ರಾಜ್ಯದ ಒಟ್ಟು ಬಜೆಟ್ ನಲ್ಲಿ ಶೇ.18 ರಷ್ಟು ಶಿಕ್ಷಣಕ್ಕೆ ವ್ಯಯ:ಕಿಮ್ಮನೆ

ಕುಂದಾಪುರ:  ಶಿಕ್ಷಣ ಎನ್ನುವುದು ಕೇವಲ ಸರ್ಟಿಫಿಕೇಟ್ ಕೋರ್ಸಿಗೆ ಮಾತ್ರ ಸೀಮಿತವಾಗಿರದೆ, ತಂದೆ, ತಾಯಿ ಹಾಗೂ ದೇಶದ ಆದರ್ಶ ವ್ಯಕ್ತಿಗಳ ಅಮೂಲ್ಯವಾದ ಜೀವನದ ರ್ಮಲ್ಯಗಳನ್ನು ಮತ್ತು ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡುವಲ್ಲಿ ಪೋಷಕರು ಹಾಗೂ ಶಿಕ್ಷಕರ ಜವಾಬ್ದಾರಿ ಪ್ರಮುಖವಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳದರು. ಅವರು ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಹಾಗೂ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಧೇಶಿಸಿ ಮಾತನಾಡಿದರು.
       ನಮ್ಮಲ್ಲಿ ವಿವೇಕ ಇದ್ದರೆ ಮಾತ್ರ ಮಕ್ಕಳಲ್ಲಿಯೂ ವಿವೇಕ ಮೂಡಿಸುತ್ತದೆ. ಇಡೀ ಪ್ರಪಂಚವನ್ನು ಸರಿ ಮಾಡಲು ಸಾದ್ಯವಾಗದಿದ್ದರೂ ನನ್ನನ್ನು ನಾನು ತಿದ್ದಿಕೊಂಡರೆ ಇಡೀ ಸಮಾಜ ಸರಿಯಾಗುತ್ತದೆ. ಆ ನಿಟ್ಟಿನಲ್ಲಿ ನಾವು ಅನುಸರಿಸುವ ನೀತಿ, ಕಾರ್ಯ ವೈಕರಿ ಸರಿಯಾಗಿರಬೇಕು ಎಂದು  ಅವರು ತಿಳಿ ಹೇಳಿದರು.
        2002 ರಿಂದ ಅಕ್ಷರ ದಾಸೋಹದಲ್ಲಿ 7 ಕೋಟಿ ಮಕ್ಕಳು ಊಟ ಮಾಡಿದ್ದಾರೆ. ಅದರ ನ್ಯೂನ್ಯತೆಯ ಬಗ್ಗೆ 49 ಪ್ರಕರಣಗಳು ದಾಖಲಾಗಿದೆ ಅದನ್ನು ಪರಿಶೀಲಿಸಿ ಬಗೆಹರಿಸಲಾಗಿದೆ. ರಾಜ್ಯದಲ್ಲಿ 25 ಸಾವಿರ ಶಿಕ್ಷಕರ ಕೊರತೆ ಇದೆ, ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದು ಮತ್ತು ಒಳ್ಳೆಯ ಶಿಕ್ಷಣಕ್ಕಾಗಿ 12 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಯಿತು. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ನಿವೃತ್ತಿಯಾಗುವ ಶಿಕ್ಷಕರನ್ನು ಮಾರ್ಚ 31 ರವರೆಗೆ ಕಾರ್ಯ ನಿರ್ವಹಿಸುವಂತೆ ಆದೇಶ ನೀಡಿದ್ದೇವೆ. ರಾಜ್ಯದಲ್ಲಿ ಶೇ.47 ರಷ್ಟು ಮಕ್ಕಳು ಪೌಷ್ಠಿಕಾಂಶದ ಕೊರತೆಯಿಂದಾಗಿ 5 ನೂರು ಕೋಟಿ ವೆಚ್ಚದಲ್ಲಿ ಕ್ಷೀರ ಭಾಗ್ಯ ಯೋಜನೆ ಜಾರಿಗೆ ತಂದಿದ್ದೇವೆ. 
    ರಾಜ್ಯದ  ಒಟ್ಟು ಬಜೆಟ್ ನಲ್ಲಿ ಶೇ.18 ರಷ್ಟು ಶಿಕ್ಷಣಕ್ಕೆ ವ್ಯಯಿಸಲಾಗಿದೆ. ರೂ.11 ಸಾವಿರದ ಐನೂರು ಕೋಟಿ ಶಿಕ್ಷಕರ ಸಂಬಳ, 90 ಕೋಟಿ ಸಮವಸ್ತ್ರ, 90 ಕೋಟಿ ಪುಸ್ತಕ, ಸೈಕಲ್ ಗೆ 120 ಕೋಟಿ, ಶಾಲಾ ರಿಪೇರಿಗೆ 15 ಸಾವಿರ ಒಟ್ಟು ಪ್ರತಿ ಮಗುವಿಗೆ ಶಾಲಾ ಶಿಕ್ಷಣಕ್ಕೆ 15 ಸಾವಿರ ಸರ್ಕಾರ ಖರ್ಚು ಮಾಡುತ್ತಿದೆ ಎಂದರು.
 ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಮಾಸ್ಟರ್ ಮೊಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಪುರಸಭೆಯ ಅಧ್ಯಕ್ಷೆ ಕಲಾವತಿ.ಯು.ಎಸ್, ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಪುರಸಭಾ ಸದಸ್ಯರಾದ ಜ್ಯೋತಿ ಪುತ್ರನ್, ಕೆ. ಪ್ರಭಾಕರ್, ಪೋಷಕ ಸಂಘದ ನಾಗೇಶ್ ಮಧ್ಯಸ್ಥ, ರವಿ, ಮಾಧವ ಪೂಜಾರಿ, ಅಬ್ಬುಲ್ ರೆಹಮಾನ್ ಉಪಸ್ಥಿತರಿದ್ದರು.
 ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಸಯ್ಯದ್ ಬ್ಯಾರಿ ಸ್ವಾಗತಿಸಿದರು. ಡಾ. ಕೃಷ್ಣರಾಜ್ ಕರಬ ವರದಿ ವಾಚಿಸಿದರು. ಸುರೇಂದ್ರ ಶೆಟ್ಟಿ ಬಹುಮಾನ ಪಟ್ಟಿ ವಾಚಿಸಿದರು. ಕು.ರೋಶನಿ ಮತ್ತು ಫಾತೀಮಾ ರಜಿನಾ ನಿರೂಪಿಸಿದರು. ಬ್ಯಾರೀಸ್ ಡಿಎಡ್ ಕಾಲೇಜಿನ ಪ್ರಾಂಶುಪಾಲೆ ಫಿರದೋಸ್ ವಂದಿಸಿದರು.ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com