ಗ್ರಾಮಾಭಿವೃದ್ಧಿಯಲ್ಲಿ ಕುಂದಾಪುರ ವಲಯ ಮುಂಚೂಣಿ: ಡಾ. ಹೆಗ್ಗಡೆ

ಕುಂದಾಪುರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯದ 22 ಜಿಲ್ಲೆಗಳಲ್ಲಿ ವಿಸ್ತರಣೆಗೊಂಡಿದ್ದರೂ ಕುಂದಾಪುರ ವಲಯ ಮುಂಚೂಣಿಯಲ್ಲಿದೆ. ದೇಶದಲ್ಲಿಯೇ ಜೀವನ ಮಧುರ ಪಾಲಿಸಿಯ ಅತಿ ಹೆಚ್ಚು ಪ್ರಯೋಜನ ಪಡೆದುಕೊಂಡಿರುವುದು ಕುಂದಾಪುರ ವಲಯ. ಅದಕ್ಕೆ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯತತ್ಪರತೆ ಕಾರಣ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. 

ಆನಗಳ್ಳಿ ಚನ್ನಕೇಶವ ದೇವಸ್ಥಾನದ ವಠಾರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ, ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಆನಗಳ್ಳಿ, ನವಜೀವನ ಸಮಿತಿ ವಂಡ್ಸೆ ವಲಯದ ಆಶ್ರಯದಲ್ಲಿ ಜರುಗಿದ ಸಾಮೂಹಿಕ ಸತ್ಯನಾರಾಯಣ ಪೂಜೆ, ಹಟ್ಟಿಕುದ್ರು, ಹೇರಿಕುದ್ರು ಮತ್ತು ಆನಗಳ್ಳಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಸಮಾರಂಭ ಹಾಗೂ ಶ್ರೀರಾಮ ಭಜನಾ ಸಪ್ತಾಹ ಮಂಗಲೋತ್ಸವ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ದೇವರು ಕೊಟ್ಟ ಅವಕಾಶ ಸದುಪಯೋಗಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮಲು ಶಿಕ್ಷಣ, ಆರ್ಥಿಕತೆ ಅವಶ್ಯ. ಗ್ರಾಮಾಭಿವೃದ್ಧಿ ಯೋಜನೆ ಜಾರಿಯಾದ ಬಳಿಕ ಈ ಭಾಗದಲ್ಲಿ ಸಾಕಷ್ಟು ಪರಿವರ್ತನೆಯಾಗಿದೆ. ಸರಕಾರಿ ಯೋಜನೆಗಳ ಅರಿವು ಜನರಲ್ಲಾಗಿದೆ. ಮಹಿಳೆಯರು ವ್ಯವಹಾರಿಕ ಜ್ಞಾನ ಸಂಪಾದಿಸಿದ್ದಾರೆ. ಒಟ್ಟಾರೆ ಕೌಟುಂಬಿಕ ವ್ಯವಸ್ಥೆ ಸುಧಾರಿಸಿರುವುದು ಕಂಡುಬಂದಿದೆ. ಕೌಟುಂಬಿಕ ವ್ಯವಸ್ಥೆಯ ಸುಧಾರಣೆಯೇ ದೇಶದ ಸುಧಾರಣೆ. ಆನಗಳ್ಳಿ ಸ್ವಸಹಾಯ ಸಂಘಗಳು 'ಎ' ಗ್ರೇಡ್‌ನಲ್ಲಿ ಸಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು. 

ಈ ಸಂದರ್ಭ ಅವರು ಹೇರಿಕುದ್ರು, ಹಟ್ಟಿಕುದ್ರು ಮತ್ತು ಆನಗಳ್ಳಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಿದರು.ಬಸ್ರೂರು ಸಂತ ಫಿಲಿಪ್ ನೆರಿ ಇಗರ್ಜಿ ಧರ್ಮಗುರು ವಂ. ವಿಶಾಲ್ ಲೋಬೊ ಆಶೀರ್ವಚನ ನೀಡಿ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಮನುಷ್ಯ ತನ್ನ ಇತಿಮಿತಿಯೊಳಗೆ ಉತ್ತಮ ಬದುಕು ನಡೆಸುವಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಆಧಾರಸ್ತಂಭವಾಗಿದೆ. ಜನರ ಅಭ್ಯುದಯವೇ ರಾಷ್ಟ್ರದ ಅಭ್ಯುದಯ ಎಂದು ತೋರಿಸಿಕೊಟ್ಟಿದೆ ಎಂದರು. 

ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ, ಆನಗಳ್ಳಿ ಗ್ರಾಪಂ ಅಧ್ಯಕ್ಷ ಸುರೇಶ್ ಆರ್. ನಾಯ್ಕ, ಜಿಪಂ ಸದಸ್ಯ ಪ್ರಕಾಶ್ ಟಿ. ಮೆಂಡನ್, ತಾಪಂ ಸದಸ್ಯ ಭಾಸ್ಕರ ಬಿಲ್ಲವ, ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಮಹಾವೀರ ಆಜ್ರಿ, ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷ ಸತೀಶ್ ಹೆಗ್ಡೆ ಉಪಸ್ಥಿತರಿದ್ದರು. 

ವೇಮೂ ಆನಗಳ್ಳಿ ಚೆನ್ನಕೇಶವ ಭಟ್ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ದಿನೇಶ್ ವರದಿ ಮಂಡಿಸಿದರು. ಮಹಾಬಲ ಹೇರಿಕುದ್ರು ಮತ್ತು ರಮೇಶ್ ನೇರಳಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಸೀತಾರಾಮ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com