಾರೆ ಸೋನ್ಸ್‌ ಅವರು.

ಸೋನ್ಸ್‌ ಎಳೆವೆಯಲ್ಲಿ ಆಟೋಟಗಳಲ್ಲಿ ಆಸಕ್ತರು. 1952ರಲ್ಲಿ ತಮ್ಮ ಸ್ನೇಹಿತರೊಂದಿಗೆ ನ್ಪೋರ್ಟ್ಸ್ ಕ್ಲಬ್‌ ಒಂದನ್ನು ಸ್ಥಾಪಿಸಿದರು. ಈ ಸಂಸ್ಥೆ ಈಗ ಕ್ರೀಡಾ ಕ್ಷೇತ್ರದ ಮುಂಚೂಣಿಯಲ್ಲಿದೆ. ಅನೇಕ ಆಟೋಟಗಳ ಉತ್ಸವಗಳನ್ನು ಅವರು ನೆರವೇರಿಸಿದ್ದಾರೆ.

ಅವರ ತಂದೆ ಶಿಕ್ಷಣವೇ ಎಲ್ಲಕ್ಕೂ ತಾರಕಮಂತ್ರ ಎಂದು ನಂಬಿದವರಾಗಿದ್ದರು. ಎಲ್ಲ ಸ್ತರಗಳ ಶಿಕ್ಷಣ ಚಟುವಟಿಕೆಗಳಿಗೆ ಸೋಲೋಮನ್‌ ಸೋನ್ಸ್‌ ಉತ್ತೇಜನ ನೀಡಿದರು. ಅವರ ತಂದೆಯವರು ನಡೆಸುತ್ತಿದ್ದ ಕೋಡಿ ಗ್ರಾಮದ ಪ್ರಾಥಮಿಕ ಶಾಲೆಯನ್ನು ಹಯರ್‌ ಪ್ರ„ಮರಿ ಮಟ್ಟಕ್ಕೆ ಏರಿಸಿದರು.

1961ರಲ್ಲಿ ಡಾ| ಟಿ.ಎಂ.ಎ. ಪೈ ಅವರು ಕುಂದಾಪುರದಲ್ಲಿ ಪದವಿ ಕಾಲೇಜನ್ನು ಸ್ಥಾಪಿಸಲು ಮುಂದಾದಾಗ ಅವರಿಗೆ ಬೆಂಬಲವಾಗಿ ನಿಂತ 11 ಮಂದಿ ದಾನಿಗಳಲ್ಲಿ ಸೋನ್ಸ್‌ ಒಬ್ಬರು. ಭಂಡಾರ್‌ಕಾರ್ ಕಾಲೇಜಿನ ಸ್ಥಾಪಕ ಸದಸ್ಯರಲ್ಲಿ ಅವರೊಬ್ಬರು. ಈಗಲೂ ಅಲ್ಲಿನ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ. ಕುಂದಾಪುರದ ಬೋರ್ಡ್‌ ಹೈಸ್ಕೂಲಿನ ವಿವಿಧ ಸಮಿತಿಗಳಲ್ಲಿ ಪದಾಧಿಕಾರಿಗಳಾಗಿದ್ದಾರೆ. ಅವರು ಕುಂದಾಪುರ ಶೈಕ್ಷಣಿಕ ಸಮಿತಿಯ ಉಪಾಧ್ಯಕ್ಷರು. ಕುಂದಾಪುರದ ಖಾರ್ವಿ ಜನಾಂಗದ ಅಭಿವೃದ್ಧಿಗಾಗಿ ಸ್ಥಾಪಿತವಾದ ವಿದ್ಯಾನಿಧಿ ಯೋಜನೆಯ ನೇತೃತ್ವವನ್ನು ವಹಿಸಿಕೊಂಡಿದ್ದಾರೆ. ಈ ಯೋಜನೆಯನ್ನು ಡಾ| ವೀರೇಂದ್ರ ಹೆಗ್ಗಡೆಯವರೂ ಬೆಂಬಲಿಸಿದರು. ವಿದ್ಯಾನಿಧಿ ಯೋಜನೆಯನ್ನು ಅವರು ಕಳೆದ 25 ವರ್ಷಗಳಿಂದ ಅಧ್ಯಕ್ಷರಾಗಿ ಮುನ್ನಡೆಸುತ್ತಿದ್ದಾರೆ.

ತಮ್ಮ ಮಾವ ಎ.ಜಿ. ಸೋನ್ಸ್‌ ಅವರಿಂದ ಸ್ಫೂರ್ತಿ ಪಡೆದು ಅವರೂ ಕುಂದಾಪುರದಲ್ಲಿ ತೋಟಗಾರಿಕೆಯ ಉದ್ಯಮವನ್ನು ಸ್ಥಾಪಿಸಿದ್ದಾರೆ. ಕುಂದಾಪುರ ರೋಟರಿ ಕ್ಲಬ್‌ನಲ್ಲೂ ಅವರು ಸಕ್ರಿಯ ಸದಸ್ಯರು. ವೃದ್ಧಾಪ್ಯದಲ್ಲೂ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಕಾರ್ಯನಿರತರಾಗಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com