ಎಂಡೋಪೀಡಿತ ವಿಕಲಚೇತನರ ಸಮಾವೇಶ

ಹೆಮ್ಮಾಡಿ: ವಿಕಲಚೇತನರ ಹಕ್ಕುಗಳ ರಾಷ್ಟ್ರೀಯ ವೇದಿಕೆಗೆ ಸಂಯೋಜಿಸಲ್ಪಟ್ಟ ರಾಜ್ಯ ವಿಕಲಚೇತನರ ಹಾಗೂ ಪಾಲಕರ ಒಕ್ಕೂಟದ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಎಂಡೋಸಲ್ಫಾನ್ ಪೀಡಿತ ವಿಕಲಚೇತನರ ಸಮಾವೇಶ ಹೆಮ್ಮಾಡಿ ಆದರ್ಶ ಯುವಕ ಮಂಡಲದ ಸಭಾಭವನದಲ್ಲಿ ಜರುಗಿತು. 

ರಾಜ್ಯ ವಿಕಲಚೇತನರ ಹಾಗೂ ಪಾಲಕರ ಒಕ್ಕೂಟದ ರಾಜ್ಯ ಅಧ್ಯಕ್ಷ ಜಿ.ಎನ್. ನಾಗರಾಜ ಸಮಾವೇಶ ಉದ್ಘಾಟಿಸಿ, ಎಂಡೋಪೀಡಿತರಿಗೆ ಜೀವನ ಸುಧಾರಣೆಗೆ ಬಜೆಟ್‌ನಲ್ಲಿ 20 ಕೋಟಿ ರೂ. ಮೀಸಲಿಟ್ಟಿದ್ದರೂ ಈ ತನಕ ಎಂಡೋ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಪಾಲನ ಕೇಂದ್ರ, ಮಾಸಾಶನ ಹೆಚ್ಚಳ, ಆರೋಗ್ಯ ಕೇಂದ್ರ ವ್ಯವಸ್ಥೆ ಇತ್ಯಾದಿ ಸೌಲಭ್ಯ ಕಲ್ಪಿಸದ ಸರಕಾರದ ಕ್ರಮ ಖಂಡನೀಯ ಎಂದರು. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೋ ಪೀಡಿತರ ಸರ್ವೆ ಕಾರ್ಯಪೂರ್ಣಗೊಂಡು, ಸಂತ್ರಸ್ತರ ಶಾಶ್ವತ ಪುನರ್ವಸತಿ ಕೇಂದ್ರ ತೆರೆಯುವ ಸಲುವಾಗಿ 5 ಎಕರೆ ನಿವೇಶನ ಸ್ಥಳ ಮಂಜೂರಾಗಿದೆ. ಆದರೆ ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಬೇಕು ಮತ್ತು ಶಾಶ್ವತ ಪುನರ್ವಸತಿ ಕೇಂದ್ರ ತೆರೆಯಲು ನಿವೇಶನ ಸ್ಥಳವನ್ನು ತಕ್ಷಣ ಗುರುತಿಸಬೇಕು ಎಂದು ಆಗ್ರಹಿಸಿದರು. 

ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಗೌರವಾಧ್ಯಕ್ಷ ವೆಂಕಟೇಶ ಕೋಣಿ ಮಾತನಾಡಿ, ವಿಕಲಚೇತನರು ಸೌಲಭ್ಯಗಳನ್ನು ಪಡೆಯಲು ಕೌಟುಂಬಿಕ ಆದಾಯವನ್ನು ಪರಿಗಣಿಸಬಾರದು. ಶೇ. 90ರಷ್ಟು ವಿಕಲಚೇತನತೆ ಇರುವ ವ್ಯಕ್ತಿಯ ಕೌಟುಂಬಿಕರು ಶ್ರೀಮಂತರಾಗಿದ್ದರೂ ಆತನ ಸ್ವಾಭಿಮಾನ ಜೀವನಕ್ಕೆ ಅವಕಾಶ ಸಿಗುತ್ತದೆ ಎಂದೇನಿಲ್ಲ. ಆದ್ದರಿಂದ ವಿಕಲಚೇತನರಿಗೆ ಸೌಲಭ್ಯ ನೀಡಲು ವ್ಯಕ್ತಿಯ ಆದಾಯವನ್ನಷ್ಟೇ ಪರಿಗಣಿಸಬೇಕು ಎಂದು ಆಗ್ರಹಿಸಿದರು. 

ಮಂಜುನಾಥ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಜಿ.ಎನ್. ಯಶಸ್ವಿ, ಅನಿತಾ ಪಡುವರಿ, ನಾಗರತ್ನ ನಾಡಾ, ಕೃಷ್ಣ ಬಿಲ್ಲವ ಕೋಟೇಶ್ವರ ಉಪಸ್ಥಿತರಿದ್ದರು. ಉಡುಪಿ ಜಿಲ್ಲೆಯಾದ್ಯಂತ ಎಂಡೋಸಲ್ಫಾನ್ ಬಾಧೆಗೊಳಪಟ್ಟ ವಿಕಲಚೇತನರನ್ನು ಸಂಘಟಿಸಿ ಫೆ.22ರಂದು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ವಿಕಲಚೇತನರ ಬೇಡಿಕೆ ಈಡೇರಿಸುವುದಕ್ಕೆ ಒತ್ತಾಯಿಸಲು ಸಮಾವೇಶದಲ್ಲಿ ತೀರ್ಮಾನಿಸಲಾಯಿತು. 

ಎಂಡೋಸಲ್ಫಾನ್ ಪೀಡಿತರ ಹೋರಾಟ ಸಮಿತಿಗೆ ಹರೀಶ್ (ಅಧ್ಯಕ್ಷ), ಕರುಣಾಕರ (ಕಾರ್ಯದರ್ಶಿ), ಸವಿತಾ, ಲಲಿತಾ, ಸುಜಾತ, ಸುಬ್ಬಕ್ಕ, ಶಹೀದಾ, ಪ್ರಕಾಶ, ಹರೀಶ ಉಡುಪ, ಕವಿತಾ ಶೇಟ್, ಶೆರೋನ್, ರೇಣುಕಾ, ಶ್ಯಾಮಲಾ, ಸಂತೋಷ ದೇವಾಡಿಗ, ಸ್ಟೀವನ್, ಚೇತನ್, ಉಮೇಶ ಅವರನ್ನು ಆಯ್ಕೆ ಮಾಡಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com