ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ದ

ಬೆಂಗಳೂರು: ಕಾಂಗ್ರೆಸ್ ನ ರಾಜ್ಯ ಚುನಾವಣಾ ಘಟಕದಿಂದ ಪಟ್ಟಿ ಸಿದ್ಧಗೊಂಡಿದ್ದು  ಹೈಕಮಾಂಡ್‌ ನಿರ್ಧಾರ ಬಾಕಿ ಮಾತ್ರ ಬಾಕಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆಯಲ್ಲಿ ಈ ಪಟ್ಟಿ ಸಿದ್ಧಪಡಿಸಲಾಯಿತು.

 ಸ್ಪರ್ಧೆ ಬಹುತೇಕ ಖಾತ್ರಿ

ಗುಲ್ಬರ್ಗ- ಮಲ್ಲಿಕಾರ್ಜುನ ಖರ್ಗೆ. ಚಿಕ್ಕಬಳ್ಳಾಪುರ- ಎಂ.ವೀರಪ್ಪ ಮೊಯ್ಲಿ. ಬೀದರ್‌- ಧರ್ಮಸಿಂಗ್‌. ಉಡುಪಿ, ಚಿಕ್ಕಮಗಳೂರು- ಜಯಪ್ರಕಾಶ್‌ ಹೆಗ್ಡೆ. ಮೈಸೂರು- ಎಚ್‌.ವಿಶ್ವನಾಥ್‌. ಚಾಮರಾಜನಗರ- ಧ್ರುವನಾರಾಯಣ್‌. ಮಂಡ್ಯ-ನಟಿ ರಮ್ಯಾ. ಬೆಂಗಳೂರು ಗ್ರಾಮಾಂತರ-ಡಿ.ಕೆ.ಸುರೇಶ್‌. ಕೋಲಾರ-ಕೆ.ಎಚ್‌.ಮುನಿಯಪ್ಪ. ಬಳ್ಳಾರಿ-ಎನ್‌.ವೈ.ಹನುಮಂತಪ್ಪ. ಮಂಗಳೂರು- ಜನಾರ್ದನ ಪೂಜಾರಿ.

ರಾಜ್ಯ ಕಾಂಗ್ರೆಸ್‌ ನಾಯಕರು ಸೋಮವಾರ ಅಂತಿಮಗೊಳಿಸಿದ ಸಂಭವನೀಯರ ಪಟ್ಟಿಯಲ್ಲಿ ಎಲ್ಲಾ 9 ಹಾಲಿ ಲೋಕಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ (ಗುಲ್ಬರ್ಗ), ಎಂ.ವೀರಪ್ಪಮೊಯ್ಲಿ (ಚಿಕ್ಕಬಳ್ಳಾಪುರ), ಧರ್ಮಸಿಂಗ್‌ (ಬೀದರ್‌), ಜಯಪ್ರಕಾಶ್‌ ಹೆಗ್ಡೆ (ಉಡುಪಿ- ಚಿಕ್ಕಮಗಳೂರು), ಎಚ್‌.ವಿಶ್ವನಾಥ್‌ (ಮೈಸೂರು), ಧ್ರುವ ನಾರಾಯಣ್‌ (ಚಾಮರಾಜನಗರ), ಕೆ.ಎಚ್‌.ಮುನಿಯಪ್ಪ (ಕೋಲಾರ), ರಮ್ಯಾ (ಮಂಡ್ಯ) ಹಾಗೂ ಡಿ.ಕೆ.ಸುರೇಶ್‌ (ಬೆಂಗಳೂರು ಗ್ರಾಮಾಂತರ) ಅವರ ಕ್ಷೇತ್ರಗಳಿಗೆ ಏಕೈಕ ಹೆಸರು ಶಿಫಾರಸಾಗಿದೆ.

ಗೆದ್ದೇ ಗೆಲ್ಲುತ್ತಾರೆ ಎಂದು ಕಾಂಗ್ರೆಸ್‌ ನಂಬಿರುವ ಜನಾರ್ದನ ಪೂಜಾರಿ (ಮಂಗಳೂರು) ಹಾಗೂ ಎನ್‌.ವೈ. ಹನುಮಂತಪ್ಪ (ಬಳ್ಳಾರಿ) ಅವರ ಕ್ಷೇತ್ರಗಳಿಗೂ ಏಕ ಹೆಸರನ್ನು ಶಿಫಾರಸು ಮಾಡಲಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನಂದನ್‌ ನಿಲೇಕಣಿ ಅವರಿಗೆ ಟಿಕೆಟ್‌ ದೊರೆಯುವುದು ಖಚಿತ. ಆದರೂ, ಪಟ್ಟಿಯಲ್ಲಿ ಯು.ಬಿ.ವೆಂಕಟೇಶ್‌ ಅವರ ಹೆಸರನ್ನು ಸೇರಿಸಲಾಗಿದೆ.

ತನ್ಮೂಲಕ ಈ 12 ಕ್ಷೇತ್ರಗಳ ಅಭ್ಯರ್ಥಿಗಳು ಬಹುತೇಕ ಖಚಿತಗೊಂಡಂತೆ ಆಗಿದ್ದು, ಉಳಿದ 16 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹೊಣೆ ಹೈಕಮಾಂಡ್‌ ಮೇಲೆ ಬಿದ್ದಿದೆ.

ಪಿಸಿಸಿ ಅಂತಿಮಗೊಳಿಸಿರುವ ಸಂಭವನೀಯರ ಪಟ್ಟಿಯಲ್ಲಿ ಒಬ್ಬ ಸಚಿವರು ಹಾಗೂ ನಾಲ್ವರು ಶಾಸಕರ ಹೆಸರೂ ಇದೆ. ಅಲ್ಲದೆ, ರಾಜ್ಯಸಭಾ ಸದಸ್ಯರು, ಮಾಜಿ ಮುಖ್ಯಮಂತ್ರಿ ಮಗ, ಕಾಂಗ್ರೆಸ್‌ ಪ್ರಭಾವಿ ನಾಯಕರು ಹಾಗೂ ಸಚಿವರ ಮಕ್ಕಳ ಹೆಸರೂ ಸೇರಿದೆ.

ಚಿಕ್ಕೋಡಿ ಕ್ಷೇತ್ರಕ್ಕೆ ಹಾಲಿ ಸಚಿವ ಪ್ರಕಾಶ್‌ ಹುಕ್ಕೇರಿ ಅವರ ಹೆಸರು ಶಿಫಾರಸುಗೊಂಡಿದೆ. ಇದೇ ಕ್ಷೇತ್ರಕ್ಕೆ ಶಿಫಾರಸುಗೊಂಡಿರುವ ರಮೇಶ್‌ ಜಾರಕಿಹೊಳಿ ಅವರು ಪ್ರಸ್ತುತ ಗೋಕಾಕ್‌ ಶಾಸಕರು. ಅದೇ ರೀತಿ ಮಾನ್ವಿ ಶಾಸಕ ಹಂಪಯ್ಯ ನಾಯಕ್‌ (ರಾಯಚೂರು), ಅರಕಲಗೂಡಿನ ಎ. ಮಂಜು (ಹಾಸನ), ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಹಾಗೂ ಸಚಿವ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್‌.ಎಸ್‌. ಮಲ್ಲಿಕಾರ್ಜುನ್‌ (ದಾವಣಗೆರೆ) ಅವರ ಹೆಸರು ಶಿಫಾರಸುಗೊಂಡಿದೆ. ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರ ಹೆಸರು ಕಾರವಾರ ಹಾಗೂ ಬೆಂಗಳೂರು ಉತ್ತರ ಎರಡೂ ಕ್ಷೇತ್ರಗಳಿಗೂ ಶಿಫಾರಸುಗೊಂಡಿದೆ. ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರ ಪುತ್ರ ಮಹಿಮಾ ಪಟೇಲ್‌ ಅವರ ಹೆಸರನ್ನು ದಾವಣಗೆರೆ ಕ್ಷೇತ್ರಕ್ಕಾಗಿ ಶಿಫಾರಸು ಮಾಡಲಾಗಿದೆ.

ಸಚಿವ ದೇಶಪಾಂಡೆ ಅವರ ಪುತ್ರ ಪ್ರಶಾಂತ್‌ ದೇಶಪಾಂಡೆ ಹಾಗೂ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವ ಅವರ ಪುತ್ರ ನಿವೇದಿತ್‌ ಆಳ್ವ ಅವರ ಹೆಸರುಗಳು ಕಾರವಾರ ಕ್ಷೇತ್ರಕ್ಕೆ ಸೂಚಿತಗೊಂಡಿವೆ.

ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ (ಮಾಜಿ ಪಕ್ಷೇತರ ಶಾಸಕ) ವೆಂಕಟರಮಣಪ್ಪ ಹೆಸರು ಚಿತ್ರದುರ್ಗ, ಜೆಡಿಎಸ್‌ನಿಂದ ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಆಗಮಿಸಿದ ಮುದ್ದುಹನುಮೇಗೌಡ ಅವರ ಹೆಸರು ತುಮಕೂರು ಕ್ಷೇತ್ರದ ಸಂಭವನೀಯರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ಅಭ್ಯರ್ಥಿಗಳ ಆಯ್ಕೆಗೆ ಈ ಪಟ್ಟಿಯನ್ನು ಹೈಕಮಾಂಡ್‌ ಆಧಾರವಾಗಿ ಇಟ್ಟುಕೊಳ್ಳಲಿದೆಯೇ ಹೊರತು ಇದೇ ಅಂತಿಮವಲ್ಲ. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com