ಆಮ್ ಆದ್ಮಿ ಲಂಚವಿರೋಧಿ ಸಹಾಯವಾಣಿಗೆ 4000 ದೂರು

ನವದೆಹಲಿ: ಭ್ರಷ್ಟಾಚಾರ ಮುಕ್ತ ಆಡಳಿತ ವ್ಯವಸ್ಥೆ ತರಬೇಕೆಂಬ ನೆಲೆಗಟ್ಟಿನಲ್ಲೇ ಹೋರಾಟ ನಡೆಸಿ ದೆಹಲಿಯಲ್ಲಿ ಅಧಿಕಾರಕ್ಕೇರಿರುವ ಆಮ್ ಆದ್ಮಿ ಪಕ್ಷ ಬುಧವಾರ ಜಾರಿಗೆ ತಂದ ಲಂಚ ವಿರೋಧಿ ಸಹಾಯವಾಣಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕೇವಲ ಏಳು ಗಂಟೆ ಅವಧಿಯಲ್ಲಿ ನಾಲ್ಕು ಸಾವಿರ ಮಂದಿ ಕರೆ ಮಾಡಿ ಮಾಹಿತಿ (ದೂರು) ನೀಡಿದ್ದಾರೆ.
ಭ್ರಷ್ಟಾಚಾರ ಮುಕ್ತ ಆಡಳಿತ ವ್ಯವಸ್ಥೆಯ ಅನುಷ್ಟಾನಕ್ಕೆ ಪಣತೊಟ್ಟಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತಮ್ಮ ಪಕ್ಷ ನೀಡಿದ ಭರವಸೆಯಂತೆಯೇ ಬುಧವಾರ ಲಂಚವಿರೋಧಿ ಸಹಾಯವಾಣಿ ಸಂಖ್ಯೆ (011) 27357169 ನ್ನು ಘೋಷಿಸಿದ್ದರು.
ಹಲವಾರು ಜನ ಒಂದೇ ಸಮಯದಲ್ಲಿ ಕರೆ ಮಾಡಿದ ಸಂದರ್ಭದಲ್ಲಿ ಎದುರಾಗುವ ತಾಂತ್ರಿಕ ತೊಡಕಿನ ಹೊರತಾಗಿಯೂ 4000 ಕ್ಕೂ ಮೇಲ್ಪಟ್ಟ ದೂರುಗಳನ್ನು ಯಶಸ್ವಿಯಾಗಿ ಆಲಿಸಿ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗಿದೆ.
ಭ್ರಷ್ಟಾಚಾರ ಮುಕ್ತ ಆಡಳಿತ ವ್ಯವಸ್ಥೆಗೆ ಜನ ಸ್ಪಂದಿಸುತ್ತಿರುವ ರೀತಿ ಗಮನಿಸಿದರೆ ರಾಜಧಾನಿಯ ಜನರು ಕೂಡ ಪ್ರಾಮಾಣಿಕ ಪಾರದರ್ಶಕ ಆಡಳಿತ ವ್ಯವಸ್ಥೆಗೆ ಹೆಚ್ಚು ಒತ್ತುಕೊಡುತ್ತಿರುವಂತೆ ಮೇಲ್ನೋಟಕ್ಕೆ ಕಂಡುಬಂದಿದೆ.
ಬಹುತೇಕ ಲಂಚ ಪ್ರಕರಣಗಳಲ್ಲಿ ಕಾನೂನು ಉಲ್ಲಂಘಿಸುವ ಸಲುವಾಗಿ ಅಥವಾ ಕಾನೂನು ಉಲ್ಲಂಘಿಸಿದ್ದಕ್ಕೆ ಪ್ರತಿಯಾಗಿ ಕಾನೂನುಬದ್ಧವಾಗಿ ಪಾವತಿಸಲೇಬೇಕಾದ ದಂಡದ ಮೊತ್ತದ ಕನಿಷ್ಟ ಭಾಗದ ಹಣವನ್ನು ಲಂಚದ ರೂಪದಲ್ಲಿ ಪಾವತಿಸಿದಾಗ ಹೆಚ್ಚಿನ ಆರ್ಥಿಕ ಹೊರೆ ತಪ್ಪುತ್ತದೆ ಎಂಬ ಸಮಜಾಯಿಷಿಯ ಮಾತೂ ಕೇಳಿಬಂದಿತ್ತು.
ಈ ಎಲ್ಲಾ ಸ್ಥಿತಿಗತಿಯ ನಡುವೆ ಲಂಚ ಪಡೆಯುವ ಅಧಿಕಾರಿಗಳದ್ದು ಮಾತ್ರ ತಪ್ಪಿರುವುದಿಲ್ಲ, ಬದಲಾಗಿ ಲಂಚ ನೀಡಿ ಆ ಕೆಟ್ಟ ವ್ಯವಸ್ಥೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಕೂಡ ಜನಸಾಮಾನ್ಯರೇ ಆಗಿರುವುದರಿಂದ ಎಲ್ಲರೂ ಭ್ರಷ್ಟಾಚಾರ ಮುಕ್ತ ಆಡಳಿತ ವ್ಯವಸ್ಥೆಗೆ ಕೈ ಜೋಡಿಸಿದರೆ ಮಾತ್ರ ಇದು ಸಾಧ್ಯ ಎಂಬ ಕೂಗೂ ಕೇಳಿಬಂದಿತ್ತು. ಆದಾಗಿಯೂ ಜನರು ಉತ್ಸುಕರಾಗಿ ವ್ಯವಸ್ಥೆಗೆ ಸ್ಪಂದಿಸುತ್ತಿರುವುದಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಸಹಾಯವಾಣಿ ನಿಭಾಯಿಸಲು ಸಿಬ್ಬಂದಿಗಳ ಕೊರತೆಯಿರುವುದರಿಂದಾಗಿ ನಾಳೆಯಿಂದ ಹೆಚ್ಚೆಚ್ಚು ಸಿಬ್ಬಂಧಿಗಳನ್ನು ನಿಯೋಜಿಸುವ ಕುರಿತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ.
ಬಹುತೇಕ ಜನರ ತೆರಿಗೆ ಹಣದಿಂದ ಸಂಗ್ರಹವಾದ ಹಣದಿಂದ ಸಂಬಳ ಪಡೆಯುತ್ತಾ ಜನಸೇವೆಗಾಗಿ ನಿಯೋಜನೆಗೊಂಡಿರುವ ಸರ್ಕಾರಿ ಅಧಿಕಾರಿಗಳು, ತಮ್ಮ ಸೇವೆಗೆ ಲಂಚಕೇಳಿದರೆ ಯಾವುದೇ ರೀತಿಯ ವಿರೋಧ ವ್ಯಕ್ತಪಡಿಸದೆ ನಮ್ಮ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದರೆ ಸಾಕು, ತಕ್ಷಣ ನಿಮ್ಮ ಸಹಾಯಕ್ಕೆ ಕಾನೂನು ಪಂಡಿತರು ಆಗಮಿಸಿ ಅಂತಹಾ ಭ್ರಷ್ಟ ಅಧಿಕಾರಿಯ ವಿರುದ್ಧ ಕಾನೂನು ರೀತಿಯ ಕ್ರಮಕ್ಕೆ ಮುಂದಾಗುತ್ತಾರೆಂದು ಘೋಷಿಸಿದ್ದ ಎಎಪಿ ಪಕ್ಷ, ಅಧಿಕಾರಕ್ಕೇರಿದ ಕೆಲವೇ ದಿನಗಳಲ್ಲಿ ಅಂದರೆ ಬುಧವಾರ ಈ ಸೇವೆ ಅಸ್ಥಿತ್ವಕ್ಕೆ ತಂದಿತ್ತು. ಗುರುವಾರ ಮುಂಜಾನೆ ವೇಳೆಗಾಗಲೇ ಭ್ರಷ್ಟರ ಬೇಟೆಗೆ ಜನಸಾಮಾನ್ಯರು ಸ್ಪಂದಿಸಿರುವ ರೀತಿ ಶುಭ್ರ ವ್ಯವಸ್ಥೆಯ ಹೊಸ ಆಶಾವಾದವನ್ನ ಸೃಷ್ಟಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com