ಕೊರಗ ಸಮುದಾಯವನ್ನು ಮುಖ್ಯವಾಹಿನಿಗೆ ತನ್ನಿ:ಸಂಸದ ಹೆಗ್ಡೆ

ಬ್ರಹ್ಮಾವರ: ಕೊರಗ ಸಮುದಾಯದಂತಹ ಹಿಂದುಳಿದ ಸಮಾಜದ ಜನತೆಯಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ, ಅವರಲ್ಲಿರುವ ದುಶ್ಚಟಗಳನ್ನು ದೂರ ಮಾಡಿ, ಸಮಾಜದಲ್ಲಿ ಅವಕಾಶಗಳನ್ನು ಒದಗಿಸಿ ಮುಖ್ಯವಾಹಿನಿಗೆ ತರಲು ಎನ್‌.ಎಸ್‌.ಎಸ್‌ ಶಿಬಿರಾರ್ಥಿಗಳು ಪ್ರಯತ್ನಿಸಬೇಕು’ ಎಂದು ಸಂಸದ ಜಯಪ್ರಕಾಶ್‌ ಹೆಗ್ಡೆ ಹೇಳಿದರು.

ಕುಂಭಾಶಿ ಆನೆಗುಡ್ಡೆ ವಿನಾಯಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಅವರು ಕೋಟ ಪಡುಕೆರೆ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆಯ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ  ಮಾತನಾಡಿದರು.

ಶಿಕ್ಷಣ ಕೇವಲ ಅಕ್ಷರಾಭ್ಯಾಸವಲ್ಲ. ಕಲೆ, ಕ್ರೀಡೆ ಎಲ್ಲವೂ ಶಿಕ್ಷಣವೇ ಆಗಿದೆ. ಇವೆಲ್ಲದ್ದಕ್ಕೂ ಪ್ರೋತ್ಸಾಹ ಅಗತ್ಯ. ಪತ್ರಿಕೆಗಳು, ದೃಶ್ಯ ಮಾಧ್ಯಮ ನೀಡುವ ಅನೇಕ ಉತ್ತಮ ಸಂದೇಶ, ಹಿರಿಯರ ಮಾರ್ಗದರ್ಶನ, ಹಿರಿಯ ವ್ಯಕ್ತಿಗಳ ಸಂದೇಶ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜಕಟ್ಟುವ ಕೆಲಸ ಯುವ ಜನತೆಯಿಂದ ಆಗಬೇಕಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ವಸಂತರಾಜ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ರಾಜೇಂದ್ರ ಕುಮಾರ್‌ ನಾಯಕ್‌, ಕೋಟದ ಉದ್ಯಮಿ ಆನಂದ್‌ ಸಿ ಕುಂದರ್‌, ಕುಂಭಾಷಿಯ ಕೊರ್ಗಿ ವಿಠಲ ಶೆಟ್ಟಿ, ಐ.ಟಿ.ಡಿ.ಪಿಯ ಯೋಜನಾ ಸಮನ್ವಯಾಧಿಕಾರಿ ಡಾ.ಉದಯ ಶೆಟ್ಟಿ, ಕುಂಭಾಶಿ ಗ್ರಾ.ಪಂ ಅಧ್ಯಕ್ಷ ಗೋವಿಂದ ಪುತ್ರನ್‌, ಶಾಲೆಯ ಮುಖ್ಯ ಶಿಕ್ಷಕಿ ಭಾರತಿ, ಎಸ್‌.ಡಿ.ಎಂ.ಸಿಯ ಅಣ್ಣಯ್ಯ ಪುತ್ರನ್‌, ಶಿಬಿರದ ಯೋಜನಾಧಿಕಾರಿಗಳಾದ ಮಂಜುನಾಥ ಆಚಾರಿ, ಘಟಕದ ನಾಯಕರಾದ ಶ್ರವಣ ಡಿ ನಾಯಕ್‌, ವಿವೇಕ್‌, ಸುಮಾ, ಸಹನಾ ಮತ್ತಿತರರು ಉಪಸ್ಥಿತರಿದ್ದರು. ಶಿಬಿರದ ಪರವಾಗಿ ಯೋಜನಾ­ಧಿಕಾರಿ ರವಿಪ್ರಸಾದ್‌ ಕೆ.ಜಿ, ಶಿಬಿರಾರ್ಥಿಗಳಾದ ಮಂಜುಳಾ, ಶೈಲಜಾ ಮತ್ತು ಪ್ರಸಾದ್‌ ತಮ್ಮ ಅನುಭವ ಹಂಚಿಕೊಂಡರು.

ವಿದ್ಯಾರ್ಥಿ ವಿವೇಕ್‌ ಸ್ವಾಗತಿಸಿದರು. ಸಹನಾ ವಂದಿಸಿದರು. ಸುಮಾ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com