ಸಮಗ್ರ ಕೃಷಿ ಮಾಹಿತಿ ರೈತರಿಗೆ ತಲುಪಿಸುವುದು ಕೃಷಿ ಮೇಳದ ಉದ್ದೇಶ: ಸೊರಕೆ

ಕೋಟೇಶ್ವರ: ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸುವುದರೊಡನೆ ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಮನವರಿಕೆ ಮಾಡುವುದು ಹಾಗೂ ವಿಜ್ಞಾನಿಗಳೊಡನೆ ರೈತರ ನೇರ ಸಂವಾದ ಏರ್ಪಡಿಸುವುದು ಜಿಲ್ಲಾ ಕೃಷಿ ಮೇಳದ ಮೂಲ ಉದ್ದೇಶ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್‌ ಸೊರಕೆ ಹೇಳಿದರು.

ಕೋಟೇಶ್ವರದ ಸರಕಾರಿ ಪದವಿ ಕಾಲೇಜು ಮೈದಾನದಲ್ಲಿ ಜ. 25 - 26ರಂದು ನೆಡೆಯಲಿರುವ 'ಉಡುಪಿ ಜಿಲ್ಲಾ ಮಟ್ಟದ ಕೃಷಿ ಉತ್ಸವ' ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೋಟೇಶ್ವರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ  ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕೃಷಿ ಉತ್ಸವದಲ್ಲಿ ಬೃಹತ್‌ ಫಲಪುಷ್ಪ ಪ್ರದರ್ಶನ, ಆಧುನಿಕ ಕೃಷಿ ಉಪಕರಣ, ಕೈ ಚಾಲಿತ ನಾಟಿ ಯಂತ್ರ, ರಿಮೋಟ್‌ ಅಪರೇಟೆಡ್‌ ಪವರ್‌ ಟಲ್ಲರ್‌ ಪ್ರಾತ್ಯಕ್ಷಿಕೆ, ಸ್ತಬ್ದಚಿತ್ರ ಮೆರವಣಿಗೆ, ಶ್ವಾನ - ಕುಕ್ಕುಟ ಪ್ರದರ್ಶನ, ಸಮಗ್ರ ಜಲಾನಯನ ಅಭಿವೃದ್ಧಿ ಪ್ರಾತ್ಯಕ್ಷಿಕೆ, ಗ್ರಾಮೀಣ ಆಟೋಟ ಸ್ಪರ್ಧೆ, ರೈತರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವ ಸಲಹಾ ಕೇಂದ್ರ, ವಿವಿಧ ಸರಕಾರಿ ಇಲಾಖೆಗಳ ಸೌಲಭ್ಯಗಳ ಮಾಹಿತಿ, ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಅನೇಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಜಿ.ಪಂ. ಅದ್ಯಕ್ಷ ಉಪೇಂದ್ರ ನಾಯಕ್‌, ಜಿ. ಪಂ. ಉಪಾಧ್ಯಕ್ಷೆ ಮಮತಾ ಶೆಟ್ಟಿ, ಉಪ ವಿಭಾಗಾಧಿಧಿಕಾರಿ ಯೋಗೀಶ್ವರ್‌, ತಹಶಿಲ್ದಾರ್‌ ಗಾಯಿತ್ರಿ ನಾಯಕ್‌, ಉಡುಪಿ ತಾ.ಪಂ. ಅಧ್ಯಕ್ಷೆ ಗೌರಿ ಪೂಜಾರಿ, ಜಿ. ಪಂ. ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧಕ್ಷ ಟಿ. ಗಣಪತಿ ಶ್ರೀಯಾನ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ ಇ. ಅಂಥೋಣಿ ಡಿಸೋಜಾ ಮೊದಲಾದವರು ಕೃಷಿ ಉತ್ಸವದ ಬಗ್ಗೆ ಚರ್ಚಿಸಿದರು.

* ಕೃಷಿಗೆ ಸಂಬಂಧಪಟ್ಟಂತೆ 200 ಸ್ಟಾಲ್‌ ನಿರ್ಮಿಸಿ ರೈತರಿಗೆ ಮಾಹಿತಿ

* ನಾಲ್ಕು ವಿಚಾರ ಗೋಷ್ಠಿ ಏರ್ಪಡಿಸಿ ಸಮಗ್ರ ಕೃಷಿ ಪದ್ಧತಿ, ಕೃಷಿಯಲ್ಲಿ ಯಾಂತ್ರಿಕರಣ ಹಾಗೂ ಯಾಂತ್ರಿಕರಣದ ಸವಾಲು, ಹೈಟೆಕ್‌ ಕೃಷಿ ಬಗ್ಗೆ ವಿವರಣೆ

* ಭತ್ತ ನಾಟಿ ಯಂತ್ರ, ಶ್ರೀ ಪದ್ಧತಿ ಬಗ್ಗೆ ಪ್ರಾತ್ಯಕ್ಷಿಕೆ

* ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡರಿಂದ ಉದ್ಘಾಟನೆ

* ವಾರ್ತಾ ಇಲಾಖೆ ವತಿಯಿಂದ ಆರೋಗ್ಯ, ನೈರ್ಮಲ್ಯ, ಪೌಷ್ಠಿಕ ಆಹಾರ, ಮಹಿಳಾ ಸಶಕ್ತೀಕರಣ, ಗ್ರಾಮೀಣ ಅಭಿವೃದ್ಧಿ ವಿಚಾರಗಳ ಬಗ್ಗೆ ಚಲನಚಿತ್ರ ಪ್ರದರ್ಶನ

* ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದಿಂದ ವಿವಿಧ ಸ್ತಬ್ದ ಚಿತ್ರಗಳನ್ನೊಳಗೊಂಡ ಮೆರವಣಿಗೆ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com