ತೊಂಬಟ್ಟು: ಕಾಡಾನೆ ಶೋಧಕ್ಕೆ ತಂಡ

ಸಿದ್ದಾಪುರ: ಅಮಾಸೆಬೈಲು ಗ್ರಾ. ಪಂ. ವ್ಯಾಪ್ತಿಯ ತೊಂಬಟ್ಟಿನ ಭಟ್ರಪಾಲು ಪರಿಸರದಲ್ಲಿ ಒಂಟಿಸಲಗವೊಂದು ದಾಳಿ ಮಾಡಿದ ಘಟನೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸೋಮವಾರ ಕೂಡಾ ಶೋಧ ಕಾರ್ಯ ಮುಂದುವರಿಸಿದೆ.

ಸಂಪರ್ಕಕ್ಕೆ ದೂರವಾಣಿ ಸಂಖ್ಯೆ

ಅರಣ್ಯ ಇಲಾಖೆ ಹಾಗೂ ವನ್ಯಜೀವಿ ವಿಭಾಗದ ಅಧಿಕಾರಿಗಳು ನಾಲ್ಕು ತಂಡಗಳಾಗಿ ಸೋಮವಾರ ಬೆಳಗ್ಗಿನಿಂದಲೇ ತೊಂಬಟ್ಟು, ಕೊರ್ತುಗುಂಡಿ, ಕಬ್ಬಿನಾಲೆ, ಕೆಲಾ ಮೊದಲಾದ ಭಾಗಗಳಲ್ಲಿ ಬಿರುಸಿನ ಶೋಧ ಕಾರ್ಯ ಮುಂದುವರಿಸಿದ್ದಾರೆ. ಅಂತೆಯೇ ಇಲಾಖಾಧಿಕಾರಿಗಳು ಈ ಭಾಗದ ಮನೆಗಳಿಗೆ ಭೇಟಿ ನೀಡಿ, ಭಯಭೀತರಾದ ಜನತೆಗೆ ಧೈರ್ಯ ತುಂಬುತ್ತಿದ್ದಾರೆ. ನಿರಂತರ ಸಂಪರ್ಕಕ್ಕಾಗಿ ಇಲಾಖೆಯ ದೂರವಾಣಿ ಸಂಖ್ಯೆ ನೀಡಿದ್ದಾರೆ.

ಶಿವಮೊಗ್ಗಕ್ಕೆ ತೆರಳಿರುವ ಸಾಧ್ಯತೆ

ಶುಕ್ರವಾರ ಮಧ್ಯ ರಾತ್ರಿ 3 ಗಂಟೆ ವೇಳೆ ಒಂಟಿಸಲಗ ತೊಂಬಟ್ಟಿನ ಭಟ್ರಪಾಲು ಸೀನಾ ಪೂಜಾರಿ ಅವರ ತೋಟ ಹಾಗೂ ಭತ್ತದ ಗದ್ದೆಗೆ ದಾಳಿ ಮಾಡಿತ್ತು. ಈ ಘಟನೆ ನಡೆದು ನಾಲ್ಕು ದಿನ ಕಳೆದಿವೆ. ಆನೆಗಳು ಕಾಡಿನಲ್ಲಿ ದಿನಕ್ಕೆ 10 ಕಿ. ಮೀ ದೂರ ಕ್ರಮಿಸಿರುವುದರಿಂದ ಇದು ತಾಲೂಕಿನ ಗಡಿ ದಾಟಿ ಶಿವಮೊಗ್ಗ ಜಿಲ್ಲೆಗೆ ಹೋಗಿರುವ ಸಾಧ್ಯತೆ ಇದೆ ಎಂದು ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ವಿನಯ ಕುಮಾರ್‌ ಅವರು ತಿಳಿಸಿದ್ದಾರೆ.

ವಲಯ ಅರಣ್ಯಾಧಿಕಾರಿ ವಿನಯ ಕುಮಾರ್‌, ಉಪ ವಲಯ ಅರಣ್ಯಾಧಿಕಾರಿಗಳಾದ ನರಸಿಂಗ್‌ ರಮೇಶ್‌ ಕಾಂಮೆÛ, ಅಮಾಸೆಬೈಲಿನ ಶ್ರೀಧರ ಗೌಡ ಇವರು ವನರಕ್ಷಕರೊಂದಿಗೆ ಪ್ರತ್ಯೇಕ ತಂಡಗಳಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಭಯ ಭೀತಿಯಲ್ಲಿ ಜನತೆ

ಉಡುಪಿ ಜಿಲ್ಲೆಯಲ್ಲಿ ಕಾಡಾನೆ ದಾಳಿ ಘಟನೆ ಅಪರೂಪ. ಆದುದರಿಂದ ಪಶ್ಚಿಮಘಟ್ಟದ ತಪ್ಪಲಿನ ಜನತೆ ಭಯಭೀತರಾಗಿದ್ದಾರೆ. ಒಂದೆಡೆ ನಕ್ಸಲ್‌ ಚಟುವಟಿಕೆಯಿಂದ, ಪೊಲೀಸ್‌ ಹಾಗೂ ನಕ್ಸಲರ ಭಯ. ಇನ್ನೊಂದೆಡೆ ಕಾಡು ಪ್ರಾಣಿಗಳ ಹಾವಳಿಯ ಭಯ. ಇವೆಲ್ಲದರ ನಡುವೆ ಕಾಡು ಆನೆಯ ಭಯದಿಂದಾಗಿ ಸಾಕಷ್ಟು ಜರ್ಝರಿತರಾಗಿದ್ದಾರೆ ತೊಂಬಟ್ಟು ಭಾಗದ ಜನತೆ. ಇದೇ ರೀತಿಯಲ್ಲಿ ಹೊಸ ಹೊಸ ಘಟನೆಗಳು ಸಂಭವಿಸುತ್ತಿದ್ದರೆ ತಮ್ಮ ಮುಂದಿನ ಜೀವನದ ಗತಿ ಏನೂ ಎನ್ನುವ ಸಂಕಟ ಈ ಭಾಗದ ಜನತೆಯನ್ನು ಕಾಡುತ್ತಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com