ಆಮ್ ಆದ್ಮಿಯಲ್ಲಿ ಪಕ್ಷದಲ್ಲಿ ಬಂಡಾಯದ ಸೂಚನೆ

ನವದೆಹಲಿ: ಅಧಿಕಾರಕ್ಕೆ ಬಂದ ತಿಂಗಳಲ್ಲೇ ಆಮ್ ಆದ್ಮಿ ಪಕ್ಷದಲ್ಲಿ ಬಂಡಾಯ ಉಲ್ಬಣಿಸುತ್ತಿದೆ. ಕ್ಯಾಬಿನೆಟ್ ರಚನೆ ವೇಳೆಯೇ ಅಸಮಾಧಾನದ ಹೊಗೆ ಕಂಡಿದ್ದ ಆಮ್ ಆದ್ಮಿ ಈಗ ಗಂಭೀರ ಬಂಡಾಯದ ಸ್ಥಿತಿ ಎದುರಿಸುತ್ತಿದೆ. ಪಕ್ಷ ತನ್ನ ನೀತಿಗಳನ್ನ ಗಾಳಿಗೆ ತೂರುತ್ತಿದೆ ಎಂದು ಶಾಸಕ ವಿನೋದ್ ಕುಮಾರ್ ಬಿನ್ನಿ ಕಿಡಿಕಾರಿದ್ದಾರೆ. ಕೇಜ್ರಿವಾಲ್ ಒಬ್ಬ ಸುಳ್ಳುಗಾರ ಎಂದೂ ಅವರು ಆರೋಪಿಸಿದ್ದಾರೆ. ಇದೇ ವೇಳೆ, ಯಾರಿಗೆ ಇಷ್ಟವಿಲ್ಲವೋ ಅವರು ಪಕ್ಷ ತೊರೆಯಬಹುದು ಎಂದು ಆಮ್ ಆದ್ಮಿ ಎಚ್ಚರಿಕೆ ನೀಡಿದೆ. ಹೀಗೆ, ಆಮ್ ಆದ್ಮಿಯಲ್ಲಿ ಬಿರುಕು ಮೂಡಿರುವುದಂತೂ ನಿಚ್ಚಳವಾಗಿ ತೋರುತ್ತಿದೆ.

ಕೇಜ್ರಿವಾಲ್ ಸುಳ್ಳುಗಾರ...?
ಕಳೆದ ತಿಂಗಳು ಕ್ಯಾಬಿನೆಟ್ ರಚನೆ ವೇಳೆ ತನಗೆ ಮಂತ್ರಿಗಿರಿ ದೊರೆಯಲಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದ ವಿನೋದ್ ಕುಮಾರ್ ಬಿನ್ನಿ ಇದೀಗ ಅರವಿಂದ್ ಕೇಜ್ರಿವಾಲ್ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದಾರೆ. ಕೇಜ್ರಿವಾಲ್ ಒಬ್ಬ ಸುಳ್ಳುಗಾರ ಎಂದು ಆರೋಪಿಸಿದ್ದಾರೆ.

ಬಿನ್ನಿ ಆರೋಪಕ್ಕೆ ಕಾರಣವಾದರೂ ಏನು? ಅರವಿಂದ್ ಕೇಜ್ರಿವಾಲ್ ಏನಂಥ ಸುಳ್ಳು ಹೇಳಿದ್ದಾರೆ...?
"ಈ ಮನುಷ್ಯ(ವಿನೋದ್ ಕುಮಾರ್ ಬಿನ್ನಿ) ಮೊದಲು ಮಂತ್ರಿಗಿರಿಗಾಗಿ ಬಂದರು. ನಂತರ, ಲೋಕಸಭಾ ಸೀಟು ಬೇಕೆಂದು ಕೇಳಿಕೊಂಡು ಬಂದರು. ಶಾಸಕರ ಸಭೆಯಲ್ಲಿ ಅವರೆಂದಿಗೂ ಮಾತನಾಡೇ ಇಲ್ಲ" - ಇದು ಅರವಿಂದ್ ಕೇಜ್ರಿವಾಲ್ ಹೇಳಿದ ಮಾತುಗಳು... ಕಾಂಗ್ರೆಸ್ ಮೂಲದವರಾದ ವಿನೋದ್ ಕುಮಾರ್ ಬಿನ್ನಿ ಮೊದಲೇ ಹೇಳಿದಂತೆ ಮಂತ್ರಿಗಿರಿಗಾಗಿ ತೀವ್ರ ಪ್ರಯತ್ನ ನಡೆಸಿದ್ದಂತೂ ಹೌದು. ಆದರೆ, ಲೋಕಸಭೆ ಸೀಟಿಗೆ ತಾನು ಕೇಜ್ರಿವಾಲ್ ಬಳಿ ಹೋದೆ ಎಂಬ ಆರೋಪವನ್ನ ಬಿನ್ನಿ ನಿರಾಕರಿಸಿದ್ದಾರೆ. ಕೇಜ್ರಿವಾಲ್ ಹೀಗೆ ಹೇಳಿದ್ದರೆ ಅದು ಅಪ್ಪಟ ಸುಳ್ಳು ಎಂದು ಆಮ್ ಆದ್ಮಿ ಶಾಸಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಟ್ಟುಹೋಗುವವರು ಹೋಗಲಿ...
ಇದೇ ವೇಳೆ, ಆಮ್ ಆದ್ಮಿ ಪಕ್ಷ ಕಟ್ಟುನಿಟ್ಟಾದ ಹೇಳಿಕೆಯೊಂದನ್ನ ನೀಡಿದೆ. ವೈಯಕ್ತಿಕ ಹಿತಾಸಕ್ತಿ ಹೊಂದಿರುವವರಿಗೆ ಪಕ್ಷದಲ್ಲಿ ಸ್ಥಾನವಿಲ್ಲ. ಪಕ್ಷವನ್ನ ಬಿಡುವವರು ಯಾವುದೇ ಮುಲಾಜಿಲ್ಲದೇ ಬಿಡಬಹುದು ಎಂದು ಪಕ್ಷದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹೇಳಿದ್ದೇನು.. ಮಾಡಿದ್ದೇನು?
ಇನ್ನು, ಶಾಸಕ ವಿನೋದ್ ಕುಮಾರ್ ಬಿನ್ನಿ ತಮ್ಮ ಪಕ್ಷದ ಬುಡವನ್ನೇ ಹಿಡಿದು ಅಲ್ಲಾಡಿಸುವ ಯತ್ನ ಮಾಡಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನ ಜನರಿಗೆ ಆಶ್ವಾಸನೆ ನೀಡಿರುವುದಕ್ಕೂ ಈಗ ನಡೆಯುತ್ತಿರುವುದಕ್ಕೂ ಅಜಗಜಾಂತರ ವ್ಯತ್ಯಾಸ ಇದೆ ಎಂದು ಬಿನ್ನಿ ಆತ್ಮವಿಮರ್ಶೆ ಮಾಡಿದ್ದಾರೆ. ಪಕ್ಷದ ಯಾವುದೇ ಸಮಸ್ಯೆಯನ್ನ ಖಾಸಗಿ ಕೋಣೆಯಲ್ಲಿ ಕೂತು ಚರ್ಚಿಸುವುದಿಲ್ಲ. ಪಕ್ಷದಿಂದ ಸರಿಯಾದ ಪ್ರತಿಕ್ರಿಯೆ ಬರದಿದ್ದಲ್ಲಿ ತಮ್ಮ ಸಂಗಡಿಗರೊಂದಿಗೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಬಿನ್ನಿ ಎಚ್ಚರಿಕೆ ನೀಡಿದ್ದಾರೆ.

ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ವಿಫಲರಾದ ವಿನೋದ್ ಕುಮಾರ್ ಬಿನ್ನಿಗೆ ಸಂಪುಟ ದರ್ಜೆಗೆ ಸಮಾನವೇ ಆದ ಸಿಎಂ ಸಂಸದೀಯ ಕಾರ್ಯದರ್ಶಿ ಹುದ್ದೆಯನ್ನ ನೀಡುವ ಆಶ್ವಾಸನೆ ನೀಡಲಾಗಿತ್ತೆನ್ನಲಾಗಿದೆ.

ಜ.16ರ ಸುದ್ದಿಗೋಷ್ಠಿಯಲ್ಲಿ ಬಂಡಾಯ ಬಹಿರಂಗ..?
ನಾಳೆ, ಗುರುವಾರದಂದು ವಿನೋದ್ ಕುಮಾರ್ ಬಿನ್ನಿ ಪತ್ರಿಕಾಗೋಷ್ಠಿ ಕರೆದಿದ್ದಾರೆ. ಆಮ್ ಆದ್ಮಿ ಪಕ್ಷದ ವಂಚನೆಗಳೆಲ್ಲವನ್ನೂ ಈ ಗೋಷ್ಠಿಯಲ್ಲಿ ಬಹಿರಂಗಗೊಳಿಸುವುದಾಗಿ ಶಾಸಕರು ಹೇಳಿದ್ದಾರೆ.

ಸೌಜನ್ಯ: ಸುವರ್ಣ ನ್ಯೂಸ್
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com