ನಗರಾಭಿವದ್ಧಿ ಸಚಿವಾಲಯದ ಆದೇಶದಿಂದ ಬಡವರಿಗೆ ಕುತ್ತು: ಮೋಹನದಾಸ ಶೆಣೈ

ಕುಂದಾಪುರ: ನಗರಾಭಿವದ್ಧಿ ಸಚಿವಾಲಯ ಹೊರಡಿಸಿರುವ ಹೊಸ ಆದೇಶ ನಗರ ಪ್ರದೇಶದಲ್ಲಿ ನೆಲೆಸಿರುವ ಬಡವರ ಪಾಲಿಗೆ ಕಂಠಕವಾಗಿ ಪರಿಣಮಿಸಿದೆ. 5 ಸೆಂಟ್ಸ್ ಜಾಗ ಹೊಂದಿರುವವರು ಅದರಲ್ಲಿ ಶೇ.15ರಷ್ಟು ಭೂಮಿ ಸರಕಾರಿ ಉದ್ದೇಶಕ್ಕೆ ನೀಡಬೇಕೆಂಬ ಸುತ್ತೋಲೆ ಅವೆಜ್ಞಾನಿಕ. ಈ ಬಗ್ಗೆ ಸಾಕಷ್ಟು ಗೊಂದಲ ಎದುರಾಗಿದ್ದು ನಗರ ಪ್ರಾಧಿಕಾರ ಅಧಿಕಾರಿಗಳು ಉತ್ತರ ನೀಡಬೇಕು ಎಂದು ಪುರಸಭೆ ಹಿರಿಯ ಸದಸ್ಯ ಮೋಹನದಾಸ ಶೆಣೈ ಆಗ್ರಹಿಸಿದರು. 

ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕಡುಬಡವರು ಇರುವ ಕಿರು ಭೂಮಿಯಲ್ಲಿ ಸರಕಾರಕ್ಕೆ ನೀಡಬೇಕೆಂಬ ಸುತ್ತೋಲೆ ಸರಕಾರದ ಜನವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಈ ಸುತ್ತೋಲೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದರು. 

ಸದಸ್ಯರ ಆಗ್ರಹಕ್ಕೆ ಸ್ಪಂದಿಸಿದ ಸಭಾಧ್ಯಕ್ಷರು ಈ ಬಗ್ಗೆ ಚರ್ಚಿಸಲು ನಗರ ಪ್ರಾಧಿಕಾರ ಅಧಿಕಾರಿಗಳ ವಿಶೇಷ ಸಭೆ ಶೀಘ್ರದಲ್ಲಿಯೇ ಕರೆಯಲಾಗುವುದು ಎಂದರು. 

ಮೀನು ಮಾರುಕಟ್ಟೆ ನರಕ: ಸುಂದರ ಕುಂದಾಪುರ ಎಂಬ ಹಣೆಪಟ್ಟಿಯೊಂದಿಗೆ ಮುನ್ನಡೆಯುತ್ತಿರುವ ಕುಂದಾಪುರ ನಗರಕ್ಕೆ ಮೀನು ಮಾರುಕಟ್ಟೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಮೀನು ಮಾರುಕಟ್ಟೆ ತ್ಯಾಜ್ಯ ಮತ್ತು ಅಲ್ಲಿನ ವಾತಾವರಣ ಕೊಳೆಗೇರಿಯನ್ನು ನೆನಪಿಸುತ್ತಿದೆ. ಪುರಸಭೆ ಆಡಳಿತದ ನಿರ್ಲಕ್ಷವ್ಯವೇ ಇದಕ್ಕೆ ಕಾರಣ. ಕೋಟ್ಯಾಂತರ ರೂ. ವೆಚ್ಚದಲ್ಲಿ ಮೀನು ಮಾರುಕಟ್ಟೆ ನಿರ್ಮಾಣಗೊಂಡಿದ್ದರೂ ಸೂಕ್ತ ನಿರ್ವಹಣೆಯಿಲ್ಲದಿರುವುದರಿಂದ ಈ ಅವ್ಯವಸ್ಥೆ ಸಷ್ಟಿಯಾಗಿದೆ ಎಂದು ಸದಸ್ಯ ರಾಜೇಶ್ ಕಾವೇರಿ ದೂರಿದರು. ಸದಸ್ಯ ಶ್ರೀಧರ ಶೇರೆಗಾರ್ ಧ್ವನಿಗೂಡಿಸಿದರು. 

ಕಟ್ಟಡ ದುರ್ಬಳಕೆ ಆಕ್ರೋಶ: ಹೊಸ ಬಸ್ ನಿಲ್ದಾಣದಲ್ಲಿರುವ ಪುರಸಭೆ ವಾಣಿಜ್ಯ ಸಂಕೀರ್ಣದಲ್ಲಿ ಬಾಡಿಗೆ ಪಡೆದುಕೊಂಡಿರುವ ವ್ಯಕ್ತಿಯೊಬ್ಬರು ಕಟ್ಟಡವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ತಮ್ಮ ಇಷ್ಟಕ್ಕನುಗುಣವಾಗಿ ಕಟ್ಟಡದ ಒಳಭಾಗದಲ್ಲಿ ಅಭಿವದ್ಧಿಪಡಿಸಿಕೊಂಡಿದ್ದಾರೆ. ಇದು ಕಾನೂನು ಬಾಹಿರ ಎಂದು ಸದಸ್ಯ ಚಂದ್ರಶೇಖರ ಖಾರ್ವಿ ಆಕ್ರೋಶ ಹೊರಗೆಡಹಿದರು. ಸದಸ್ಯರ ಆರೋಪಕ್ಕೆ ತಿರುಗೇಟು ನೀಡಿದ ಬಿಜೆಪಿ ಸದಸ್ಯ ರವಿರಾಜ ಖಾರ್ವಿ ಅವರು ಅನುಮತಿ ಪಡೆದುಕೊಂಡೆ ಅಭಿವದ್ಧಿ ಮಾಡಿದ್ದಾರೆ. ಆಕ್ಷೇಪ ಸರಿಯಲ್ಲ ಎಂದರು. ಈ ವಿಷಯದಲ್ಲಿ ಸದಸ್ಯರ ನಡುವೆ ಪರಸ್ಪರ ವಾಗ್ವಾದ ನಡೆಯಿತು. ಯಾರ್ಯಾರದ್ದೊ ಅನುಕೂಲಕ್ಕೆ ತಕ್ಕಂತೆ ಪುರಸಭೆ ಕೆಲಸ ನಿರ್ವಹಿಸುವುದಾದರೆ ನಮ್ಮ ಅವಶ್ಯಕತೆ ಏನಿದೆ ಎಂದು ಸದಸ್ಯ ಶ್ರೀಧರ ಶೇರೆಗಾರ್ ಪ್ರಶ್ನಿಸಿದರು. ಸದಸ್ಯರ ವಾಕ್ಸಮರ ತಾರಕಕ್ಕೇರಿದ ಬಳಿಕ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. 

ಕುಂದಾಪುರ ನಗರ ಪ್ರಾಧಿಕಾರ ಏಕೆ: ಕುಂದಾಪುರಕ್ಕೆ ನಗರ ಪ್ರಾಧಿಕಾರ ಬೇಕೆ ಎಂದು ಸದಸ್ಯ ವಿಜಯ ಪೂಜಾರಿ ಕೇಳಿದ ಪ್ರಶ್ನೆ ಚರ್ಚೆಗೆ ಗ್ರಾಸ ಒದಗಿಸಿತು. ಸದಸ್ಯ ಶ್ರೀಧರ ಶೇರೆಗಾರ್ ಧ್ವನಿಗೂಡಿಸಿ ನಗರ ಪ್ರಾಧಿಕಾರ ಅಧಿಕಾರಿಗಳು ವಾರದಲ್ಲಿ 2 ದಿನ ಇಲ್ಲಿ ಸೇವೆ ನೀಡಬೇಕೆಂಬ ನಿಯಮವಿದ್ದರೂ ಪಾಲನೆಯಾಗುತ್ತಿಲ್ಲ. ಜನರ ಸೇವೆಗೆ ಅವರು ಸಿಗುತ್ತಿಲ್ಲ. ಅವರ ಕಡ್ಡಾಯ ಹಾಜರಾತಿಗೆ ಕ್ರಮ ತೆಗೆದುಕೊಳ್ಳಬೇಕು. ನಗರ ಪ್ರಾಧಿಕಾರದಿಂದ ಸಾಕಷ್ಟು ಸಮಸ್ಯೆ ಉದ್ಭವಿಸಿದೆ ಎಂದರು. ಇತರೆ ಸದಸ್ಯರು ಈ ವಿಷಯವಾಗಿ ತಮ್ಮ ನಿಲುವು ಮಂಡಿಸಿದರು. 

ಮದ್ಯದಂಗಡಿಗಳ ವಿರುದ್ಧ ಕ್ರಮ ಜರುಗಿಸಿ: ನಾಗರಿಕರ ಸ್ವಾಸ್ಥ್ಯ ಕೆಡಿಸುವ ಪ್ರಾತಃಕಾಲ 5 ಗಂಟೆಗೆ ಬಾಗಿಲು ತೆರೆಯುವ ಮದ್ಯದಂಗಡಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸದಸ್ಯ ಚಂದ್ರಶೇಖರ ಖಾರ್ವಿ ಒತ್ತಾಯಿಸಿದರು. ಕುಂದಾಪುರ ನಗರದಲ್ಲಿ ಕೆಲವೊಂದು ಬಾರ್‌ಗಳು ಬೆಳಗ್ಗೆ 5 ಗಂಟೆಗೆ ಬಾಗಿಲು ತೆರೆಯುತ್ತಿವೆ. ಇದು ಪರಿಸರದ ಕೆಟ್ಟ ವಾತಾವರಣಕ್ಕೆ ಕಾರಣವಾಗಿದೆ ಎಂದು ತಿಳಿಸಿದರು. 

ಎನ್‌ಪಿಆರ್ ಮಾಹಿತಿ ಇಲ್ಲ: ರಾಷ್ಟ್ರೀಯ ಜನಸಂಖ್ಯಾ ನೊಂದಣೆ ಕುರಿತು ಪುರಸಭೆಗೆ ತಹಸೀಲ್ದಾರ್ ಮಾಹಿತಿ ರವಾನಿಸಿದ್ದರೂ ಸದಸ್ಯರಿಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಸದಸ್ಯೆ ಪುಷ್ಪಾ ಶೇಟ್ ಮುಖ್ಯಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡರು. ಪುರಸಭೆಯಲ್ಲಿಯೂ ಆರ್‌ಟಿಸಿ ನೀಡುವಿಕೆ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಮೋಹನದಾಸ ಶೆಣೆ ಒತ್ತಾಯಿಸಿದರು. ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳ ರಸ್ತೆ ನಿರ್ವಹಣೆಗೆ ಹೆಂಚಿನ ತುಂಡು ಪೂರೆಕೆ ವಿಷಯ ಸಭೆಯಲ್ಲಿ ರಾದ್ಧಾಂತ ಸಷ್ಟಿಸಿತು. ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ನೌಕರರಿಗೆ ಸರಿಯಾಗಿ ಉದ್ಯೋಗ ನೀಡದೆ ಅವರಿಗೆ ಅನ್ಯಾಯ ಎಸಗಲಾಗುತ್ತಿದೆ ಎಂದು ಸದಸ್ಯರು ಆರೋಪಿಸಿದರು. 

ಪುರಸಭೆ ಅಧ್ಯಕ್ಷೆ ಕಲಾವತಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಾಗರಾಜ ಕಾಮಧೇನು, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಮೆಂಡನ್, ಮುಖ್ಯಾಧಿಕಾರಿ ಸದಾನಂದ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com