ಗಾಯಾಳುಗಳನ್ನು ರಕ್ಷಿಸಲು ಬೈಕ್‌ ಅಂಬ್ಯುಲೆನ್ಸ್‌: ಮಾದರಿ ಪ್ರದರ್ಶನ

ಬೆಂಗಳೂರು: ಅಪಘಾತಕ್ಕೊಳಗಾದ ಗಾಯಾಳುಗಳನ್ನು ಸಂಚಾರ ದಟ್ಟಣೆಯ ನಡುವೆ ತುರ್ತಾಗಿ ನಗರದ ಆಸ್ಪತ್ರೆಗಳಿಗೆ ಕರೆದೊಯ್ಯಲು ಆಂಬ್ಯುಲೆನ್ಸ್‌ಗಳು ನಡೆಸುವ ಹರಸಾಹಸವನ್ನು ತಪ್ಪಿಸಲು ರಾಜ್ಯ ಸರ್ಕಾರ ಪರ್ಯಾಯ ಮಾರ್ಗವನ್ನು ಕಂಡುಕೊಂಡಿದ್ದು, ನಗರಕ್ಕೆ ಬೈಕ್‌ ಅಂಬ್ಯುಲೆನ್ಸ್‌ ಪರಿಚಯಿಸುವ ಚಿಂತನೆ ನಡೆಸಿದೆ.

ದಿನೇ ದಿನೇ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಬೆಂಗಳೂರಲ್ಲಿ ಸಂಚಾರ ದಟ್ಟಣೆಯು ದುಪ್ಪಟ್ಟುಗೊಳ್ಳುತ್ತಿದ್ದು, ತುರ್ತು ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್‌ಗಳಿಗೆ ಜಾಗ ಮಾಡಿಕೊಡುವುದೇ ದೊಡ್ಡ ತಲೆನೋವಾಗಿದೆ. ಇದನ್ನು ಮನಗಂಡ ರಾಜ್ಯ ಆರೋಗ್ಯ ಇಲಾಖೆಯು ಸಂಚಾರದಟ್ಟಣೆಯಲ್ಲಿ ಸುಲಭವಾಗಿ ಸಂಚರಿಸಲು ಸಾಧ್ಯವಾಗಲೆಂದು ಬೈಕ್‌ ಆಂಬ್ಯುಲೆನ್ಸ್‌ ಎಂಬ ಪರಿಕಲ್ಪನೆಯನ್ನು ತಯಾರಿಸಿದೆ.

ಬೈಕ್‌ ಆಂಬ್ಯುಲೆನ್ಸ್‌ ಇನ್ನು ಬಿಡುಗಡೆ ಮಾಡಿಲ್ಲ. ಆದರೆ, ಬೈಕ್‌ ಆಂಬ್ಯುಲೆನ್ಸ್‌ ಹೇಗಿರಬೇಕು ಎಂಬ ಪರಿಕಲ್ಪನೆಯನ್ನು ಸದ್ಯಕ್ಕೆ ರಚಿಸಲಾಗಿದೆ. ಬಜಾಜ್‌ ಕಂಪನಿ ತಯಾರಿಸಿರುವ ಬೈಕ್‌ ಆ್ಯಂಬುಲೆನ್ಸ್‌ನ ಮಾದರಿಯನ್ನು ನಗರದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್‌, ಭಾನುವಾರ ಪ್ರದರ್ಶಿಸಿದರು.

ಬೈಕ್‌ ಆಂಬ್ಯುಲೆನ್ಸ್‌ ಕುರಿತು 'ಉದಯವಾಣಿ'ಗೆ ವಿವರಣೆ ನೀಡಿದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್‌ ಗೋಪಾಲ್‌ ಅವರು, ಬೆಂಗಳೂರು ನಗರಕ್ಕಾಗಿಯೇ ವಿಶೇಷವಾಗಿ ಬೈಕ್‌ ಆಂಬ್ಯುಲೆನ್ಸ್‌ ಪರಿಚಯಿಸುವ ಚಿಂತನೆ ಇದೆ. ಹೀಗಾಗಿ ಇದರ ಪರಿಕಲ್ಪನೆಯನ್ನು ಸದ್ಯಕ್ಕೆ ಪ್ರದರ್ಶಿಸಲಾಗಿದೆ. ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಳ್ಳುವ ವ್ಯಕ್ತಿಗಳನ್ನು ಆಸ್ಪತ್ರೆಗಳಿಗೆ ಸಾಗಿಸುವ ದೃಷ್ಟಿಯಿಂದ ಬೈಕ್‌ ಆಂಬ್ಯುಲೆನ್ಸ್‌ ಬಿಡುಗಡೆ ಮಾಡಬೇಕು ಎಂಬ ಆಲೋಚನೆ ಇದೆ. ಬೈಕ್‌ ಆಂಬ್ಯುಲೆನ್ಸ್‌ನ ಚಾಲಕನಿಗೆ ತರಬೇತಿ ನೀಡಲಾಗುವುದು. ಪ್ರಾಥಮಿಕ ಚಿಕಿತ್ಸೆ ನೀಡುವ ಎಲ್ಲಾ ಸೌಲಭ್ಯಗಳು ಇದರಲ್ಲಿ ಇರಲಿವೆ. ನಗರ ಆರೋಗ್ಯ ಮಿಷನ್‌ನಡಿಯಲ್ಲಿ ಇದನ್ನು ಪರಿಚಯಿಸಲಾಗುವುದು ಎಂದು ಹೇಳಿದರು.

ಬೈಕ್‌ ಆಂಬ್ಯುಲೆನ್ಸ್‌ ಇನ್ನೂ ಪರೀಕ್ಷಾ ಹಂತದಲ್ಲಿದೆ. ಬಜಾಜ್‌ ಕಂಪನಿಯವರು ಮಾದರಿ ಬೈಕ್‌ ಆಂಬ್ಯುಲೆನ್ಸ್‌ ನೀಡಿದ್ದು, ಇದರ ಸಾಧಕ-ಬಾಧಕ ಬಗ್ಗೆ ಕೂಲಂಕಷವಾಗಿ ಚರ್ಚಿಸಿದ ಬಳಿಕ ಇಲಾಖೆಯಲ್ಲಿ ಅಳವಡಿಸಿಕೊಳ್ಳುವ ಯೋಚನೆ ಇದೆ ಎಂದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com