ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ನಿರ್ಮಾಣಕ್ಕೆ 50 ಲಕ್ಷ ಬಿಡುಗಡೆ: ಸಚಿವ ಕಿಮ್ಮನೆ

ಬೈಂದೂರು: ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬಾಡಿಗೆ ಕಟ್ಟಡಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರ ಸ್ವಂತ ಕಟ್ಟಡ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಹಾಗೂ ವಲಯಕ್ಕೆ ಒಂದು ಪದವಿ ಪೂರ್ವ ಕಾಲೇಜನ್ನು ಮಂಜೂರು ಮಾಡಲಾಗುವುದು ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ.ಅವರು ಇಲ್ಲಿನ ಜೆ‌ಎನ್‌ಆರ್ ಕಲಾ ಮಂದಿರದಲ್ಲಿ ಬೈಂದೂರು ವಲಯ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಮತ್ತು ಕೌಶಲ್ಯ ಶಿಕ್ಷಣ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಇಲಾಖೆಯಲ್ಲಿ ಹಲವು ಸಮಸ್ಯೆಗಳಿಗೆ ಅದನ್ನು ಏಕಕಾಲದಲ್ಲಿ ಪರಿಹರಿಸಲು ಸಾಧ್ಯವಿಲ್ಲ ಎಂದ ಅವರು ಹಂತವಾಗಿ ಪರಿಹರಿಸುವ ಮೂಲಕ ಶಿಕ್ಷಣದಲ್ಲಿ ಬದಲಾವಣೆ ತರಲಾಗುವುದು. ಶಿಕ್ಷಣ ಇಲಾಖೆಯಲ್ಲಿ ಆಡಳಿತಯಂತ್ರ ಜೆಡ್ಡು ಕಟ್ಟಿದ ವಾತವರಣವಿದೆ, ಅದನ್ನು ಕಿತ್ತು ಹಾಕುವ ಕೆಲಸ ಮೊದಲು ಮಾಡಬೇಕಾಗಿದೆ. ಮುಂದಿನ ವರ್ಷದಿಂದ ಶೈಕ್ಷಣಿಕ ವರ್ಷದ ಆರಂಭದಿಂದಲೇ  ಮಕ್ಕಳಿಗೆ ಪುಸ್ತಕ, ಸಮವಸ್ತ್ರ ಹಾಗೂ ಸೈಕಲ್ ನೀಡುವ ವ್ಯವಸ್ಥೆ ಮಾಡಬೇಕಾಗಿದ್ದು, ಅದನ್ನು ಮಾಡದಿದ್ದರೇ ಒಂದೇ ನಾವೇ ಇರಲ್ಲ, ಇಲ್ಲದಿದ್ದರೇ ನೀವು ಇರಲ್ಲ ಎಂದು ಈಗಾಗಲೇ ಅಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
   ಸರ್ಕಾರದ ಬಜೆಟ್‌ನಲ್ಲಿ ಸುಮಾರು 17 ಸಾವಿರ ಕೋಟಿ ಶಿಕ್ಷಣ ಇಲಾಖೆಗೆ ನೀಡುತ್ತದೆ, ಅದರಲ್ಲಿ 90 ಕೋಟಿ ಉಚಿತ ಪುಸ್ತಕ ವಿತರಣೆಗೆ, 80 ಕೋಟಿ ಸಮವಸ್ತ್ರ ವಿತರಣೆಗೆ, 173 ಕೋಟಿ ಸೈಕಲ್ ವಿತರಣೆಗೆ, 1600 ಕೋಟಿ ಅಕ್ಷರ ದಾಸೋಹಕ್ಕೆ ಹಾಗೂ 11500 ಕೋಟಿ ಶಿಕ್ಷಕರ ವೇತನಕ್ಕೆ ಬಳಸಲಾಗುತ್ತಿದೆ. ಅಲ್ಲದೇ ಮೂಲಸೌಲಭ್ಯಕ್ಕಾಗಿ ಪ್ರತಿ ಜಿಲ್ಲೆಗೆ ಸುಮಾರು 150 ಕೋಟಿ ನೀಡಲಾಗುತ್ತಿದ್ದು ಇದಕ್ಕಾಗಿ ರಾಜ್ಯದಲ್ಲಿ ಸುಮಾರು 600 ಕೋಟಿ ವಿನಿಯೋಗಿಸಬೇಕಾಗುತ್ತದೆ ಎಂದರು.
      ರಾಜ್ಯದಲ್ಲಿ  ಸುಮಾರು 1.4 ಕೋಟಿ ಶಾಲಾ ಮಕ್ಕಳಿದ್ದು, ಅದರಲ್ಲಿ 70 ರಿಂದ 80 ಲಕ್ಷ ಜನರು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಮಕ್ಕಳು ಪಾಲಕರು ಸೇರಿದಂತೆ ಸುಮಾರು 3 ಕೋಟಿ ಜನರ ಸಮಸ್ಯೆಯನ್ನು ಪರಿಹರಿಸಬೇಕಾದ ದೊಡ್ಡ ಹೊಣೆಗಾರಿಕೆ ನಮ್ಮ ಇಲಾಖೆಯ ಮೇಲಿದೆ. ಇಂದು ಶಿಕ್ಷಕರ ವರ್ಗಾವಣೆ ವಿಷಯ ಸರ್ಕಾರಕ್ಕೆ ಬಹುದೊಡ್ಡ ತಲೆ ನೋವಾಗಿ ಪರಿಣಮಿಸಿದ್ದು, ರಾಜ್ಯದಲ್ಲಿ ಸುಮಾರು 6 ಲಕ್ಷ ಶಿಕ್ಷಕರಿದ್ದು ಅದರಲ್ಲಿ 3 ಲಕ್ಷ ಶಿಕ್ಷಕರು ವರ್ಗಾವಣೆಗಾಗಿ ಮನವಿ ಸಲ್ಲಿಸುತ್ತಿದ್ದಾರೆ ಎಂದ ಅವರು ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ವರ್ಗಾವಣೆ ನೀತಿಯನ್ನು ಜಾರಿಗೆ ತರಲು ಪ್ರಯತ್ನಿಸಲಾಗುವುದು ಅಲ್ಲದೇ ಯಾವುದೇ ಶಿಕ್ಷಕರು ವರ್ಗಾವಣೆಗಾಗಿ  ಮಧ್ಯವರ್ತಿಗಳಿಗೆ ಹಣ ನೀಡಬಾರದು, ಮುಂದಿನ ದಿನದಲ್ಲಿ ವರ್ಗಾವಣೆಗಾಗಿ ಹಣ ಪಡೆದ ಆರೋಪ ಬಂದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಇಲಾಖೆಯಲ್ಲಿ ಪಾರದರ್ಶಕತೆ ಒತ್ತು ನೀಡಲಾಗುವುದು ಎಂದರು.    
       ಇಂದು ನಿವೃತ್ತಿ ಹೊಂದಿದ ಶಿಕ್ಷಕರ ಪಿಂಚಣಿ ನೀಡಲು ಅಕಾರಿಗಳು ಅವರನ್ನು ಸತಾತಿಸುತ್ತಿದ್ದ ವಿಷಯ ಬೆಳಕಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಶಿಕ್ಷಕರು ನಿವೃತ್ತಿ ಹೊಂದಿದ 2 ದಿನದಲ್ಲಿ ಪಿಂಚಣಿ ನೀಡಬೇಕು ಇಲ್ಲದಿದ್ದರೇ ಅಂತಹ ಅಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಇನ್ನು ಕ್ಷೇತ್ರ ಶಿಕ್ಷಣಾಕಾರಿಗಳನ್ನು ಮೂರು ವರ್ಷಗಳಿಗೊಮ್ಮೆ ವರ್ಗಾವಣೆ ಮಾಡಲಾಗುವುದು. ಕೆಲವು ಶಿಕ್ಷಕರಿಗೆ ಪಾಠ ಮಾಡುವುದೇ ಮರೆತು ಹೋಗಿದೆ ಅಂತವರನ್ನು ಮಗದೊಮ್ಮೆ ಪಾಠ ಕಲಿಸಲು ಕಳುಹಿಸಲಾಗುವುದು. ಪ್ರಾಥಮಿಕ ಶಾಲೆಗಳಿಗೆ ಡಿ ದರ್ಜೆಯ ನೌಕರರನ್ನು ನೇಮಿಸುವ ವ್ಯವಸ್ಥೆ ಕಲ್ಪಿಸುವುದರ ಮೂಲಕ ಶಿಕ್ಷಣ ನೀತಿಯಲ್ಲಿ ಬದಲಾವಣೆ ತರಲಾಗುವುದು ಎಂದರು.

ಶಿಕ್ಷಕರು ತಮ್ಮ ಕೆಲಸದಲ್ಲಿ ಕಾರ್ಯತತ್ಪರತೆಯನ್ನು ಹೊಂದುವ ಮೂಲಕ ವಿವೇಕಯುತರಾಗಿ ಸಮಾಜಕ್ಕೆ ಮಾದರಿಯಾಗಬೇಕು. ಶಾಲೆಗಳಲ್ಲಿ ಮಕ್ಕಳನ್ನು ಒಟ್ಟಾಗಿಸಬೇಕೇ ಹೊರತು ಅವರನ್ನು ವಿಭಾಗಿಸಬಾರದು, ಅವರಿಗೆ ಆದರ್ಶಗಳನ್ನು ತಿಳಿಹೇಳುವುದರ ಮೂಲಕ ಭವಿಷ್ಯದಲ್ಲಿ ಸತ್ಪ್ರಜೆಯಾಗಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು ಇಲಾಖೆಯಲ್ಲಿ ಹಿಂದಿನ ನ್ಯೂನತೆಗಳನ್ನು ತೊಡೆದು ಹಾಕಿ ವರ್ತಮಾನದ ಕೆಲವು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದರ ಮೂಲಕ ಭವಿಷ್ಯತ್ತಿನ ಅಗತ್ಯತೆಗಳ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದರು.
      ಶಾಸಕ ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಬಿ.ವೈ. ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಅಧ್ಯಕ್ಷ ಉಪೇಂದ್ರ ನಾಯಕ್, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಶ್ರೀಯಾನ್, ಜಿ.ಪಂ. ಸದಸ್ಯೆ ಸುಪ್ರೀತಾ ದೀಪಕ್ ಶೆಟ್ಟಿ, ತಾ.ಪಂ. ಅಧ್ಯಕ್ಷೆ ದೀಪಿಕಾ ಶೆಟ್ಟಿ, ತಾ.ಪಂ. ಸದಸ್ಯ ರಾಜು ಪೂಜಾರಿ, ವಿದ್ಯಾಂಗ ಉಪನಿರ್ದೇಶಕ ನಾಗೇಂದ್ರ ಮಧ್ಯಸ್ಥ, ಉಡುಪಿ ಡಯಟ್ ಪ್ರಾಂಶುಪಾಲ ಬಿ. ಶೇಖರ ಶೆಟ್ಟಿ, ಕ್ಷೇತ್ರ ಶಿಕ್ಷಣಾಕಾರಿ ಚಂದ್ರಶೇಖರ್ ಎಚ್., ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ, ಪ್ರಧಾನ ಕಾರ್ಯದರ್ಶಿ ನಾರಾಯಣ ಸ್ವಾಮಿ, ದಿನಕರ ಶೆಟ್ಟಿ, ಉದ್ಯಮಿ ನರಸಿಂಹ ಆರ್. ಪೂಜಾರಿ, ಗೋಕುಲ್ ಶೆಟ್ಟಿ, ರಮೇಶ ಕೊಠಾರಿ, ಆಲೂರು ತಿಮ್ಮಪ್ಪ ಶೆಟ್ಟಿ, ಸೀತಾರಾಮ ಶೆಟ್ಟಿ ಉಪಸಸ್ಥಿತರಿದ್ದರು.
     ಇದೇ ಸಂದರ್ಭದಲ್ಲಿ ಶಿಕ್ಷಕರ ಬೇಡಿಕೆ ಮನವಿಯನ್ನು ಸಚಿವರಿಗೆ ನೀಡಲಾಯಿತು. ನಿವೃತ ಶಿಕ್ಷಕ ಗೋಪಾಲ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
  ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾದೇವ ಮಂಜ ಸ್ವಾಗತಿಸಿ,  ಗಣಪತಿ ಹೋಬಳಿದಾರ್, ಸಿ.ಎನ್. ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು. ಬಾಲಯ್ಯ ಸೇರುಗಾರ್ ವಂದಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com