ಸಿಆರ್‌ಝಡ್‌ ಸಮಸ್ಯೆ ಕುರಿತು ಸಮಗ್ರವಾಗಿ ಚರ್ಚಿಸಲಾಗುವುದು : ಸಚಿವ ಸೊರಕೆ

ಕುಂದಾಪುರ: ಕರಾವಳಿ ಪ್ರದೇಶದ ಜನರು ಹಾಗೂ ಮೀನುಗಾರರನ್ನು ಬಾಧಿಸುತ್ತಿರುವ ಕರಾವಳಿ ನಿಯಂತ್ರಣ ವಲಯದ ಅಧಿಸೂಚನೆಯಲ್ಲಿ ತಿದ್ದುಪಡಿ ತರಬೇಕು ಹಾಗೂ ಕೆಲವು ಅಂಶಗಳನ್ನು ಸರಳೀಕರಿಸಬೇಕು ಎನ್ನುವ ಜನರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಬೆಂಗಳೂರಿನಲ್ಲಿ ಜ. 23ರಂದು ಜರಗುವ ಕಸ್ತೂರಿರಂಗನ್‌ ವರದಿ ಕುರಿತ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗುವುದು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ ಹೇಳಿದರು.

ಅವರು ಕುಂದಾಪುರದ ಆರ್‌.ಎನ್‌. ಶೆಟ್ಟಿ ಸಭಾಭವನದಲ್ಲಿ ಉಡುಪಿ ಜಿಲ್ಲಾ ರೈತ ಸಂಘ, ಹುಯ್ನಾರು ಪಟೇಲ್‌ ಚಾರಿಟೆಬಲ್‌ ಟ್ರಸ್ಟ್‌ ಅಂಪಾರು ವಲಯ ರೈತ ಸಂಘದ ಘಟಕ ಹಾಗೂ ಕುಂದಾಪುರ ತಾಲೂಕು ಪಂಚಾಯತ್‌ ರಾಜ್‌ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ನಡೆದ ಸಿಆರ್‌ಝಡ್‌ನ‌ ಸಾಧಕ-ಬಾಧಕ ಕಾರ್ಯಾಗಾರದಲ್ಲಿ ಮಾತನಾಡಿದರು.

ಸಿಆರ್‌ಝಡ್‌ ಸಮಸ್ಯೆಯ ಬಗ್ಗೆ ರಾಜ್ಯ ಸರಕಾರದ ಮೂಲಕ ಕೇಂದ್ರ ಸರಕಾರಕ್ಕೆ ಸೂಕ್ತ ಮಾಹಿತಿ ನೀಡುವಲ್ಲಿ ನಾವು ಎಡವಿದ್ದೇವೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸಭೆಯಲ್ಲಿ ಜನರ ಬೇಡಿಕೆ ಹಾಗೂ ತೊಂದರೆಗಳನ್ನು ರಾಜ್ಯಮಟ್ಟದಲ್ಲಿ ತಿಳಿಯಪಡಿಸುವ ಅಗತ್ಯ ಇದೆ ಎಂದರು.

ಸ್ಪಂದನೆ - ಜವಾಬ್ದಾರಿ

ಕಾರ್ಯಾಗಾರದಲ್ಲಿ ಮಾತನಾಡಿದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪ್‌ಚಂದ್ರ ಶೆಟ್ಟಿ ಅವರು ಕರಾವಳಿ ಭಾಗದ ರೈತರ, ಮೀನುಗಾರರ ಹಾಗೂ ಸಾಮಾನ್ಯ ಜನರ ಬೇಡಿಕೆಗಳ ಪರಿಹಾರಕ್ಕೆ ಪ್ರತಿಯೊಬ್ಬ ಜನಪ್ರತಿನಿಧಿಯೂ ಸ್ಪಂದಿಸಬೇಕಾದ ಜವಾಬ್ದಾರಿ ಇದೆ. ಕೊಂಕಣ ರೈಲು, ರಾಷ್ಟ್ರೀಯ ಹೆದ್ದಾರಿ ಮೊದಲಾದ ಯೋಜನೆಗಳ ಅಭಿವೃದ್ಧಿ ಕಾರ್ಯದಲ್ಲಿ ಸ್ಥಳ ಕಳೆದುಕೊಂಡ ಜನರಿಗೆ ಸರಕಾರ ಹೇಗೆ ಪರಿಹಾರವನ್ನು ನೀಡುತ್ತದೋ ಅದೇ ರೀತಿ ಸಿಆರ್‌ಝಡ್‌ನಿಂದ ತೊಂದರೆಗೀಡಾದ ಜನರಿಗೂ ಸೂಕ್ತ ಪರಿಹಾರ ನೀಡಬೇಕಾಗಿದೆ ಎಂದರು.

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಾಗಾರವನ್ನು ಉದ್ಘಾಟಿಸಿದರು, ಶಾಸಕ ಕೆ. ಗೋಪಾಲ ಪೂಜಾರಿ, ಜಿ.ಪಂ. ಸದಸ್ಯರಾದ ಬಾಬು ಶೆಟ್ಟಿ ತಗ್ಗರ್ಸೆ, ಗಣಪತಿ ಟಿ. ಶ್ರೀಯಾನ್‌, ಗೌರಿ ದೇವಾಡಿಗ, ತಾ.ಪಂ. ಅಧ್ಯಕ್ಷೆ ದೀಪಿಕಾ ಎಸ್‌ ಶೆಟ್ಟಿ, ಪುರಸಭಾಧ್ಯಕ್ಷೆ ಕಲಾವತಿ ಯು.ಎಸ್‌., ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಿವರಾಮ ಶೆಟ್ಟಿ ಮಲ್ಯಾಡಿ, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ರಾಜೇಶ್‌ ಕಾವೇರಿ, ಜಿಲ್ಲಾ ರೈತ ಸಂಘಟನೆಯ ರಾಜು ಎಸ್‌. ಪೂಜಾರಿ, ಎಸ್‌. ಪ್ರಕಾಶ್ಚಂದ್ರ ಶೆಟ್ಟಿ, ವಿಕಾಸ ಹೆಗ್ಡೆ, ತಾ.ಪಂ. ಸದಸ್ಯರಾದ ಕೆದೂರು ಸದಾನಂದ ಶೆಟ್ಟಿ, ಪ್ರದೀಪ್‌ ಕುಮಾರ ಶೆಟ್ಟಿ, ಮಂಜು ಬಿಲ್ಲವ, ದೀಪಕ್‌ ಕುಮಾರ ಶೆಟ್ಟಿ, ಭಾಸ್ಕರ ಬಿಲ್ಲವ, ಪ್ರಸನ್ನ ಕುಮಾರ, ಸಿಆರ್‌ಝಡ್‌ ಪ್ರಾದೇಶಿಕ ಕಚೇರಿಯ ಪ್ರಭಾರ ನಿರ್ದೇಶಕ ಅಶೋಕ ಭಟ್‌, ಮೀನುಗಾರಿಕ ಇಲಾಖೆಯ ಸಹಾಯಕ ನಿರ್ದೇಶಕ ಗಣೇಶ್‌ ಇದ್ದರು.

ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಸಂತ್ರಸ್ತರು ಹಾಗೂ ವಿವಿಧ ಸಂಘಟನೆಯ ಪ್ರಮುಖರು ಸಿಆರ್‌ಝಡ್‌ನ‌ ತೊಡಕು ಹಾಗೂ ಸಮಸ್ಯೆಯ ಬಗ್ಗೆ ಸಭೆಯ ಮುಂದಿಟ್ಟರು.

ಪಂಚಾಯತ್‌ರಾಜ್‌ ತಜ್ಞ ಜನಾರ್ದನ್‌ ಎಸ್‌. ಪ್ರಸ್ತಾವನೆಗೈದರು. ರೈತ ಸಂಘದ ಅಂಪಾರು ಘಟಕದ ಅಧ್ಯಕ್ಷ ಸಂತೋಷ್‌ ಕುಮಾರ ಶೆಟ್ಟಿ ಸ್ವಾಗತಿಸಿದರು, ಜಿಲ್ಲಾ ರೈತ ಸಂಘಟನೆಯ ರಾಜೇಶ್‌ ಕೆ.ಸಿ. ನಿರೂಪಿಸಿದರು. ಪಂಚಾಯತ್‌ ರಾಜ್‌ ಒಕ್ಕೂಟದ ಅಧ್ಯಕ್ಷ ಉದಯ್‌ಕುಮಾರ ಶೆಟ್ಟಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com