ಲೋಕಸಭಾ ಚುನಾವಣೆ: ಜಿಲ್ಲಾ ಕಾಂಗ್ರೆಸ್‌ ಸಿದ್ಧತೆ

ಉಡುಪಿ: ಚುನಾವಣೆ ಸಮೀಪಿಸುತ್ತಿರುವಂತೆ ವಿಪಕ್ಷಗಳವರು ಯಾವುದೇ ಕಾರ್ಯತಂತ್ರಗಳನ್ನು ರೂಪಿಸಿ ಕಾಂಗ್ರೆಸ್‌ ಪಕ್ಷದ ಮೇಲೆ ಅಪಪ್ರಚಾರದಲ್ಲಿ ಮಗ್ನರಾಗುತ್ತಾರೆ. ಆದರೆ ನಮ್ಮ ಕಾರ್ಯಕರ್ತರು ಸಮಸ್ಯೆಗಳು ಬಂದಾಗ ಪರಿಹಾರ ಪ್ರಯತ್ನಗಳು ಆಗಿರುವುದನ್ನು ಜನರ ಮುಂದೆ ತಿಳಿಸಬೇಕಾಗಿದೆ ಎಂದು ಸಂಸದ ಜಯಪ್ರಕಾಶ ಹೆಗ್ಡೆ ಹೇಳಿದ್ದಾರೆ.

ಜಿಲ್ಲಾ ಕಾಂಗ್ರೆಸ್‌ ಆಶ್ರಯದಲ್ಲಿ ನಡೆದ ಲೋಕಸಭಾ ಚುನಾವಣೆ ಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, ದೇಹದ ರಕ್ತದ ಕಣ ಇರುವ ವರೆಗೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಸಮಸ್ಯೆಗಳನ್ನು ಬಗೆಹರಿಸದೇ ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿಯೋರ್ವರು ಹೇಳಿರುವುದು ಎಲ್ಲರೂ ತಿಳಿದಿರುವ ವಿಚಾರ. ಆದರೆ ಇವತ್ತು ನಮ್ಮ ನಾಯಕರ ಪ್ರಯತ್ನದಿಂದ ರಾಜ್ಯ ಸರಕಾರ ಸಕ್ಕರೆ ಕಾರ್ಖಾನೆಯ ಕಾರ್ಮಿಕರಿಗೆ, ರೈತರಿಗೆ ಸ್ವಲ್ಪ ಅನುಕೂಲ ಆಗುವಂತೆ 12 ಕೋ.ರೂ. ಬಿಡುಗಡೆ ಮಾಡಿದೆ. ಇವತ್ತು ಬಿಜೆಪಿಯವರು ಅಡಿಕೆ ಬೆಳೆಗಾರರಿಗೆ ತೊಂದರೆ ಆಗುವಂತೆ ಕೇಂದ್ರ ಸರಕಾರ ವರ್ತಿಸುತ್ತಿದೆ ಎಂದು ಆಪಾದಿಸುತ್ತಾ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರಕಾರ ಎಲ್ಲಿಯೂ ಅಡಿಕೆಯನ್ನು ನಿಷೇಧಿಸುತ್ತದೆ ಎಂದು ಹೇಳಿಲ್ಲ. ಎನ್‌ಡಿಎ ಸರಕಾರ ಇದ್ದಾಗ ಯಾವ ಪ್ರಗತಿಯಾಗಿದೆ? ಪ್ರಸ್ತುತ ಕೇಂದ್ರದಲ್ಲಿ ಯುಪಿಎ ಸರಕಾರದ ಅಭಿವೃದ್ಧಿಗಳು ಏನು ಅನ್ನುವುದನ್ನು ಜನರ ಮುಂದೆ ಕಾರ್ಯಕರ್ತರು ತಿಳಿಸಬೇಕಾಗಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವ್ಯಾಪ್ತಿಯ ಎಲ್ಲ ಹತ್ತು ಬ್ಲಾಕ್‌ ಸಮಿತಿಗಳಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು. ಶಾಸಕ ಪ್ರಮೋದ್‌ ಮಧ್ವರಾಜ್‌ ಮತ್ತು ನಾಯಕರು ಪಾಲ್ಗೊಂಡಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com