ಕುಂದಾಪುರ ತಾಲೂಕು ಪ್ರಗತಿ ಪರಿಶೀಲನಾ ಸಭೆ

ಕುಂದಾಪುರ: ಕುಡಿಯುವ ನೀರು, ಬಿಪಿಎಲ್‌ ಕಾರ್ಡ್‌ ವಿತರಣೆ, ಮನೆ ನಿವೇಶನ, ಕಸ್ತೂರಿ ರಂಗನ್‌ ವರದಿ ಪರಿಷ್ಕರಣೆ ಮೊದಲಾದ ವಿಷಯಗಳ ಬಗ್ಗೆ ಸೋಮವಾರ ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್‌ ಸೊರಕೆ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಿತು.

ವಿದ್ಯಾಮಾನ ಮರುಕಳಿಸಬಾರದು

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಮಗ್ರ ಚರ್ಚೆ ನಡೆಸಲಾಯಿತು ಬೇಸಿಗೆಯ ಕೊನೆ ದಿನಗಳಲ್ಲಿ ತಾಲೂಕಿನ ವಿವಿಧ ಕಡೆಗಳಲ್ಲಿ ಕಳೆದ ವರ್ಷ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗಿದ್ದು, ಈ ವರ್ಷ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವ ಯಾವುದೇ ವಿದ್ಯಾಮಾನ ಮರುಕಳಿಸಬಾರದು. ಕಳೆದ ಬಾರಿ ಟ್ಯಾಂಕರ್‌ ಮೂಲಕ ಸರಬರಾಜು ಮಾಡಿದ ಸ್ಥಳವನ್ನು ಗುರುತಿಸಿಕೊಳ್ಳುವಂತೆ ಜಿ.ಪಂ. ಕುಂದಾಪುರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಸಚಿವರು ಸೂಚಿಸಿದರು.

ಎಂಜಿನಿಯರ್‌ ತರಾಟೆಗೆ

ವಿವಿಧ ಗ್ರಾ. ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರು ಹಾಗೂ ಕುಡಿಯುವ ಉಪ್ಪು ನೀರಿನ ಸಮಸ್ಯೆ, ಕೊಳವೆ ಅಳವಡಿಸಿದ್ದರೂ ಪಂಪ್‌ ಅಳವಡಿಸದೇ ಇರುವುದು ಮೊದಲಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಅಂಪಾರಿನಲ್ಲಿ ಪಂಪ್‌ ಅಳವಡಿಕೆ ಬಗ್ಗೆ ಎಂಜಿನಿಯರಿಂಗ್‌ ವಿಭಾಗದ ನಿರ್ಲಕ್ಷದ ಬಗ್ಗೆ ಗ್ರಾ. ಪಂ.ಅಭಿವೃದ್ಧಿ ಅಧಿಕಾರಿ ಸಚಿವರ ಗಮನಕ್ಕೆ ತಂದರು. ಈ ಸಂದರ್ಭ ಎಂಜಿನಿಯರ್‌ನ್ನು ಸಚಿವರು ತರಾಟೆಗೆ ತೆಗೆದುಕೊಂಡರು.

ಚರ್ಚಿಸಿ ಪರಿಹರಿಸಲು ಸೂಚನೆ

ಮಡಾಮಕ್ಕಿಯಲ್ಲಿ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಇಲಾಖೆಗಳ ನಡುವೆ ಸಮಸ್ಯೆಗಳಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸುವಂತೆ ಸೂಚಿಸಲಾಯಿತು. ಜಪ್ತಿಯಲ್ಲಿ ನಿವೇಶನ ಹಕ್ಕುಪತ್ರ ಸಿದ್ಧವಾಗಿದ್ದರೂ ವಿತರಣೆಯಲ್ಲಿ ಮೀನ ಮೇಷ ಮಾಡಲಾಗುತ್ತಿದೆ ಎನ್ನುವ ಆರೋಪಕ್ಕೆ ಗಂಭೀರವಾದ ಸಚಿವ ತತ್‌ಕ್ಷಣ ಹಕ್ಕು ಪತ್ರ ವಿತರಿಸುವಂತೆ ಸೂಚಿಸಿದರು.

ಸಮಸ್ಯೆ ಇತ್ಯರ್ಥಕ್ಕೆ ಆದೇಶ

ತಾಲೂಕಿನಾದ್ಯಂತ ಬಿಪಿಎಲ್‌ ಕಾರ್ಡ್‌ ವಿತರಣೆ ವಿಳಂಬವಾಗುತ್ತದೆ ಎಂದು ಪಿಡಿಒ, ಕಾರ್ಯದರ್ಶಿಗಳು ದೂರಿದಾಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳನ್ನು ಸಚಿವರು ತರಾಟೆ ತೆಗೆದುಕೊಂಡರು. ಶೇ. 75ರಷ್ಟು ಬಿಪಿಎಲ್‌ ಕಾರ್ಡ್‌ ಕೊಡಲು ಅವಕಾಶವಿದ್ದರೂ ಬಹುತೇಕ ಪಂಚಾಯತ್‌ಗಳಲ್ಲಿ ಶೇ. 65 ಕೂಡ ಆಗದೇ ಇರುವುದಕ್ಕೆ ಕಾರಣ ಎಂದು ಸಚಿವರು ಅಸಮಾಧಾನ ಸೂಚಿಸಿದರು. ಅಲ್ಲದೇ ತಹಶಿಲ್ದಾರ್‌ ಅವರಿಗೆ ಕೂಡಲೇ ಸಮಸ್ಯೆ ಇತ್ಯರ್ಥಗೊಳಿಸಿ ಎಂದು ಆದೇಶ ನೀಡಿದರು.

ಮೆಸ್ಕಾಂ ಅಧಿಕಾರಿಯವರಲ್ಲಿ ಕೇಳಿ

ವಾರಾಹಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ/ಪಂಗಡಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿದ್ದರೂ ಮಾಡದೇ ಇರುವುದಕ್ಕೆ ಕಾರಣ ಏನು ಎಂದು ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ವಾರಾಹಿ ಅಧಿಕಾರಿ, 16 ಕಡೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ ಎಂದರು. ಇದರಿಂದ ಆಕ್ರೋಶಗೊಂಡ ಶಾಸಕ ಪ್ರತಾಪ್‌ಚಂದ್ರ ಶೆಟ್ಟಿ ಸುಳ್ಳು ಹೇಳಬೇಡಿ, ಮೆಸ್ಕಾಂ ಅಧಿಕಾರಿಯವರಲ್ಲಿ ಕೇಳಿ ಎಂದರು.

ಕಸ್ತೂರಿ ರಂಗನ್‌ ವರದಿ ಪರಿಷ್ಕರಣೆ

ಡೀಮ್ಡ್ ಫಾರೆಸ್ಟ್‌ ವಲಯವನ್ನು ಸೆಟಲೈಟ್‌ ಆಧಾರದ ಮೂಲಕ ದಾಖಲು ಮಾಡಲಾಗಿದ್ದು, ಕಸ್ತೂರಿ ರಂಗನ್‌ ವರದಿ ಆಧಾರದಲ್ಲಿ ಕುಂದಾಪುರ, ಹೊಸನಗರ, ಉತ್ತರ ಕನ್ನಡ ಹೀಗೇ ಹಲವು ಗ್ರಾಮೀಣ ಪ್ರದೇಶಗಳು ಡೀಮ್ಡ್ ಫಾರೆಸ್ಟ್‌ನೊಳಗೆ ಸಿಲುಕಿಕೊಂಡಿವೆ. ಆದುದರಿಂದ ಈ ಸಮಸ್ಯೆಗೆ ಒಳಗಾದ ಪ್ರತಿ ಗ್ರಾ.ಪಂ.ನಲ್ಲಿ ತುರ್ತು ಗ್ರಾಮ ಸಭೆ ನಡೆಸಿ ಕಸ್ತೂರಿರಂಗನ್‌ ವರದಿ ಪರಿಷ್ಕರಣೆಗೆ ಸೇರಿಸಬೇಕಾದ ಒಟ್ಟೂ ಅಂಶಗಳನ್ನು ಪಟ್ಟಿ ಮಾಡಬೇಕಾಗಿದೆ ಎಂದು ಸಚಿವರು ಸೂಚಿಸಿದರು.

ಉಳಿದಂತೆ ಪಶು ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹುದ್ದೆ ಭರ್ತಿ, ಕೊಳೆರೋಗಕ್ಕೆ ಪರಿಹಾರ ಮೊದಲಾದ ವಿಷಯಗಳ ಬಗ್ಗೆ ಸಮಗ್ರ ಚರ್ಚೆ ನಡೆಸಲಾಯಿತು.

ತಾ.ಪಂ. ಅಧ್ಯಕ್ಷೆ ದೀಪಿಕಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಅಧ್ಯಕ್ಷೆ ಕಲಾವತಿ, ಉಪವಿಭಾಗಧಿಕಾರಿ ಎಸ್‌. ಯೋಗೇಶ್ವರ್‌, ತಹಶಿಲ್ದಾರ್‌ ಗಾಯತ್ರಿ ನಾಯಕ್‌, ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಎಡೋಲೊ³ಸ್‌ ಫೆರ್ನಾಂಡಿಸ್‌ ಮೊದಲಾದವರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com