ಜೀವನದ ದರ್ಬಾರ್‌ ಮುಗಿಸಿದ ಒಡೆಯರ್‌

ಮೈಸೂರು: ಶ್ರೀಮತ್‌ ಸಮಸ್ತ ಭೂಮಂಡಲ ಮಂಡನಾಯಮಾನ, ನಿಖೀಲ ವೇಷಾವತಂಸ ಕರ್ನಾಟಕ ಜನಪದ ಸಂಪದಧೀಷ್ಠಾನ, ಶ್ರೀಮನ್‌ ಮಹೀಷೂರ ಮಹಾಸಂಸ್ಥಾನ ಮಧ್ಯೆ ದೇದೀಪ್ಯಮಾನ ನಿಖೀಲ ಕಲಾನಿಧಿ, ಕ್ಷಿತಿಪಾಲ, ರಾಜಾಧಿರಾಜ ಮಹಾರಾಜ ಚಕ್ರವರ್ತಿ ಮಂಡಲಾನುಭೂತ ಶ್ರೀಮದ್ರಾಜಾಧಿರಾಜ ರಾಜಪರಮೇಶ್ವರ, ದಿವ್ಯಸಿಂಹಾಸನಾರೂಢ ಶ್ರೀ ಶ್ರೀ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಭೂಮಿಪಾಲ ಪರಾಕು ಪರಾಕು ಬಹುಪರಾಕು...

ಇದು ಈ ಬಾರಿಯ ನವರಾತ್ರಿ ಉತ್ಸವದಲ್ಲಿ ನಡೆದ ಮೈಸೂರು ಸಂಸ್ಥಾನದ ಕೊನೆ ಅರಸ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ನಡೆಸಿದ ಖಾಸಗಿ ದರ್ಬಾರ್‌ನಲ್ಲಿ ಮೊಳಗಿದ ಬಹುಪರಾಕ್‌ ಸಾಲುಗಳು. ಹೌದು, ಜೀವನದ ದರ್ಬಾರ್‌ ಮುಗಿಸಿದ ಮೈಸೂರು ಸಂಸ್ಥಾನವನ್ನಾಳಿದ ಯದು ವಂಶಸ್ಥರ ಕೊನೆ ಕುಡಿ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಪಾಲಿಗೆ ಈ ಬಾರಿ ನವರಾತ್ರಿ ಉತ್ಸವವೇ ಕೊನೆ ಉತ್ಸವವಾಯಿತು.

ನವರಾತ್ರಿಯ ಒಂಭತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕೈಂಕರ್ಯ ನಡೆಸಿದ್ದ ಒಡೆಯರ್‌, ಅನಾದಿಕಾಲದಿಂದ ನಡೆದು ಬಂದಿರುವ ಖಾಸಗಿ ದರ್ಬಾರ್‌, ಸರಸ್ವತಿ ಪೂಜೆ, ಬನ್ನಿ ಪೂಜೆ ಸೇರಿ ವಿವಿಧ ಧಾರ್ಮಿಕ ಪೂಜಾಕಾರ್ಯ ನೆರವೇರಿಸಿರುವ ಮೂಲಕ ನಾಡಿನ ಒಳಿತಿಗಾಗಿ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವತೆ ಪ್ರಾರ್ಥಿಸಿದ್ದರು.

ಖಾಸಗಿ ದರ್ಬಾರ್‌: ನಾಡಹಬ್ಬ ದಸಾರ ಮಹೋತ್ಸವ ಆರಂಭ ದಿನದಿಂದ ನಡೆಯುವ ರಾಜವಂಶಸ್ಥರ ಖಾಸಗಿ ದರ್ಬಾರ್‌ ರಾಜರ ಗತವೈಭವ ನೆನಪಿಸಿತ್ತು. ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್‌ನಲ್ಲಿ ಪಾಲ್ಗೊಂಡ ಶ್ರೀಕಂಠದತ್ತ ಒಡೆಯರ್‌, ನವರಾತ್ರಿಯ ಒಂಭತ್ತು ದಿನಗಳೂ ವಿಕ್ರಮಾದಿತ್ಯನ ಕಾಲದ ರತ್ನಖಚಿತ ಸಿಂಹಾಸನದಲ್ಲಿ ಖಾಸಗಿ ದರ್ಬಾರ್‌ ನಡೆಸಿದ್ದರು.

ಬಹುಪರಾಕ್‌: ಒಡೆಯರ್‌ ಸಿಂಹಾಸನವನ್ನೇರಲು ಬರುವ ವೇಳೆ ಹೊಗಳು ಭಟ್ಟರು, ಶ್ರೀ ಮದ್ರಾಜಾಧಿರಾಜ ರಾಜಪರಮೇಶ್ವರ, ದಿವ್ಯಸಿಂಹಾಸನಾರೂಢ ಎಂಬಿತ್ಯಾದಿ ಬಹುಪರಾಕ್‌ಗಳನ್ನು ಹಿಂದಿ, ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಕೂಗುವ ಮೂಲಕ ರಾಜರ ಆಳ್ವಿಕೆ ನೆನಪು ಮಾಡುವಂತೆ ಮಾಡಿದ್ದರು.

ಬನ್ನಿ ಪೂಜೆ: ನವರಾತ್ರಿಯ ವಿಶೇಷ ಆಚರಣೆ ಬಳಿಕ ಹತ್ತನೇ ದಿನ ಮೈಸೂರು ಅರಸರು ವಿಜಯಯಾತ್ರೆ ನಡೆಸುತ್ತಾರೆ. ವಿಜಯದ ಸಂಕೇತವಾಗಿ ಆಚರಿಸಲ್ಪಡುವ ಈ ಆಚರಣೆ ಅಂಗವಾಗಿ ರಾಜವಂಶಸ್ಥರು ಶಮ್ಮಿ (ಬನ್ನಿ) ಪೂಜೆ ನಡೆಸುವುದು ಸಂಪ್ರದಾಯ. ಅರಮನೆ ಆವರಣದಲ್ಲಿ ನಡೆದ ವಜ್ರಮುಷ್ಟಿ ಕಾಳಗದಲ್ಲಿ ಜಟ್ಟಿ ತಲೆಯಿಂದ ರಕ್ತಹೊರ ಬರುತ್ತಿದ್ದಂತೆ ಹೊರಬಂದ ಒಡೆಯರ್‌ ಅರಮನೆ ಆವರಣದ ಶ್ರೀ ಭುವನೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ತೆರಳಿ ಅಲ್ಲಿರುವ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದರು.

ಕಾರಿನಲ್ಲಿ ತೆರಳಿದ ಒಡೆಯರ್‌: ಬನ್ನಿಪೂಜೆಗೆ ಎಂದಿನಂತೆ ಬೆಳ್ಳಿಪಲ್ಲಕ್ಕಿ ಮೂಲಕ ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಸ್ಥಾನಕ್ಕೆ ತೆರಳಬೇಕಿತ್ತು. ಆದರೆ, ಬೆಳ್ಳಿರಥದಲ್ಲಿ ತೆರಳದ ಒಡೆಯರ್‌ ತಮ್ಮ ಬಿಎಂಡಬ್ಲ್ಯು ಕಾರಿನಲ್ಲಿ ಅರಮನೆ ಅಂಬಾವಿಲಾಸ ಆವರಣದಿಂದ ಭುವನೇಶ್ವರಿ ದೇವಾಲಯಕ್ಕೆ ವಿಜಯಯಾತ್ರೆ ತೆರಳಿ ,ಬನ್ನಿಪೂಜೆ ಮಾಡಿದ್ದರು. ಒಡೆಯರ್‌ ಬೆಳ್ಳಿಪಲ್ಲಕ್ಕಿ ಬದಲಾಗಿ ಕಾರಿನಲ್ಲಿ ತೆರಳಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಒಡೆಯರ್‌ ಬನ್ನಿ ಮರ ಪೂಜಿಸಿದ್ದು, ಮುಖ್ಯವೇ ಹೊರತು ಅಲ್ಲಿಗೆ ನಡೆದು ಹೋದರೆ, ರಥದಲ್ಲಿ ಅಥವಾ ಕಾರಿನಲ್ಲಿ ಹೋದರೆ ಎಂಬುದು ಮುಖ್ಯವಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆ ಈ ಚರ್ಚೆ ಅಂತ್ಯವಾಗಿತ್ತು.

ರಥೋತ್ಸವದಲ್ಲಿ ಭಾಗಿ: ನಾಡಹಬ್ಬ ದಸರಾ ಮುಕ್ತಾಯಗೊಳ್ಳುತ್ತಿದ್ದಂತೆ ಶ್ರೀ ಚಾಮುಂಡಿಬೆಟ್ಟದಲ್ಲಿ ನಡೆದ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವದಲ್ಲಿ ದಂಪತಿ ಸಹಿತವಾಗಿ ಪಾಲ್ಗೊಂಡಿದ್ದ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್‌, ವಾಡಿಕೆಯಂತೆ ಅಮ್ಮನವರಿಗೆ ಮೊದಲು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಮುಂಡೇಶ್ವರಿ ರಥೋತ್ಸವಕ್ಕೆ ಚಾಲನೆ ನೀಡಿದ್ದರು.

ಯದುವಂಶ ಯುಗಾಂತ್ಯ

   ಮೈಸೂರು ಮಹಾಸಂಸ್ಥಾನದ ಕೊನೆಯ ಕೊಂಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಮಂಗಳವಾರ ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ನಿಧನರಾದರು. ತನ್ಮೂಲಕ 13ನೇ ಶತಮಾನದಲ್ಲಿ ಮೈಸೂರು ರಾಜ್ಯ ಸಂಸ್ಥಾಪಿಸಿದ ಯದುವಂಶವು ಯುಗಾಂತ್ಯ ಕಂಡಂತಾಗಿದೆ.

ಕೆಲ ದಿನಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು ಬೆಂಗಳೂರು ಅರಮನೆಯಲ್ಲಿದ್ದಾಗ ಮಂಗಳವಾರ ಮಧ್ಯಾಹ್ನ 1.42ರ ಸುಮಾರಿಗೆ ಮತ್ತೆ ತೀವ್ರ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ನಗರದ ವಿಕ್ರಂ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದರು. ಸತತ ಒಂದೂವರೆ ಗಂಟೆ ಅವರನ್ನು ತಪಾಸಣೆಗೊಳಪಡಿಸಿದ ನಂತರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ರಂಗನಾಥ್‌ ನಾಯಕ್‌ 3.30ಕ್ಕೆ 'ಶ್ರೀಕಂಠದತ್ತ ಒಡೆಯರ್‌ ಅವರ ಸಾವನ್ನು ಅಧಿಕೃತವಾಗಿ ಘೋಷಿಸಿದರು.

60 ವರ್ಷದ ಶ್ರೀಕಂಠದತ್ತ ಒಡೆಯರ್‌ ಅವರ ಶ್ವಾಸಕೋಶದಲ್ಲಿ ನೀರು ತುಂಬಿದ್ದರಿಂದ ನವೆಂಬರ್‌ ಮಾಸದಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಲಘು ಹೃದಯಾಘಾತವು ಇತ್ತೀಚೆಗೆ ಸಂಭವಿಸಿತ್ತು. ಸಕಾಲದಲ್ಲಿ ದೊರೆತ ಚಿಕಿತ್ಸೆಯಿಂದ ಗುಣಮುಖರಾಗಿದ್ದರು. ಈ ಸಂದರ್ಭದಲ್ಲಿ ಅಂದರೆ ನವೆಂಬರ್‌ 19ರಂದು ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಸತತ ಹತ್ತು ದಿನಗಳು ಚಿಕಿತ್ಸೆ ಪಡೆದು, ನವೆಂಬರ್‌ 28ರಂದು ಮನೆಗೆ ಹಿಂತಿರುಗಿದ್ದರು. ಆದರೆ, ಈ ಬಾರಿ 'ಮೈಸೂರು ಮಹಾರಾಜ'ನಿಗೆ ಸಾವು ಗೆಲ್ಲಲು ಆಗಲಿಲ್ಲ.

ಒಡೆಯರ್‌ ಪತ್ನಿ ಪ್ರಮೋದಾದೇವಿ ಬರುವವರೆಗೆ ಪಾರ್ಥಿವ ಶರೀರವನ್ನು ವಿಕ್ರಂ ಆಸ್ಪತ್ರೆಯಲ್ಲಿನ ತುರ್ತು ನಿಗಾ ಘಟಕದಲ್ಲಿಡಲಾಗಿತ್ತು. ಒಡೆಯರ್‌ ಅವರ ಸಹೋದರಿಯರಿಗೆ ಮಾತ್ರ ಪಾರ್ಥಿವ ಶರೀರದ ಬಳಿ ಬಿಡಲಾಗಿತ್ತು. ನಂತರ ಸಾವಿನ ಸುದ್ದಿ ಹಬ್ಬುತ್ತಿದ್ದಂತೆ ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ, ಎಚ್‌.ಡಿ. ಕುಮಾರಸ್ವಾಮಿ, ಜಗದೀಶ್‌ ಶೆಟ್ಟರ್‌, ಸಚಿವರಾದ ಕೆ.ಜೆ. ಜಾರ್ಜ್‌, ಯು.ಟಿ. ಖಾದರ್‌, ಪ್ರಕಾಶ್‌ ಹುಕ್ಕೇರಿ, ಶಾಸಕ ರೋಷನ್‌ಬೇಗ್‌, ಮಾಜಿ ಸಚಿವರಾದ ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಕೆಎಸ್‌ಸಿಎ ಕಾರ್ಯದರ್ಶಿ ಬ್ರಿಜೇಶ್‌ ಪಟೇಲ್‌, ಮಾಜಿ ಅಧ್ಯಕ್ಷ ಅನಿಲ್‌ ಕುಂಬ್ಳೆ ಮತ್ತಿತರ ಗಣ್ಯರು ಆಸ್ಪತ್ರೆಗೆ ಧಾವಿಸಿ, ಅಂತಿಮ ದರ್ಶನ ಪಡೆದರು. ಸಂಜೆ 5ಕ್ಕೆ ಒಡೆಯರ್‌ ಪತ್ನಿ ಆಸ್ಪತ್ರೆಗೆ ಧಾವಿಸಿ, ಪತಿಯ ದರ್ಶನವಾಗುತ್ತಿದ್ದಂತೆ ಆಕ್ರಂದನ ಮುಗಿಲುಮುಟ್ಟಿತು.

ನಂತರ ಪಾರ್ಥಿವ ಶರೀರವನ್ನು ಬೆಂಗಳೂರಿನ ಅರಮನೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ತಡರಾತ್ರಿವರೆಗೂ ಅನೇಕ ಗಣ್ಯರು, ಸಾರ್ವಜನಿಕರು ಅಂತಿಮ ದರ್ಶನ ಪಡೆದು, ಕಂಬನಿ ಮಿಡಿದರು. ಬುಧವಾರ ಬೆಳಿಗ್ಗೆ ಮೈಸೂರು ಅರಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದು, ನಂತರ ಸಂಜೆ ಮೈಸೂರಿನ ಊಟಿ ರಸ್ತೆಯಲ್ಲಿರುವ 'ಮನುವನ'ದಲ್ಲಿ ರಾಜವಂಶಸ್ಥನ ಅಂತ್ಯಕ್ರಿಯೆ ನಡೆಯಲಿದೆ ಎಂದು ಅರಮನೆ ಮೂಲಗಳು ತಿಳಿಸಿವೆ.

ಯದುವಂಶದ ಯುಗಾಂತ್ಯ?

13ನೇ ಶತಮಾನದಲ್ಲಿ ಯದುರಾಯರಿಂದ ಸಂಸ್ಥಾಪಿತವಾದ ಮೈಸೂರು ರಾಜವಂಶಕ್ಕೆ ಶ್ರೀಕಂಠದತ್ತರಿಗೆ 1974ರಲ್ಲಿ ಮೈಸೂರು ಮಹಾರಾಜರಾಗಿ ಪಟ್ಟಾಭಿಷೇಕ ಮಾಡಲಾಗಿತ್ತು. ಆದರೆ, ಶ್ರೀಕಂಠದತ್ತರಿಗೆ ಸಂತಾನವಿರಲಿಲ್ಲ. ಅಲ್ಲದೆ, ಅವರು ದತ್ತಕ ಪುತ್ರನನ್ನು ಪಡೆದಿರಲಿಲ್ಲ. ಹೀಗಾಗಿ ಯದುವಂಶಕ್ಕೆ ಉತ್ತರಾಧಿಕಾರಿ ಇಲ್ಲದಂತಾಗಿದೆ.

1953ರ ಫೆಬ್ರುವರಿ 20ರಂದು ಜನಿಸಿದ ಶ್ರೀಕಂಠದತ್ತರಿಗೆ ಒಡೆಯರ್‌ ಬಾಲ್ಯ ಹಾಗೂ ಯೌವನದ ದಿನಗಳನ್ನು ಮೈಸೂರಿನಲ್ಲೇ ಕಳೆದರು. ಮೈಸೂರು ವಿ.ವಿ.ಯಲ್ಲಿ ರಾಜ್ಯಶಾಸ್ತ್ರ ಎಂಎ ಸ್ನಾತಕೋತ್ತರದಲ್ಲಿ ಚಿನ್ನದ ಪದಕ ಗಳಿಸಿದ್ದರು. ಕಲೆ, ಸಾಹಿತ್ಯದಲ್ಲಿ ಅಪಾರ ಜ್ಞಾನ ಸಂಪಾದಿಸಿದ್ದ ಅವರು, ಪಾಶ್ಚಿಮಾತ್ಯ ಸಂಗೀತದಲ್ಲಿ ಪದವಿ ಪಡೆದಿದ್ದರು. ನಾಲ್ಕು ಬಾರಿ ಸಂಸದರಾಗಿದ್ದರು. ರಾಜವಶಂಸ್ಥರಿಗೆ ಇರುವಂತೆಯೇ ಅಪ್ಪಟ ವಿಲಾಸಿ ಜೀವನ, ವರ್ಣರಂಜಿತ ವ್ಯಕ್ತಿತ್ವ ಒಡೆಯರದ್ದಾಗಿತ್ತು. ಇದಕ್ಕೆ ಪೂರಕವೆಂಬಂತೆ ಪ್ರತಿ ವರ್ಷ ತಮ್ಮ ಜನ್ಮದಿನದ ಅಂಗವಾಗಿ ಫ್ಯಾಷನ್‌ ಶೋ, ಸಂಗೀತ ಕೇಳುವುದರಲ್ಲಿ ಕಳೆಯುತ್ತಿದ್ದರು. ಹೊಟೇಲ್‌ ಉದ್ಯಮವನ್ನು ನಡೆಸುತ್ತಿದ್ದ ಅವರು ಊಟಿಯಲ್ಲಿ ಪರ್ಮಿಲ್‌ ಇಂಪಿರಿಯಲ್‌ ಮತ್ತು ಮೈಸೂರಿನಲ್ಲಿ ರಾಜೇಂದ್ರ ವಿಲಾಸ (ಈಗ ಬಂದ್‌ ಆಗಿದೆ) ಎಂಬ ಐಷಾರಾಮಿ ಹೋಟೆಲ್‌ ಮಾಲಿಕರಾಗಿದ್ದರು. ಕ್ರಿಕೆಟ್‌ ಪ್ರಿಯರಾಗಿದ್ದ ಅವರು, ಈಚೆಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

'ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ್‌ ಒಡೆಯರ್‌ ಅವರು ನಿಧನರಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ಬುಧವಾರ (ಡಿ. 11) ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಅಲ್ಲದೇ, ಎರಡು ದಿನ ಶೋಕಾಚರಣೆ ಆಚರಿಸಲಾಗುವುದು' ಎಂದು ಗೃಹ ಸಚಿವ ಕೆ.ಜೆ. ಜಾರ್ಜ್‌ ಪ್ರಕಟಿಸಿದ್ದಾರೆ.

ಸಂತಾನಭಾಗ್ಯ ಇಲ್ಲ

ಶ್ರೀಕಂಠದತ್ತ ನರಸಿಂಹರಾಜ್‌ ಒಡೆಯರ್‌ ಅವರಿಗೆ ಸಂತಾನಭಾಗ್ಯ ಇರಲಿಲ್ಲ. ಇದರಿಂದಾಗಿ ಯದುವಂಶಕ್ಕೆ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆ ಈಗ ಕಾಡತೊಡಗಿದೆ.

'ತಲಕಾಡು ಮರುಳಾಗಲಿ, ಮಾಲಂಗಿ ಮಡುವಾಗಲಿ, ಮೈಸೂರು ದೊರೆಗೆ ಮಕ್ಕಳಾಗದಿರಲಿ' ಎಂಬ ಅಲಮೇಲಮ್ಮನ ಶಾಪದ ಐತಿಹ್ಯವಿತ್ತು. ಕಾಕತಾಳೀಯವೆಂಬಂತೆ ಶ್ರೀಕಂಠದತ್ತರಿಗೂ ಸಂತಾನ ಪ್ರಾಪ್ತಿಯಾಗಲಿಲ್ಲ. ಶಾಪ ವಿಮೋಚನೆಗಾಗಿ ಪೂಜೆಗಳನ್ನು ಮಾಡಿದರೂ ಪ್ರಯೋಜನವಾಗಲಿಲ್ಲ. ಈಗ ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಎದ್ದಿದೆ.

ಬಹುಮುಖೀ ವ್ಯಕ್ತಿತ್ವದ ಒಡೆಯರು

ಮೈಸೂರು ಸಂಸ್ಥಾನವನ್ನಾಳಿದ ಯದು ವಂಶಸ್ಥರ ಕೊನೆ ಕುಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಹುಟ್ಟಿದ್ದು 1953ರ ಫೆಬ್ರವರಿ 20ರಂದು. ಜಯಚಾಮರಾಜ ಒಡೆಯರ್‌ ಹಾಗೂ ತ್ರಿಪುರ ಸುಂದರಮ್ಮಣ್ಣಿ ಅವರ ಏಕೈಕ ಪುತ್ರ ಇವರು. 1976ರಲ್ಲಿ ಬೆಟ್ಟದ ಕೋಟೆ ಅರಸು ಮನೆತನದ ಗೋಪಾಲರಾಜೇ ಅರಸ್‌ ಪುತ್ರಿ ರಾಣಿ ಪ್ರಮೋದಾ ದೇವಿ, ಒಡೆಯರ್‌ ಅವರನ್ನು ವಿವಾಹವಾಗಿದ್ದರು.

ತಮ್ಮ ವಂಶಸ್ಥರೇ ಕಟ್ಟಿಸಿದ್ದ ಮೈಸೂರು ಮಹಾರಾಜ ಕಾಲೇಜಿನಲ್ಲಿ 1974ರಲ್ಲಿ ರಾಜಕೀಯ ಶಾಸ್ತ್ರ ಅಧ್ಯಯನ ಮಾಡಿದ್ದ ಶ್ರೀಕಂಠ ದತ್ತ ಒಡೆಯರ್‌, ಎಂ.ಎ.ಪದವಿ ಪೂರ್ಣಗೊಳಿಸಿ, ಶಾರದಾ ವಿಲಾಸ ಕಾಲೇಜಿನಲ್ಲಿ ಎಲ್‌ಎಲ್‌ಬಿ ಕಾನೂನು ಪದವಿ ಪಡೆದಿದ್ದರು.

ಲಂಡನ್‌ನಲ್ಲಿ ಶಿಕ್ಷಣ: ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಒಡೆಯರ್‌ ಸಂಗೀತಾಸಕ್ತರೂ ಆಗಿದ್ದರು. ಲಂಡನ್‌ ಟ್ರಿನಿಟಿ ಕಾಲೇಜ್‌ ಆಫ್ ಮ್ಯೂಸಿಕ್‌ನಲ್ಲಿ ವಿದ್ಯಾಭ್ಯಾಸ ಮಾಡಿ ಪಿಯಾನೋ ಪೋರ್ಟ್‌ ಪರೀಕ್ಷೆಯಲ್ಲಿ ಇಂಟರ್‌ಮೀಡಿಯಟ್‌ ಪದವಿ ಪಡೆದಿದ್ದರು.

ರಾಜಕೀಯ ಜೀವನದಲ್ಲಿ ತೊಡಗಿಸಿಕೊಂಡಿದ್ದ ಇವರು ಸಾಹಿತ್ಯ, ಕಲೆ, ಕ್ರೀಡೆ ಹಾಗೂ ವೈಜ್ಞಾನಿಕ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಉಳ್ಳವರಾಗಿದ್ದರು. ಬಿಡುವಿನ ವೇಳೆ ವಿದೇಶ ಪ್ರಯಾಣ, ಓದು ಹಾಗೂ ಹಳೆ ವಾಚು, ಶಿಲ್ಪಕಲಾಕೃತಿಗಳ ಸಂಗ್ರಹ ಇವರ ಹವ್ಯಾಸವಾಗಿತ್ತು. ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹಿಸಿದ್ದ ಇವರು, ಮೈಸೂರು ಸೇರಿದಂತೆ ನಾನಾ ಕಡೆ ಶಿಕ್ಷಣ ಸಂಸ್ಥೆ ತೆರೆದು ಬಡ ಮಕ್ಕಳಿಗೆ ಶಿಕ್ಷಣ ದಾಸೋಹ ನಡೆಸಿದ್ದರು.

ಸಾಮಾಜಿಕ ಸೇವೆ: ಶ್ರೀ ಜಯಚಾಮರಾಜೇಂದ್ರ ಆರ್ಟ್‌ ಗ್ಯಾಲರಿ, ಮಹಾರಾಣಿ ಲಕ್ಷ್ಮಮ್ಮ ಎಜುಕೇಷನಲ್‌ ಟ್ರಸ್ಟ್‌, ಯುವರಾಣಿ ಕೆಂಪಚೆಲುವಮ್ಮಣ್ಣಿ ಎಜುಕೇಷನಲ್‌ ಟ್ರಸ್ಟ್‌, ಗುಣಮಿತ್ರ ಮೆಟರ್‌ನಿಟಿ ಆ್ಯಂಡ್‌ ಚೈಲ್ಡ್‌ ವೆಲ್‌ಫೇರ್‌ ಸೆಂಟರ್‌, ಶ್ರೀ ಜಯಚಾಮರಾಜೇಂದ್ರ ಎಜುಕೇಷನಲ್‌ ಟ್ರಸ್ಟ್‌ನ ಅಧ್ಯಕ್ಷರಾಗಿ ಸಾಕಷ್ಟು ವರ್ಷ ಕಾಲ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದರು. ಸ್ವತಃ ಮೈಸೂರು ವಿವಿಯಲ್ಲಿ ಕೆಲ ಕಾಲ ರಾಜ್ಯಶಾಸ್ತ್ರ ವಿಷಯ ಬೋಧಿಸಿದ್ದರು.

ಕ್ರಿಕೆಟ್‌ ರೇಸಿಂಗ್‌ ಸಂಸ್ಥೆ ಸದಸ್ಯರಾಗಿ, ಮೈಸೂರು ನ್ಪೋರ್ಟ್ಸ್ ಕ್ಲಬ್‌, ಬೆಂಗಳೂರು ಗಾಲ್ಫ್ ಕ್ಲಬ್‌, ಮೈಸೂರು ರೇಸ್‌ ಕ್ಲಬ್‌, ಬೆಂಗಳೂರು ಟರ್ಪ್‌ ಕ್ಲಬ್‌, ದೆಹಲಿ ರೇಸ್‌ ಕ್ಲಬ್‌, ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಹಾಗೂ ಕ್ಲಬ್‌ ಹೌಸ್‌ನಲ್ಲಿ ಸದಸ್ಯರಾಗಿದ್ದರು. ಇತ್ತೀಚೆಗೆ ಕೆಎಸ್‌ಸಿಎ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಡೆಯರ್‌ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಮದ್ರಾಸ್‌ ವಿ.ವಿ. ಪರ ಕ್ರಿಕೆಟ್‌ ಆಡಿದ್ದರು

ಒಡೆಯರ್‌ ಒಬ್ಬ ಕ್ರಿಕೆಟ್‌ ಆಟಗಾರ. ಅಪ್ಪಟ ಕ್ರೀಡಾ ಪ್ರೇಮಿ. ಆಗಿನ ಕಾಲಕ್ಕೆ ಮದ್ರಾಸ್‌ ಯೂನಿವರ್ಸಿಟಿ ಕ್ರಿಕೆಟ್‌ ಟೀಂಗೆ ಆಯ್ಕೆ ಆಗಿದ್ದರೆಂದು ಅವರೊಂದಿಗೆ ಟೀಂಗೆ ಆಯ್ಕೆಯಾಗಿದ್ದ ಪತ್ರಕರ್ತ ಕೆ.ಜೆ.ಕುಮಾರ್‌ ಸ್ಮರಿಸಿದ್ದಾರೆ. ಮಹಾರಾಜ ಕಾಲೇಜಿನಲ್ಲಿ ತಾವು ಅವರು ಜತೆಯಾಗಿಯಾಗಿ ಓದುತ್ತಿದ್ದೆವು. ಅಂದಿನ ಕಾಲಕ್ಕೆ ಅವರಿಗೆ ಅರಮನೆಯಿಂದ ಪ್ರತ್ಯೇಕ ಕುರ್ಚಿ, ಊಟ ಬರುತ್ತಿತ್ತು. ಕ್ಯಾಂಟೀನ್‌ಗೂ ಬರುತ್ತಿದ್ದರು. ಮನೆಯಿಂದ ಪ್ರತ್ಯೇಕ ಕುರ್ಚಿ ಬರುವುದನ್ನು ನಾನು ಪ್ರಶ್ನಿಸಿ, ಏನು ಒಡೆಯರ್‌ ಅವರೇ ಇದು ಬೇಕೆ ಎಂದು ಕೇಳಿದ್ದೆ, ಆಗ ತಮ್ಮೊಂದಿಗೆ ಖ್ಯಾತ ಕತೆಗಾರ ದಿ.ಆಲನಹಳ್ಳಿ ಕೃಷ್ಣ ಕೂಡ ಇದ್ದರು. ಒಡೆಯರ್‌ ಏನನ್ನೂ ಹೇಳಲಿಲ್ಲ. ಆದರೆ, ಮಾರನೇ ದಿನದಿಂದ ಕುರ್ಚಿ ಬರುವುದು ನಿಂತಿತ್ತು.

ಜಯಚಾಮರಾಜರ ಪುತ್ರ

ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಮೈಸೂರಿನ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ ಪುತ್ರ. ಇವರಿಗೆ ಐವರು ಅಕ್ಕ-ತಂಗಿಯರು.

ತಮ್ಮ 18ನೆಯ ವಯಸ್ಸಿಗೆ 1938 ರಲ್ಲಿ ಸತ್ಯಪ್ರೇಮ ಕುಮಾರಿ ದೇವಿ ಯವರನ್ನು ಜಯಚಾಮರಾಜ ಒಡೆಯರ್‌ ವಿವಾಹವಾಗಿದ್ದರು. ಅನಂತರ 21ನೇ ವಯಸ್ಸಿಗೆ ತ್ರಿಪುರ ಸುಂದರಮ್ಮಣ್ಣಿಯವ ರೊಡನೆ ಎರಡನೇ ವಿವಾಹವಾದರು. ದ್ವಿಪತ್ನಿಯರನ್ನು ಹೊಂದಿದ್ದ ಅವರು ಐವರು ಪುತ್ರಿಯರು ಹಾಗೂ ಒಬ್ಬ ಪುತ್ರ ಸೇರಿದಂತೆ ಆರು ಮಕ್ಕಳನ್ನು ಪಡೆದಿದ್ದರು. ಅವರು- ಗಾಯತ್ರಿದೇವಿ, ಮೀನಾಕ್ಷಿದೇವಿ, ಕಾಮಾಕ್ಷಿದೇವಿ, ವಿಶಾಲಾಕ್ಷಿದೇವಿ, ಇಂದ್ರಾಕ್ಷಿದೇವಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರು.

-ಉದಯವಾಣಿ ಮೈಸೂರು, ಬೆಂಗಳೂರು

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com