ಜ. 26: ಜಿಎಸ್‌ಬಿ ಸಾಮಾಜಿಕ ಜಾಗೃತಿ ಸಮಾವೇಶ

ಉಡುಪಿ: ಉಡುಪಿ ಜಿಲ್ಲಾ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಜಿಎಸ್‌ಬಿ ಸಾಮಾಜಿಕ ಜಾಗೃತಿ ಸಮಾವೇಶ ಮತ್ತು ಸಮಾಜದ ಎರಡು ಮಹತ್ವದ ಪುಸ್ತಕಗಳ ವಿತರಣಾ ಕಾರ್ಯಕ್ರಮ ಜ. 26ರಂದು ಕಲ್ಯಾಣಪುರ ನೇಜಾರು ಮೈದಾನದಲ್ಲಿ ಜರಗಲಿದೆ.

ವೇದಿಕೆಯು ಕೈಗೊಂಡಿದ್ದ ಜಿಎಸ್‌ಬಿ ಜನಗಣತಿ ಕಾರ್ಯದ ಮಾಹಿತಿಗಳನ್ನು ಕ್ರೋಡೀಕರಿಸಿರುವ 'ಜಿಎಸ್‌ಬಿ ಡೈರೆಕ್ಟರಿ' ಮತ್ತು ಜಿಎಸ್‌ಬಿ ಸಮಾಜದ ಆಚಾರ ವಿಚಾರ ಅನುಷ್ಠಾನದ ಮಾಹಿತಿಗಳನ್ನೊಳಗೊಂಡ ಜಿಎಸ್‌ಬಿ ಸಂಸ್ಕೃತಿ-ಸಂಸ್ಕಾರಗಳ ಪುಸ್ತಕ 'ಅನಂತ ಸೌರಭ'ವನ್ನು ಜ. 14ರ ಮಕರ ಸಂಕ್ರಾಂತಿಯಂದು ನವಿಮುಂಬಯಿಯ ವಾಶಿಯ ಶ್ರೀ ಲಕ್ಷ್ಮೀವೇಕಂಟರಮಣ ದೇವಳದ ಮೊಕ್ಕಾಂನಲ್ಲಿರುವ ಶ್ರೀ ಕಾಶೀ ಮಠಾಧೀಶ ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿಯವರು ಬಿಡುಗಡೆಗೊಳಿಸಲಿದ್ದಾರೆ.

ಜ. 26ರ ಸಮಾವೇಶದಲ್ಲಿ ಇವುಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಜಿ. ಸತೀಶ್‌ ಹೆಗ್ಡೆ ಕೋಟ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

2012ರಲ್ಲಿ ಕೋಟೇಶ್ವರದಲ್ಲಿ ಜರಗಿದ್ದ ಬೃಹತ್‌ ಜಿಎಸ್‌ಬಿ ಸ್ವಾಭಿಮಾನ ಜಾಗೃತಿ ಸಮಾವೇಶದ ಅನಂತರ ಉಡುಪಿ ಜಿಲ್ಲಾ ಜಿಎಸ್‌ಬಿ ಹಿತರಕ್ಷಣಾ ವೇದಿಕೆಯು ಸಾಂಸ್ಥಿಕ ರೂಪ ಪಡೆದು ಕಳೆದೆರಡು ವರ್ಷಗಳ ನಿರಂತರ ಜನಸಂಪರ್ಕ ಮತ್ತು ಶ್ರಮದ ಫ‌ಲಸ್ವರೂಪವಾಗಿ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಯ ಸುಮಾರು 8,000 ಜಿಎಸ್‌ಬಿ ಕುಟುಂಬಗಳ ಯಜಮಾನರ ಹೆಸರು, ಕುಟುಂಬ ಸದಸ್ಯರ ಸಂಖ್ಯೆ, ಗೋತ್ರ, ಕುಲದೇವರು, ದೂರವಾಣಿ ಸಂಖ್ಯೆ ಮತ್ತು ವಿಳಾಸಗಳನ್ನೊಳಗೊಂಡ ಕುಟುಂಬ ಮಾಹಿತಿಯ ಡೈರೆಕ್ಟರಿಯನ್ನು ಸಿದ್ಧಪಡಿಸಿದೆ. ಇದು 8,750 ಪುಟಗಳನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್‌, ಸಂಚಾಲಕ ಆರ್‌. ವಿವೇಕಾನಂದ ಶೆಣೈ, ಜತೆ ಕಾರ್ಯದರ್ಶಿ ವಿನೋದ್‌ ಕಾಮತ್‌ ಕಲ್ಯಾಣಪುರ, ಸದಸ್ಯ ವಿದ್ಯಾನಂದ ಶರ್ಮಾ ಕಾರ್ಕಳ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com