ವೈಭವದ ಕಡಲೋತ್ಸವ ಉದ್ಘಾಟನೆ

ಬೈಂದೂರು: ಕರ್ನಾಟಕ ಕರಾವಳಿ ಪ್ರವಾಸಿ ತಾಣಗಳ ಆಗರವಾಗಿದೆ. ಇಲ್ಲಿ ಸುಮಾರು 360 ಕಿ.ಮೀ. ವಿಸ್ತಾರವಾದ ಕರಾವಳಿ ಭಾಗವನ್ನು ಹೊಂದಿದೆ. ಈ ಕರಾವಳಿಯ ಸಮುದ್ರ ಕಿನಾರೆಯನ್ನು ಅಭಿವೃದ್ಧಿಪಡಿಸುವ ಮೂಲಕ ಒಂದು ಉದ್ಯಮವಾಗಿ ಬೆಳೆಸಬೇಕಾಗಿದೆ ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ರಾಜೇಂದ್ರ ಕುಮಾರ್ ಹೇಳಿದ್ದಾರೆ. ಉಪ್ಪುಂದ ಮಡಿಕಲ್ ಕಡಲ ಕಿನಾರೆಯಲ್ಲಿ ನಡೆದ ಕಡಲೋತ್ಸವ- 2014 ಸಮುದ್ರ ಸಂಭ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. 

ರಾಜ್ಯದಲ್ಲಿ ಹಲವು ಸ್ವರ್ಗಸದೃಶ ಪ್ರವಾಸಿ ತಾಣಗಳು ಹಾಗೂ ಆರಾಧನೆ ಕೇಂದ್ರಗಳಿವೆ. ಆದರೆ ಬಹುತೇಕ ಪ್ರವಾಸಿ ತಾಣಗಳು ಇನ್ನೂ ಅಭಿವೃದ್ಧಿ ಕಾಣದೇ ಇರುವುದಕ್ಕೆ ರಾಜಕಾರಣಿಗಳ ಇಚ್ಛಾಶಕ್ತಿಯೇ ಕಾರಣ ಎಂದು ಆರೋಪಿಸಿದ ಅವರು, ಅವುಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿದರೆ ಕರ್ನಾಟಕ ಕರಾವಳಿ ವಿದೇಶಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಸಂದೇಹವಿಲ್ಲ. ಇಲ್ಲಿನ ವೈಭವ, ಸೊಗಸನ್ನು ಸವಿಯುವಂತಾಗಬೇಕು ಎಂದರು. 

ಅಧ್ಯಕ್ಷತೆ ವಹಿಸಿದ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಉಪ್ಪುಂದದಂತಹ ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮ ಸಂಘಟಿಸಿದ ಮೀನುಗಾರ ಮುಖಂಡರ ಕಾರ್ಯವೈಖರಿ ಶ್ಲಾಘನೀಯ. ಇಲ್ಲಿನ ಮೀನುಗಾರರ ಬಯಕೆಯಂತೆ ಮಡಿಕಲ್‌ನಲ್ಲಿ ಹೊರ ಬಂದರನ್ನು ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. 

ಉಪ್ಪುಂದ ಧಾರ್ಮಿಕ ಪ್ರತಿಷ್ಠಾನದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಾದಯ್ಯ ಶೆಟ್ರಮನೆ ಅವರು ಸಮುದ್ರಕ್ಕೆ ಗಾಳ ಹಾಕಿ ಮೀನನ್ನು ಹಿಡಿಯುವ ಮೂಲಕ ವಿನೂತನವಾಗಿ ಕಾರ್ಯಕ್ರಮ ಉದ್ಘಾಟಿಸಿದರು. 

ಗ್ರಾಪಂ ಅಧ್ಯಕ್ಷ ಜಗನ್ನಾಥ, ತಾಪಂ ಸದಸ್ಯ ರಾಜು ಪೂಜಾರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಯು. ಚಂದ್ರಶೇಖರ ಹೊಳ್ಳ, ಬಂದರು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಎನ್. ಖಾರ್ವಿ, ಮಡಿಕಲ್ ಮಹಾಈಶ್ವರ ದೇವಸ್ಥಾನದ ಅಧ್ಯಕ್ಷ ಬಿ. ಶ್ರೀಧರ ಖಾರ್ವಿ, ಉದ್ಯಮಿ ರತ್ನಕರ ಚಂದನೆ ಉಪಸ್ಥಿತರಿದ್ದರು. ಈ ಸಂದರ್ಭ ಕೆದೂರು ಸೂರ್ತಿಧಾಮದ ಡಾ. ಕೇಶವ ಕೋಟೇಶ್ವರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್. ಜನಾರ್ದನ ಮರವಂತೆ, ನಿವೃತ್ತ ಕೃಷಿ ಅಕಾರಿ ವಿ.ಎಚ್. ನಾಯ್ಕ ಅವರನ್ನು ಸನ್ಮಾನಿಸಲಾಯಿತು. 

ಕಡಲೋತ್ಸವ ಉದ್ಘಾಟನೆಗೂ ಮುನ್ನ ಉಪ್ಪುಂದ ರಾಷ್ಟ್ರೀಯ ಹೆದ್ದಾರಿಯಿಂದ ಮಡಿಕಲ್ ಕಡಲ ಕಿನಾರೆಯವರೆಗೆ ಕರಾವಳಿಯ ಜಾನಪದ ಕಲೆಯಾದ ಡೊಳ್ಳು ಕುಣಿತ, ವೀರಗಾಸೆ, ಪೂರ್ಣಕುಂಭದೊಂದಿಗೆ ಭವ್ಯ ಮೆರವಣಿಗೆ ನಡೆಯಿತು. 

ಕಡಲೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಸ್. ಮದನ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಮಹಾಈಶ್ವರ ಕಲಾ, ಕ್ರೀಡಾ ಸಂಘದ ಅಧ್ಯಕ್ಷ ಬಿ. ರಾಮ ಖಾರ್ವಿ ಸ್ವಾಗತಿಸಿದರು. ಕಾರ್ಯದರ್ಶಿ ಎಂ. ನಾಗೇಶ ಖಾರ್ವಿ ವಂದಿಸಿದರು. ರಾಘವೇಂದ್ರ ಚರಣ ನಾವುಡ ಹಾಗೂ ಓಂ ಗಣೇಶ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com