ಜ. 8 -10 ಮಹಿಳಾ ಸಮಾವೇಶ, ವಿಶ್ವ ಕೊಂಕಣಿ ನಾಟಕೋತ್ಸವ

ಮಂಗಳೂರು: ಕೊಂಕಣಿ ಭಾಷಾ ಮತ್ತು ಸಂಸ್ಕೃತಿ ಪ್ರತಿಷ್ಠಾನದ ವತಿಯಿಂದ ಕಮಲಾದೇವಿ ಚಟ್ಟೋಪಾಧ್ಯಾಯ - 110ರ ಸಂಭ್ರಮದ ಅಂಗವಾಗಿ ಮಹಿಳಾ ಸಾಹಿತ್ಯ ಸಮಾವೇಶ ಹಾಗೂ ವಿಶ್ವ ಕೊಂಕಣಿ ನಾಟಕೋತ್ಸವ ಜ. 8ರಿಂದ 10ರ ತನಕ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಸ್ತಿ ವಾಮನ ಶೆಣೈ ತಿಳಿಸಿದ್ದಾರೆ.

ನಾಟಕೋತ್ಸವ ಪ್ರತಿದಿನ ಸಂಜೆ 5.30ರಿಂದ ನಗರದ ಪುರಭವನದಲ್ಲಿ ನಡೆಯಲಿದೆ. 8ರಂದು ಮಾಂಡ್‌ ಸೊಭಾಣ್‌ ಸಂಸ್ಥೆಯ ಕಲಾಕುಲ್‌ ರೆಪರ್ಟರಿ ತಂಡದಿಂದ 'ಮಾಡ್ತಿರ ಭಗತ್‌ ಸಿಂಗ್‌', 9ರಂದು ಕುಂದಾಪುರ ಕುಳ್ಳಪ್ಪು ತಂಡದಿಂದ 'ರಂಗಮಂಟಪ', 10ರಂದು ಮುಂಬಯಿ ರಾಮ ಸೇವಕ ಸಂಘದಿಂದ 'ಆಮ್ನಿ ರಂಗಕರ್ಮಿ' ವಿರಚಿತ 'ಸತ್ಯಂ ವದ ಧರ್ಮಂ ಚರ' ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಕಮಲಾದೇವಿ ಅವರು ಭಾರತೀಯ ಮಹಿಳೆಯರ ಸ್ಥಿತಿಗತಿಗಳ ಉದ್ಧಾರಕ್ಕಾಗಿ ದೇಶದ ಮಹಿಳೆಯರನ್ನು ಒಗ್ಗೂಡಿಸಿ ಭಾರತೀಯ ಮಹಿಳಾ ಸಂಘಟನೆಗೆ ಕಾರಣರಾದರು. ಅದನ್ನು ನೆನಪಿಸುವ ಸಲುವಾಗಿ ವಿಶ್ವ ಕೊಂಕಣಿ ಕೇಂದ್ರ, ನ್ಯಾಶನಲ್‌ ಬುಕ್‌ ಟ್ರಸ್ಟ್‌ ಹೊಸದಿಲ್ಲಿ, ಕೊಂಕಣಿ ಭಾಷಾ ಮತ್ತು ಸಂಸ್ಕೃತಿ ಪ್ರತಿಷ್ಠಾನ, ಕರ್ನಾಟಕ ಲೇಖಕಿಯರ ಸಂಘ ಮತ್ತು ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಹಿಳಾ ಸಾಹಿತ್ಯ ಸಮಾವೇಶ 9 ಮತ್ತು 10ರಂದು ಬೆಳಗ್ಗೆ 10ಕ್ಕೆ ಜರಗಲಿದೆ ಎಂದರು.

ನೆಹರೂ ಮೈದಾನದಲ್ಲಿ ನಡೆಯುತ್ತಿರುವ ಎನ್‌ಬಿಟಿ ಮಂಗಳೂರು ಪುಸ್ತಕ ಮೇಳದ ಸಭಾ ಮಂಟಪದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಹಿರಿಯ, ಕಿರಿಯ ಸಾಹಿತಿಗಳು ಭಾಗವಹಿಸಲಿದ್ದಾರೆ. 11ರಂದು ಬೆಳಗ್ಗೆ 10 ಗಂಟೆಗೆ 'ಕೊಂಕಣಿ ಮಹಿಳಾ ಸಬಲೀಕರಣ' ಸಂವಾದ ಕಾರ್ಯಕ್ರಮ ಜರಗಲಿದೆ ಎಂದು ವಾಮನ ಶೆಣೈ ವಿವರಿಸಿದರು.

ಎನ್‌ಬಿಟಿ ಮಂಗಳೂರು ಪ್ರಾದೇಶಿಕ ಮುಖ್ಯಸ್ಥ ಅಮಿತ್‌ ಕರ್ಕಿ, ಕವಿತಾ ಟ್ರಸ್ಟ್‌ ಅಧ್ಯಕ್ಷ ಮೆಲ್ವಿನ್‌ ರೊಡ್ರಿಗಸ್‌ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com