ಬೈಂದೂರಿನಲ್ಲಿ ಮಹಿಳಾ ಗೃಹರಕ್ಷಕ ದಳ ಘಟಕ

ಉಡುಪಿ: ಜಿಲ್ಲೆಯ ಬೈಂದೂರು ಮತ್ತು ಕಾಪುವಿನಲ್ಲಿ ಬೇಡಿಕೆಯಂತೆ ಗೃಹರಕ್ಷಕ ದಳ ಮಹಿಳಾ ಘಟಕವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಅಲ್ಲದೆ ಬಾರಕೂರು, ಕೋಟ, ಶಂಕರನಾರಾಯಣ ಮತ್ತು ಶಿರ್ವದಲ್ಲಿ ಗೃಹರಕ್ಷಕ ದಳದ ಘಟಕ ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಗೃಹರಕ್ಷಕ ದಳದ ನೂತನ ಕಮಾಂಡೆಂಟ್‌ ಡಾ| ಕೆ. ಪ್ರಶಾಂತ್‌ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 'ಗೃಹರಕ್ಷಕದಳಕ್ಕೆ ಮಹಿಳೆಯರು ಕೂಡ ಸೇರ್ಪಡೆಗೊಳ್ಳುತ್ತಿದ್ದಾರೆ. ಆದರೆ ಅವರಿಗೆ ಪ್ರತ್ಯೇಕ ಘಟಕಗಳನ್ನು ಸ್ಥಾಪಿಸಬೇಕೆಂಬ ಬೇಡಿಕೆ ಇದೆ' ಎಂದರು.

ಜಿಲ್ಲೆಯಲ್ಲಿ 450 ಗೃಹರಕ್ಷಕರ ನೇಮಕಕ್ಕೆ ಮಂಜೂರಾತಿ ದೊರೆತಿದೆ. ಪ್ರಸ್ತುತ 350 ಮಂದಿ ಗೃಹರಕ್ಷಕರು ನೋಂದಾಯಿತ ಪಟ್ಟಿಯಲ್ಲಿದ್ದು 200 ಮಂದಿ ಇಲಾಖಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದಾರೆ. 20ರಿಂದ 45 ವರ್ಷ ವಯಸ್ಸಿನ ಒಳಗಿನ ಆಸಕ್ತ ಸರಕಾರಿ, ಅರೆ ಸರಕಾರಿ, ಖಾಸಗಿ ಹಾಗೂ ನಿರುದ್ಯೋಗ ಯುವಕ ಯುವತಿಯರು ಸೇರ್ಪಡೆಯಾಗಲು ಅವಕಾಶವಿದೆ. ಇದು ಸ್ವಯಂ ಸೇವಾ ಮನೋಭಾವದಿಂದ ಸೇವೆ ಸಲ್ಲಿಸುವ ದಳ. ಗೌರವಪೂರ್ವಕವಾಗಿ ಪ್ರತೀ ದಿನ 250 ರೂ.ಗಳನ್ನು ನೀಡಲಾಗುತ್ತಿದೆ. ಆಯ್ಕೆಯಾದವರಿಗೆ ಪ್ರಥಮ ಚಿಕಿತ್ಸೆ, ಅಗ್ನಿಶಮನ, ರಕ್ಷಣೆ, ನಿಸ್ತಂತು, ನಾಯಕತ್ವ, ಆಯುಧ ಬಳಕೆ, ವಿಪತ್ತು ನಿರ್ವಹಣೆ ಮೊದಲಾದವುಗಳಿಗೆ ಸಂಬಂಧಿಸಿದಂತೆ ವಿಶೇಷ ತರಬೇತಿ ಹಾಗೂ ಅರ್ಹತಾ ಪತ್ರ ನೀಡಲಾಗುವುದು ಎಂದು ತಿಳಿಸಿದರು.


50 ಲ.ರೂ. ಕಟ್ಟಡ
ತರಬೇತಿ ಹೊಂದಿದ ಗೃಹರಕ್ಷಕರನ್ನು ಪೊಲೀಸ್‌ ಇಲಾಖೆ ಹಾಗೂ ಇತರ ಸರಕಾರಿ ಇಲಾಖೆಯ ಸಮನ್ವಯದೊಂದಿಗೆ ವಿವಿಧ ಸೇವಾ ಕಾರ್ಯಗಳಲ್ಲಿ ನಿಯೋಜಿಸಲಾಗುತ್ತದೆ. ಚುನಾವಣೆ, ವಿಶೇಷ ಜನಸಂದಣಿ, ಕಾನೂನು ಸುವ್ಯವಸ್ಥೆ, ಪ್ರಕೃತಿ ವಿಕೋಪ, ಮಳೆ, ನೆರೆ, ಬೆಂಕಿ ಅನಾಹುತ ಮೊದಲಾದ ಸಂದರ್ಭಗಳಲ್ಲಿ ಇವರ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತದೆ. ಅಗ್ನಿಶಾಮಕ ಇಲಾಖೆಯ ಸಹಭಾಗಿತ್ವದೊಂದಿಗೆ ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆ ಹಾಗೂ ಸಂಘ ಸಂಸ್ಥೆಗಳ ಆಶ್ರಯದಲ್ಲಿ ವಿಪತ್ತು ನಿರ್ವಹಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಉಡುಪಿ ಅಜ್ಜರಕಾಡಿನಲ್ಲಿರುವ ಅಗ್ನಿಶಾಮಕ ಠಾಣೆಯ ಪಕ್ಕದಲ್ಲಿ 50 ಲ.ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗುತ್ತಿದ್ದು ಕಾಮಗಾರಿ ಮುಕ್ತಾಯದ ಹಂತದಲ್ಲಿದೆ ಎಂದು ಡಾ| ಪ್ರಶಾಂತ್‌ ಹೇಳಿದರು.
ದ್ವಿತೀಯ ಕಮಾಂಡೆಂಟ್‌ ರಾಜೇಶ್‌ ಕೆ.ಸಿ., ಉಪಕಮಾಂಡೆಂಟ್‌ ರಮೇಶ್‌ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com